ಮಡಿಕೇರಿ, ಫೆ. 21: ಕೊಡಗು ಸೇರಿದಂತೆ ವಿವಿಧೆಡೆಗಳಲ್ಲಿ ಶೈಕ್ಷಣಿಕ ಸಂಸ್ಥೆಗಳ ವಾರ್ಷಿಕೋತ್ಸವ, ಕ್ರೀಡಾ ಚಟುವಟಿಕೆ, ವಿದ್ಯಾರ್ಥಿಗಳ ಸಾಧನೆ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹಲವೆಡೆ ಸಾಧನೆಗಾಗಿ ಪುರಸ್ಕರಿಸಿದ ವರದಿಗಳು ಬಂದಿವೆ.ರಾಜ್ಯಮಟ್ಟದಲ್ಲಿ ಪ್ರಥಮಮಡಿಕೇರಿ: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ನಿರ್ದೇಶನಾಲಯ, ಕರ್ನಾಟಕ ಶಿಕ್ಷಣ ಸಂಶೋಧನಾ ನಿರ್ದೇಶನಾಲಯ ಹಾಗೂ ಮಂಡ್ಯ ಜಿಲ್ಲಾಡಳಿತದಿಂದ ಇತ್ತೀಚೆಗೆ ಜರುಗಿದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಇಲ್ಲಿನ ಶ್ರೀ ರಾಜೇಶ್ವರಿ ವಿದ್ಯಾಲಯದ 7ನೇ ತರಗತಿ ವಿದ್ಯಾರ್ಥಿ ಬಿ.ಎಫ್. ಲಿಭಿನ್ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಈತ ‘ರೈಸ್ ಫ್ಲೋರ್’ ಯಂತ್ರ ವಿನ್ಯಾಸದೊಂದಿಗೆ ಪುರಸ್ಕಾರ ಗಳಿಸಿದ್ದು, ಕೊಡಗಿಗೆ ಕೀರ್ತಿ ತಂದಿದ್ದಾನೆ.

ಪರೀಕ್ಷೆಗೆ ತರಬೇತಿಸುಂಟಿಕೊಪ್ಪ: ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಂಡು ಕಠಿಣ ಪರಿಶ್ರಮ ಮತ್ತು ಸತತ ಅಭ್ಯಾಸ ಮಾಡಿದರೆ ಪರೀಕ್ಷೆಯಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಲೆಕ್ಕಪರಿಶೋಧಕ ಸುಂಟಿಕೊಪ್ಪ ಜೆ.ಸಿ.ಐ. ಸಂಸ್ಥೆಯ ಮಾಜಿ ಅಧ್ಯಕ್ಷ ಸಂಪನ್ಮೂಲ ವ್ಯಕ್ತಿ ಪಿ.ಡಬ್ಲ್ಯೂ. ಫ್ರಾನ್ಸಿಸ್ ಹೇಳಿದರು.

ಸುಂಟಿಕೊಪ್ಪ ಜೆ.ಸಿ.ಐ. ಸಂಸ್ಥೆ ವತಿಯಿಂದ ಸರ್ಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ತಯಾರಿ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪರೀಕ್ಷೆಗೆ ಹೇಗೆ ಪೂರ್ವ ಸಿದ್ಧತೆ ನಡೆಸಬೇಕು ಎಂಬ ಕುರಿತು ಮಾಹಿತಿ ನೀಡಿದರು.

ಪರೀಕ್ಷೆಗೆ ಪ್ರತಿನಿತ್ಯ ವೇಳಾಪಟ್ಟಿ ತಯಾರಿಸಿಕೊಂಡು ನಿಯಮಿತವಾಗಿ ಅಭ್ಯಾಸ ಮಾಡಬೇಕು. ಪರೀಕ್ಷೆ ಬಗ್ಗೆ ಯಾವದೇ ಆತಂಕ ಮತ್ತು ಭಯ ಪಡಬಾರದು. ಹಬ್ಬದ ಆಚರಣೆ ಮಾದರಿಯಲ್ಲಿ ಪರೀಕ್ಷೆಯನ್ನು ಸಂತಸದಿಂದ ಎದುರಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ, ಕಲಿಕೆ ಎಂಬದು ನಿರಂತರ ಪ್ರಕ್ರಿಯೆ. ವಿದ್ಯಾರ್ಥಿಗಳು ಸತತ ಅಭ್ಯಾಸ ಮಾಡಿದರೆ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಜೆ.ಸಿ.ಐ. ಸಂಸ್ಥೆಯ ಅಧ್ಯಕ್ಷ ಹೆಚ್.ಆರ್. ಅರುಣ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಬೇಕು ಎಂಬ ದಿಸೆಯಲ್ಲಿ ಇಂತಹ ತರಬೇತಿ ಸಂಘಟಿಸಲಾಗಿದೆ ಎಂದರು.

ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಜೆ.ಸಿ.ಐ. ಸಂಸ್ಥೆಯ ಮಾಜಿ ಅಧ್ಯಕ್ಷೆ ಫೆಲ್ಸಿ ಡೆನಿಸ್, ಕೋಶಾಧಿಕಾರಿ ನಿರಂಜನ್, ಸದಸ್ಯರಾದ ಪಿ.ಯು. ನಂದಕುಮಾರ್, ರಂಜಿತ್ ಕುಮಾರ್ ಇತರರು ಇದ್ದರು.

ಒಲಂಪಿಯಾಡ್ ಪರೀಕ್ಷೆ

ಮಡಿಕೇರಿ: ವಿಜ್ಞಾನ ಒಲಂಪಿಯಾಡ್ ಫೌಂಡೇಶನ್ ವತಿಯಿಂದ ಇತ್ತೀಚೆಗೆ ಇಂಗ್ಲೀಷ್ ಒಲಂಪಿಯಾಡ್ ಪರೀಕ್ಷೆಯನ್ನು ನಡೆಸಲಾಗಿತ್ತು.

ಇದರಲ್ಲಿ ವೀರಾಜಪೇಟೆ ಕಾವೇರಿ ಶಾಲೆಯ ಹತ್ತೊಂಬತ್ತು ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪತ್ರ ಪಡೆದಿದ್ದಾರೆ. 3ನೇ ತರಗತಿ ವಿದ್ಯಾರ್ಥಿನಿ ಮುಕ್ಕಾಟಿರ ಮುತ್ತಮ್ಮ ಚಿನ್ನದ ಪದಕ ಮತ್ತು ಶಾಲೆಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣಳಾಗಿದ್ದಾಳೆ.

ದುಂಡಳ್ಳಿಯಲ್ಲಿ ಮಕ್ಕಳ ಗ್ರಾಮಸಭೆ

ಒಡೆಯವನಪುರ/ಆಲೂರು-ಸಿದ್ದಾಪುರ: ಇಂದಿನ ಮಕ್ಕಳು ಭವಿಷ್ಯದ ಭಾವಿ ಪ್ರಜೆಗಳಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕರ ಸಭೆಗಳಲ್ಲಿ ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಂಡರೆ ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗುತ್ತಾರೆ ಎಂದು ಶನಿವಾರಸಂತೆ ಶ್ರೀ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ಶಿಕ್ಷಕ ಕೆ.ಪಿ. ಜಯಕುಮಾರ್ ಅಭಿಪ್ರಾಯಪಟ್ಟರು.

ದುಂಡಳ್ಳಿ ಗ್ರಾ.ಪಂ. ಸಭಾಂಗಣದಲ್ಲಿ 2018ನೇ ಸಾಲಿನ ಮಕ್ಕಳ ಗ್ರಾಮಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾಹಿತಿ ನೀಡಿದರು. ಇಂದು ಸಮಾಜ ಮತ್ತು ದೇಶದಲ್ಲಿ ಉತ್ತಮ ಅಧಿಕಾರಿಯಾಗಿ, ಜನಪ್ರತಿನಿಧಿ, ಸಮಾಜ ಸೇವಕರಾಗಿ ಮಕ್ಕಳು ಸರಕಾರಿ ಶಾಲೆಗಳಲ್ಲಿ ಕಲಿತು ಮುಂದೆ ಸೇವೆ ಸಲ್ಲಿಸುವಂತೆ ಕರೆ ನೀಡಿದರು.

ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್ ಮಾತನಾಡಿ, ಮಕ್ಕಳು ಗ್ರಾಮಸಭೆಯಲ್ಲಿ ಭಾಗವಹಿಸಿ ತಮ್ಮ ಶಾಲೆಗಳ ಸಮಸ್ಯೆ, ಕುಂದು ಕೊರತೆಗಳನ್ನು ಹೇಳಿಕೊಂಡಿದ್ದಾರೆ. ಈ ಸಮಸ್ಯೆಗಳಲ್ಲಿ ಕೆಲವೊಂದನ್ನು ಗ್ರಾ.ಪಂ. ಅಧಿಕಾರದ ವ್ಯಾಪ್ತಿಯಲ್ಲಿ ಬಗೆಹರಿಸಲಾಗುವದು. ಉಳಿದ ಸಮಸ್ಯೆಗಳನ್ನು ಸಂಬಂಧಪಡುವ ಅಧಿಕಾರಿಗಳ ಗಮನಕ್ಕೆ ತರಲಾಗುವದೆಂದರು.

ಮಕ್ಕಳ ಗ್ರಾಮಸಭೆಯಲ್ಲಿ ಹೆಚ್ಚಾಗಿ ತಾವು ಓದುವ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಶ್ವಾಚಾಲಯದ ಕೊರತೆ, ಶೌಚಾಲಯ ಇದ್ದರೂ ಸಹ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಇಲ್ಲದಿರುವದು. ಕೆಲವು ಶಾಲೆಗೆ ತಡೆಗೋಡೆ ನಿರ್ಮಿಸಿದ್ದರೂ ಶಾಲೆಗೆ ಸೇರಿದ ಕೈತೋಟಕ್ಕೆ ತಡೆಗೋಡೆಯ ವ್ಯವಸ್ಥೆ ಇಲ್ಲದಿರುವದು. ಕೆಲವು ಶಾಲೆಗಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ಸರಬರಾಜು ಆಗದಿರುವದು. ಇನ್ನು ಮುಂತಾದ ಸಮಸ್ಯೆಗಳನ್ನು ಶಾಲಾ ಮಕ್ಕಳು ಗ್ರಾಮಸಭೆಯ ಮುಂದೆ ಬಿಚ್ಚಿಟ್ಟರು. ಗ್ರಾಮಸಭೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ನಮ್ಮೂರಿನ ಸರಕಾರಿ ಶಾಲೆಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸುತ್ತಿಲ್ಲ. ಹೆಚ್ಚಾಗಿ ಪೋಷಕರು ಮಕ್ಕಳನ್ನು ಪಟ್ಟಣದಲ್ಲಿರುವ ಖಾಸಗಿ ಮತ್ತು ಆಂಗ್ಲ ಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ. ಇದರಿಂದ ನಮ್ಮ ಶಾಲೆಯಲ್ಲಿ ಮಕ್ಕಳು ತುಂಬಾ ಕಡಿಮೆ ಇದ್ದಾರೆ ಎಂದು ಎಲ್ಲರ ಗಮನ ಸೆಳೆದಳು.

ಮಕ್ಕಳ ಗ್ರಾಮಸಭೆಯಲ್ಲಿ ಶನಿವಾರಸಂತೆ ಪಶು ವೈದ್ಯಾಧಿಕಾರಿ ಡಾ. ಲತ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷೆ ರೂಪ, ಪಿಡಿಓ ವೇಣುಗೋಪಾಲ್, ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು.

ಗುಡ್ಡೆಹೊಸೂರಿನಲ್ಲಿ ಮಕ್ಕಳಿಗೆ ಕಾರ್ಯಾಗಾರ

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಆಶ್ರಮ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಮತ್ತು ಮಡಿಕೇರಿ ಭಾಲಭವನ ವತಿಯಿಂದ ಎರಡು ದಿನಗಳ ಕಾರ್ಯಾಗಾರ ಏರ್ಪಡಿಸಲಾಗಿತ್ತು. ವಾರದ ಅಂತ್ಯದಲ್ಲಿ ಬರುವ ರಜೆಯಲ್ಲಿ ಮಕ್ಕಳು ಯಾವ ರೀತಿಯ ಚಟುವಟಿಕೆಯಿಂದ ರಜೆ ಕಳೆಯಬಹುದು ಎಂಬದನ್ನು ಕಾರ್ಯಾಗಾರದಲ್ಲಿ ಮಕ್ಕಳಿಗೆ ತಿಳಿಸಲಾಯಿತು. ಎರಡು ದಿನಗಳ ಕಾಲ ನಡೆದ ಕಾರ್ಯಗಾರದ ಸಮಾರೋಪ ಸಮಾರಂಭ ಇಲ್ಲಿನ ಲ್ಯಾಂಪ್ಸ್ ಸಹಕಾರ ಸಂಘದ ನಿರ್ದೇಶಕ ಬಿ.ಕೆ. ಮೋಹನ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ಮಾತನಾಡಿದ ಮೋಹನ್ ರಜೆ ದಿನಗಳನ್ನು ಓದು, ಬರಹ, ಕ್ರೀಡೆ ಮುಂತಾದ ಚಟುವಟಿಕೆಯಿಂದ ಕಳೆಯುವಂತೆ ಮಕ್ಕಳಿಗೆ ಕಿವಿಮಾತು ನುಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಉಪಸ್ಥಿತರಿದ್ದರು. ಭಾಲಭವನದ ಕಾರ್ಯಕ್ರಮ ಸಂಯೋಜಕ ಹರೀಶ್, ಕಚೇರಿ ಸಿಬ್ಬಂದಿ ಸಜೀತ್ ಹಾಗೂ ಬಾಲಭವನದ ಕಲಾವಿದ ಷಢಾಕ್ಷರಿ ಹಾಜರಿದ್ದು ಮಕ್ಕಳಿಗೆ ಹಲವು ರೀತಿಯ ಅರಿವು ಕಾರ್ಯಕ್ರಮ ನೀಡಿದರು.

ವಿದ್ಯಾರ್ಥಿ ಪೊಲೀಸ್ ಕೆಡೆಟ್ ಸಮಾರೋಪ

ಕುಶಾಲನಗರ: ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸರಕಾರ ಕಲ್ಪಿಸಿರುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಹೇಳಿದರು.

ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆದ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ಪೊಲೀಸ್ ಉಪ ಅಧೀಕ್ಷಕ ಪಿ.ಕೆ. ಮುರಳೀಧರ್ ಸ್ಟುಡೆಂಟ್ ಪೊಲೀಸ್ ಕೆಡೆಟ್‍ಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್‍ಪಿಸಿ ಅಧಿಕಾರಿ ಡಾ. ಸದಾಶಿವಯ್ಯ ಎಸ್. ಪಲ್ಲೇದ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಸ್‍ಪಿಸಿಯ ಸ್ಥಾಪನೆ, ಉದ್ದೇಶಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಎನ್. ವಸಂತ ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯೆ ಲಲಿತಾ, ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಉಪ ಪ್ರಾಂಶುಪಾಲ ಕೆ.ಎಂ.ಆಯಚ್ಚು, ಕ.ಸಾ.ಪ. ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್, ಕೂಡಿಗೆ ಕ್ರೀಡಾಶಾಲೆಯ ದೈಹಿಕ ಶಿಕ್ಷಕ ಅಂಥೋಣಿ ಡಿಸೋಜ, ತರಬೇತುದಾರ ಹಾಸನದ ಕೆ.ಎಸ್.ಆರ್.ಪಿ. ಸಿಬ್ಬಂದಿ ಎಂ.ಎ. ಜಗದೀಶ್ ಇದ್ದರು.

ಅಧಿಕಾರಿ ತುಳಸಿ ಕಾರ್ಯಕ್ರಮ ನಿರೂಪಿಸಿ, ಕೆಡೆಟ್‍ಗಳಾದ ನಿಹಾರಿಕ ತಂಡ ಪ್ರಾರ್ಥಿಸಿತು, ದೀಪಾಬಾಯಿ ಸ್ವಾಗತಿಸಿದರು, ಸವಿತಾ ವಾರ್ಷಿಕ ವರದಿ ವಾಚಿಸಿದರು.

ಇದೇ ಸಂದರ್ಭ ಎಸ್.ಎಸ್.ಎಲ್.ಸಿ.ಯ 16 ಮಂದಿ ಕೆಡೆಟ್‍ಗಳನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.

ಗೋಣಿಕೊಪ್ಪಲುವಿನಲ್ಲಿ ಹಾಕಿ

ಗೋಣಿಕೊಪ್ಪ ವರದಿ: ಮಂಗಳೂರು ವಿಶ್ವವಿದ್ಯಾನಿಲಯ ಚೆರಿಯಪಂಡ ಕುಶಾಲಪ್ಪ ಸ್ಮಾರಕ ಅಂತರ್ ಕಾಲೇಜು ಹಾಕಿ ಟೂರ್ನಿ ತಾ. 22 ಹಾಗೂ 23 ರಂದು ಕಾವೇರಿ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ವಿಶ್ವ ವಿದ್ಯಾನಿಲಯವು ಅಂತರ್ ಕಾಲೇಜು ಹಾಕಿ ಟೂರ್ನಿಯನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಪ್ರಸ್ತುತ ಸಾಲಿನಲ್ಲಿ ಕಾವೇರಿ ಕಾಲೇಜು ಟೂರ್ನಿಯ ಆತಿಥ್ಯ ವಹಿಸಿದೆ. ವಿಶ್ವವಿದ್ಯಾನಿಲಯದ 16 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದೆ. ಪಂದ್ಯಾಟವು ನಾಕೌಟ್ ಮಾದರಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಅಂತರ್ರಾಷ್ಟ್ರೀಯ ಕರಾಟೆ ಪಟು ಜಮ್ಮಡ ಜೋಯಪ್ಪ, ವಿಶ್ವ ವಿದ್ಯಾನಿಲಯದ ಮಾಜಿ ಹಾಕಿ ಆಟಗಾರ ಮುರುವಂಡ ಸಂಜು ಹಾಗೂ ಅಖಿಲ ಭಾರತ ವಿಶ್ವ ವಿದ್ಯಾನಿಲಯದ ಮಾಜಿ ಹಾಕಿ ಆಟಗಾರ್ತಿ ಕೊಟ್ಟಂಗಡ ಶೈಲ ಅವರುಗಳನ್ನು ಸನ್ಮಾನಿಸಲಾಗುವದು. ವಿಜೇತ ತಂಡಗಳಿಗೆ ಶಾಶ್ವತ ಟ್ರೋಫಿಯನ್ನು ದಾನಿಗಳಾದ ಪಟ್ಟಡ ಪೂವಣ್ಣ ಹಾಗೂ ವೈಯಕ್ತಿಕ ಪ್ರಶಸ್ತಿಗಳನ್ನು ಜಮ್ಮಡ ಜೋಯಪ್ಪ ನೀಡಲಿದ್ದಾರೆ.

ಗೋಷ್ಠಿಯಲ್ಲಿ ಮಾಜಿ ಪ್ರಾಂಶುಪಾಲೆ ಪ್ರೊ. ಅಕ್ಕಮ್ಮ, ದೈಹಿಕ ನಿರ್ದೇಶಕ ಸಂತೋಷ್, ತರಬೇತುದಾರ ಮಿನ್ನಂಡ ಜೋಯಪ್ಪ ಇದ್ದರು.

ನಾಟಕ ಪ್ರದರ್ಶನ

ಮಡಿಕೇರಿ: ಮೈಸೂರಿನ ರಂಗಾಯಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ನಾಟಕ ಮತ್ತು ಜನಪದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾವೇರಿ ಕಾಲೇಜು ಗೋಣಿಕೊಪ್ಪದ ವಿದ್ಯಾರ್ಥಿಗಳು ಭಾಗವಹಿಸಿ ದೇವರಕಾಡು ರಕ್ಷಣೆ ಕುರಿತು ದೇವಕಾಡು ಎಂಬ ನಾಟಕ ಪ್ರದರ್ಶನ ಮಾಡಿದರು. ಚಟ್ಟಂಗಡ ರವಿ ಸುಬ್ಬಯ್ಯ ರಚಿತ ನಾಟಕವನ್ನು ಮಂದೆಯಂಡ ವನಿತ್ ಕುಮಾರ್ ನಿರ್ದೇಶನ ಮಾಡಿದರು.

ಎಸ್.ಎಸ್.ಎಲ್.ಸಿ. ಪರೀಕ್ಷಾ ಪೂರ್ವ ಸಿದ್ಧತೆ

ಸಿದ್ದಾಪುರ: ಹತ್ತನೇ ತರಗತಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಎಸ್.ಎಸ್.ಎಫ್. ವತಿಯಿಂದ ಕಾನ್ಫಿಡೆಂಟ್ ಟೆಸ್ಟ್ ನಡೆಸಲಾಯಿತು. ಇಲ್ಲಿನ ಶ್ರೀ ಕೃಷ್ಣ ವಿದ್ಯಾ ಮಂದಿರದಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ನಡೆಸಲಾದ ಪರೀಕ್ಷೆಯಲ್ಲಿ 140 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸಂದರ್ಭ ನೆಲ್ಲಿಹುದಿಕೇರಿ ಆಂಗ್ಲೋ ವರ್ನಾಕ್ಯುಲರ್ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ಮಣಿ ಮಾತನಾಡಿ, ಎಸ್‍ಎಸ್‍ಎಫ್ ಸಂಸ್ಥೆಯು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಪರೀಕ್ಷೆಗಳಿಗೆ ಅನುಕೂಲಕರವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್.ಎಸ್.ಎಫ್. ಮುಖಂಡ ಜುನೈದ್ ಅಮ್ಮತ್ತಿ ಮಾತನಾಡಿ, ಎಸ್.ಎಸ್.ಎಫ್. ರಾಜ್ಯ ಸಮಿತಿ ನಿರ್ದೇಶನದಂತೆ ಕಾರ್ಯಕ್ರಮ ಹಮ್ಮಿ ಕೊಂಡಿದ್ದು, ವಿದ್ಯಾರ್ಥಿಗಳಿಗೆ ಅತ್ಯಂತ ಉಪಕಾರಿಯಾಗುತ್ತಿದೆ ಎಂದರು.

ಶ್ರೀ ಕೃಷ್ಣ ವಿದ್ಯಾ ಮಂದಿರದ ಮುಖ್ಯ ಶಿಕ್ಷಕಿ ರಸಿತ ರಾಜೀವ್, ಎಸ್.ಎಸ್.ಎಫ್. ಸಿದ್ದಾಪುರ ಅಧ್ಯಕ್ಷ ನೌಫಲ್ ಮಲ್‍ಹರಿ, ಉಪಾಧ್ಯಕ್ಷ ಶಿಹಾಬುದ್ದೀನ್ ತಂಞಳ್, ಜಿಲ್ಲಾ ಸಮಿತಿ ಸದಸ್ಯ ಮುಸ್ತಫ ನೆಲ್ಲಿಹುದಿಕೇರಿ, ಜಲಾಲ್ ಮುಸ್ಲಿಯಾರ್, ರಜಾಕ್ ಸಅದಿ, ಹಸೈನಾರ್ ಸಖಾಫಿ ಮತ್ತಿತರರು ಇದ್ದರು.

ವಿದ್ಯಾಸಂಸ್ಥೆಗೆ ಧನ ಸಹಾಯ

ಮಡಿಕೇರಿ: ಹಾತೂರು ವಿದ್ಯಾಸಂಸ್ಥೆಗೆ ದಾನಿಗಳಿಂದ ಶಾಲಾಭಿವೃದ್ಧಿ ನಿಧಿಗೆ ಧನ ಸಹಾಯ ನೀಡಲಾಗಿದೆ. ದೊಡ್ಡಮನೆ ಲಲಿತ ಸುಬ್ರಮಣಿ, ಕೆ. ಬೈಗೋಡು ರೂ. 11,000, ದೊಡ್ಡಮನೆ ಕೀರ್ತಿ ಕಿರಣ, ಕೆ. ಬೈಗೋಡು ರೂ. 10,000, ಅಪ್ಪನೆರವಂಡ ಪಿ. ಪ್ರಮೀಳ, ಬಾಳಾಜಿ ರೂ. 10,000 ಹಾಗೂ ಡಿ.ಎ. ಸುಬ್ರಮಣಿ ಮತ್ತು ಟಿ.ಕೆ. ಕುಮಾರಸ್ವಾಮಿ, ಎಸ್. ಕುಮಾರ್ಸ್ ಕ್ರಿಯೇಷನ್ಸ್ ಗೋಣಿಕೊಪ್ಪಲು ಇವರು ರೂ. 5,000 ನೀಡಿದ್ದಾಗಿ ಅಧ್ಯಕ್ಷ ದೊಡ್ಡಮನೆ ಎ. ಸುಬ್ರಮಣಿ ತಿಳಿಸಿದ್ದಾರೆ.ಶಿಕ್ಷಕರಿಗೆ ಕಾರ್ಯಾಗಾರ

ಮಡಿಕೇರಿ: ಸೈನಿಕ ಶಾಲೆ ಕೂಡಿಗೆಯಲ್ಲಿ ಶಿಕ್ಷಕರಿಗಾಗಿ ‘ಸಿಬಿಎಸ್‍ಸಿ ಮಂಡಳಿಯಿಂದ ಬದಲಾದ ಮೌಲ್ಯಮಾಪನ ಆಧರಿಸಿ ಶಿಕ್ಷಕರ ಸಾಮಥ್ರ್ಯ ವೃದ್ಧಿ’ ವಿಷಯಕ್ಕೆ ಸಂಬಂಧಿಸಿದಂತೆ ಒಂದು ದಿನದ ಕಾರ್ಯಾಗಾರವನ್ನು ಶಾಲೆಯ ಡಾ. ರಾಧಾಕೃಷ್ಣನ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಬೆಂಗಳೂರಿನ ಮಹರ್ಷಿ ಸೆಂಟರ್ ಫಾರ್ ಎಕ್ಸ್‍ಲೆನ್ಸ್ ವಿದ್ಯಾಲಯದ ಪ್ರಾಂಶುಪಾಲ ಮನೋಜ್ ಕುಮಾರ್ ತಿವಾರಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಶಾಲೆಯ ಪ್ರಬಾರ ಪ್ರಾಂಶುಪಾಲರು ಸ್ಕ್ವಾಡ್ರನ್ ಲೀಡರ್ ಡಿ. ಮ್ಯಾಥ್ಯು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜ್ಞಾನಗಂಗಾ ಶಾಲೆಯ ಶಿಕ್ಷಕಿಯರು ಪ್ರಾರ್ಥನೆಯನ್ನು ನೆರವೇರಿಸಿಕೊಟ್ಟರು. ಶಾಲೆಯ ಪ್ರಬಾರ ಪ್ರಾಂಶುಪಾಲರು ಪ್ರಾಸ್ತಾವಿಕ ನುಡಿಯಲ್ಲಿ ಪ್ರಸ್ತುತ ಕಾರ್ಯಾಗಾರದ ಪ್ರಾಮುಖ್ಯತೆಯನ್ನು ತಿಳಿಸಿದರು.

ಸೈನಿಕ ಶಾಲೆ ಕೂಡಿಗೆ ಮತ್ತು ಅತ್ತೂರಿನ ಜ್ಞಾನಗಂಗಾ ಶಾಲೆಯ 45 ಶಿಕ್ಷಕರು ಪಾಲ್ಗೊಂಡಿದ್ದರು. ಈ ಕಾರ್ಯಾಗಾರದಲ್ಲಿ 2017-18ನೇ ಶೈಕ್ಷಣಿಕ ಸಾಲಿನಿಂದ ನೂತನವಾಗಿ ಜಾರಿಗೊಳಿಸಿರುವ ಮೌಲ್ಯಮಾಪನದಲ್ಲಿ ಪಠ್ಯ, ಸಹಪಠ್ಯ ಮತ್ತು ದಾಖಲೆ ನಿರ್ವಹಣೆಯಲ್ಲಿ ಆದ ಬದಲಾವಣೆಯನ್ನಾಧರಿಸಿ ಶಿಕ್ಷಕರಿಗೆ ಮಾಹಿತಿಯನ್ನು ನೀಡಲಾಯಿತು. ಬದಲಾದ ಮೌಲ್ಯಮಾಪನದಲ್ಲಿ ಶಿಕ್ಷಕರ ಕಾರ್ಯ, ನೂತನ ಪರೀಕ್ಷಾ ಪದ್ಧತಿ, ಆಂತರಿಕ ಅಂಕಗಳ ವಿತರಣೆಯಲ್ಲಿ ಅನುಸರಿಸಬೇಕಾದ ಮಾನದಂಡಗಳ ವಿವರಣೆ, ವಿದ್ಯಾರ್ಥಿಗಳ ಪರೀಕ್ಷಾ ಭಯ ನಿವಾರಣೆ, ಪ್ರಶ್ನೆಪತ್ರಿಕೆ ತಯಾರಿಕೆ ಮೊದಲಾದ ವಿಷಯವನ್ನಾಧರಿಸಿ ತರಬೇತಿ ನೀಡಲಾಯಿತು. ಈ ಸಂದರ್ಭ ಶಿಕ್ಷಕರಿಗೆ ಗುಂಪು ಚಟುವಟಿಕೆಗಳನ್ನು ಆಯೋಜನೆ ಮಾಡುವದರ ಮೂಲಕ ತಾವು ಗ್ರಹಿಸಿದ ಅಂಶಗಳ ಪ್ರಾತ್ಯಕ್ಷಿಕೆಯನ್ನು ಮಾಡಿಸಲಾಯಿತು.

ಈ ಸಂದರ್ಭ ಶಾಲೆಯ ಹಿರಿಯ ಶಿಕ್ಷಕ ಸೂರ್ಯನಾರಾಯಣ, ಬೋಧಕ ವರ್ಗದವರು, ಜ್ಞಾನಗಂಗಾ ಶಾಲೆಯ ಪ್ರಾಂಶುಪಾಲೆ ಸರೀನ್ ಮತ್ತು ಬೋಧಕ ವರ್ಗದವರು ಹಾಜರಿದ್ದು ಕಾರ್ಯಾಗಾರದ ಪ್ರಯೋಜನ ಪಡೆದರು. ಪ್ರಸ್ತುತ ಕಾರ್ಯಾಗಾರವನ್ನು ಶಾಲೆಯ ಸಿಬಿಎಸ್‍ಸಿ ಘಟಕದ ಮೇಲ್ವಿಚಾರಕಿ ಎಸ್.ವಿ. ಶ್ರೀಲೇಖಾ ಸಂಘಟಿಸಿದ್ದರು. ಕಾರ್ಯಾಗಾರದಲ್ಲಿ ಶಿಕ್ಷಕ ವಿ. ಅಶೋಕನ್ ಸ್ವಾಗತಿಸಿ, ನಿರೂಪಿಸಿದರೆ, ಶಿಕ್ಷಕ ರಾಜ್‍ಗೋಲ್ಕರ್ ವಂದಿಸಿದರು.

ರಕ್ತದಾನ ಶಿಬಿರ

*ಗೋಣಿಕೊಪ್ಪಲು: ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್ ಮತ್ತು ಕಾವೇರಿ ಪಾಲಿಟೆಕ್ನಿಕ್ ರೆಡ್ ರಿಬ್ಬನ್ ಕ್ಲಬ್ ಸಹಯೋಗದಲ್ಲಿ ಏಡ್ಸ್ ಜಾಗೃತಿ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಉದ್ಘಾಟಿಸಿದರು. ಈ ಸಂದರ್ಭ ಮಡಿಕೇರಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಮಾತನಾಡಿ, ರಕ್ತದಾನ ಮಾಡುವದರಿಂದ ತುರ್ತು ಸಂದರ್ಭದಲ್ಲಿ ಸಾಯುವ ಸ್ಥಿತಿಯಲ್ಲಿರುವ ವ್ಯಕ್ತಿಗಳ ಜೀವ ಉಳಿಸಬಹುದು. ರಕ್ತದಾನಿಯ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು ಎಂದರು.

ಕೊಡಗು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕಿ ಕೂಪದೀರ ಸುನಿತಾ ಮುತ್ತಣ್ಣ ಏಡ್ಸ್ ಹರಡುವ ಬಗೆ ಮತ್ತು ನಿಯಂತ್ರಣದ ಬಗ್ಗೆ ಮಾತನಾಡಿದರು. ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರದಲ್ಲಿ ಕಾವೇರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಕೆ. ಶ್ರೀನಿವಾಸ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಎಂ.ಎನ್. ವನಿತ್ ಕುಮಾರ್, ಎನ್.ಪಿ. ರೀತಾನ ಹಾಗೂ ರೆಡ್ ರಿಬ್ಬನ್ ಸಂಚಾಲಕ ಎಸ್. ಪ್ರಸಾದ್ ರಾವ್ ಉಪಸ್ಥಿತರಿದ್ದರು.

ಶಿಬಿರದಲ್ಲಿ ಕಾವೇರಿ ಕಾಲೇಜು, ಕಾವೇರಿ ಪಾಲಿಟೆಕ್ನಿಕ್ ಕಾಲೇಜುವಿನ 75 ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ ವರ್ಗ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ ಸೇರಿದಂತೆ ಕೆಲವು ಸಾರ್ವಜನಿಕರು ರಕ್ತದಾನ ಮಾಡಿದರು. ಮಡಿಕೇರಿ ರಕ್ತನಿಧಿ ಕೇಂದ್ರದ ಸಿಬ್ಬಂದಿಗಳಾದ ಗಿರೀಶ್, ರಿಚಿ ಪವನ್, ತಿಲಕಮಣಿ, ಡಯಾನ ಕಾರ್ಯ ನಿರ್ವಹಿಸಿದರು.

ಕಬಡ್ಡಿ ಪಂದ್ಯಾವಳಿ

ಒಡೆಯನಪುರ: ವಿದ್ಯಾರ್ಥಿಗಳು ಕಬಡ್ಡಿ ಮುಂತಾದ ಗ್ರಾಮೀಣ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶನಿವಾರಸಂತೆಯ ಹಿರಿಯ ನಿವೃತ್ತ ದೈಹಿಕ ಶಿಕ್ಷಕ ಸಿ.ಎಲ್. ಸುಬ್ಬಯ್ಯ ಅಭಿಪ್ರಾಯಪಟ್ಟರು.

ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮತ್ತು ಭಾರತಿ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಸ್ಥಳೀಯ ಭಾರತಿ ಪ್ರಥಮ ದರ್ಜೆ ಕಾಲೇಜ್ ವತಿಯಿಂದ ಹಮ್ಮಿಕೊಂಡಿದ್ದ ಅಂತರ್ ಕಾಲೇಜುಗಳ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜು ಪ್ರಾಂಶುಪಾಲ ಎಸ್.ಎಂ. ಉಮಾಶಂಕರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳಲ್ಲಿ ಹೆಚ್ಚಿನ ಪ್ರಖ್ಯಾತಿಯನ್ನು ಹೊಂದುತ್ತಿರುವ ನಿಟ್ಟಿನಲ್ಲಿ ಕಬಡ್ಡಿಯನ್ನು ಮತ್ತಷ್ಟು ಪ್ರೋತ್ಸಾಹಿಸುವ ಉದ್ದೇಶದಿಂದ ಅಂತರ್ ಕಾಲೇಜುಗಳ ಜಿಲ್ಲಾಮಟ್ಟದ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ ಎಂದರು.

ಈ ಸಂದರ್ಭ ಭಾರತಿ ವಿದ್ಯಾಸಂಸ್ಥೆ ನಿರ್ದೇಶಕ ಮಹಮದ್ ಖನ್ನಾ, ಶನಿವಾರಸಂತೆ ಗ್ರಾ.ಪಂ. ಸದಸ್ಯರಾದ ಸರ್ದಾರ್ ಆಹಮದ್, ಹೆಚ್.ಆರ್. ಹರೀಶ್, ಕಾಲೇಜಿನ ಹಿರಿಯ ಉಪನ್ಯಾಸಕ ಇ.ಎಂ. ದಯಾನಂದ್, ಮೋಹನ್ ಮುಂತಾದವರಿದ್ದರು. ಅಂತರ್ ಕಾಲೇಜುಗಳ ಜಿಲ್ಲಾಮಟ್ಟದ ಪಂದ್ಯಾವಳಿಯಲ್ಲಿ ಶನಿವಾರಸಂತೆ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಜಿಲ್ಲೆಯಿಂದ ಒಟ್ಟು 10 ಕಾಲೇಜು ತಂಡಗಳು ಭಾಗವಹಿಸಿದ್ದವು.

ಸೇನೆಗೆ ಸೇರಲು ಕರೆ

ವೀರಾಜಪೇಟೆ: ಯುವಕರು ಸೇನಾ ಸೇರ್ಪಡೆಗೆ ಆಸಕ್ತರಾಗಬೇಕೆಂದು ಭಾರತೀಯ ಭೂಸೇನೆಯ ಹಿರಿಯ ಅಧಿಕಾರಿ ಕ್ಯಾಪ್ಟನ್ ಪೂಳಂಡ ರಕ್ಷಿತ್ ಕಾರ್ಯಪ್ಪ ಕರೆ ನೀಡಿದ್ದಾರೆ.

ಸ್ಥಳೀಯ ಸೈಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸೇನೆಗೆ ಸೇರಲು ಯುವಕರು ಹಿಂದೇಟು ಹಾಕುತ್ತಿರುವದು ಕಾಣಬಹುದಾ�