ವರದಿ-ಚಂದ್ರಮೋಹನ್ಕುಶಾಲನಗರ, ಫೆ. 21: ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹೆಸರಿನಲ್ಲಿ ಅಲ್ಲಲ್ಲಿ ನದಿ ತಟಗಳ ಅಕ್ರಮ ಒತ್ತುವರಿಯೊಂದಿಗೆ ವಾಣಿಜ್ಯ ಚಟುವಟಿಕೆಗಳು ಮಿತಿಮೀರಿ ಜೀವನದಿ ಕಾವೇರಿ ನೇರವಾಗಿ ಕಲುಷಿತಗೊಳ್ಳುತ್ತಿರುವ ಬೆಳವಣಿಗೆ ಕಂಡುಬಂದಿದೆ. ಜಿಲ್ಲೆಯ ತಲಕಾವೇರಿಯಿಂದ ಶಿರಂಗಾಲ ತನಕ ಸುಮಾರು 24 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಕಲುಷಿತ ತ್ಯಾಜ್ಯಗಳು ನೇರವಾಗಿ ನದಿ ಸೇರುವದರೊಂದಿಗೆ ನದಿಯ ನೀರಿನ ಗುಣಮಟ್ಟ ಈಗಾಗಲೆ ಕೆಳದರ್ಜೆಗೆ ಇಳಿದಿದೆ. ಈ ನಡುವೆ ಪ್ರವಾಸಿಗರ ಅತಿಯಾದ ಲಗ್ಗೆಯಿಂದ ನೀರಿನ ಗುಣಮಟ್ಟ ಮತ್ತಷ್ಟು ಕ್ಷೀಣಿಸುವ ಆತಂಕ ಎದುರಾಗುತ್ತಿದೆ.

ಕುಶಾಲನಗರ ವ್ಯಾಪ್ತಿಯ ಕಣಿವೆ, ದುಬಾರೆ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ನದಿಯಲ್ಲಿ ಸಾರ್ವಜನಿಕ ವೀಕ್ಷಣೆಗೆ ಮತ್ತು ಚಟುವಟಿಕೆಗಳಿಗೆ ಅವಕಾಶ ಲಭ್ಯವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನದಿ ಉದ್ದಕ್ಕೂ ಖಾಸಗಿ ಜಮೀನಿನ ಕೆಲವು ಮಾಲೀಕರು ಅಕ್ರಮವಾಗಿ ದಾರಿ ಮಾಡಿಕೊಡುತ್ತಿರುವ ಪ್ರಕರಣಗಳು ಕಂಡುಬಂದಿವೆ. ಕುಶಾಲನಗರದಿಂದ ದುಬಾರೆ ತನಕ ಇದೀಗ 15 ಕ್ಕೂ ಅಧಿಕ ಅಘೋಷಿತ ಸ್ಥಳಗಳಲ್ಲಿ ಕಾವೇರಿ ನದಿಗೆ ನೇರವಾಗಿ ಪ್ರವಾಸಿಗರಿಗೆ ನದಿಯಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಸ್ಥಳೀಯ ಆಡಳಿತಗಳು ನಿಯಮಬಾಹಿರವಾಗಿ ಅನುಮತಿ ನೀಡಿರುವ ಪ್ರಕರಣಗಳು ಕಂಡುಬಂದಿವೆÉ. ನದಿಯ ಎಲ್ಲೆಂದರಲ್ಲಿ ಎಗ್ಗಿಲ್ಲದೆ ಅಕ್ರಮ ರ್ಯಾಫ್ಟಿಂಗ್ ಕ್ರೀಡೆಗಳು ಅಣಬೆಯಂತೆ ಏಳುತ್ತಿರುವದು ಇತ್ತೀಚಿನ ಬೆಳವಣಿಗೆಯಾಗಿದೆ. ಈ ಮೂಲಕ ಕಾವೇರಿ ನದಿ ತಟ ಪ್ರವಾಸಿಗರು ಆಗಮಿಸುವ ಖಾಸಗಿ ಬಸ್‍ಗಳ ಬಸ್ ನಿಲ್ದಾಣವಾಗಿ ಪರಿವರ್ತನೆಯಾಗುವದರೊಂದಿಗೆ ನದಿ ನೀರಿನಲ್ಲಿ

(ಮೊದಲ ಪುಟದಿಂದ) ಅವ್ಯಾಹತವಾಗಿ ಚಟುವಟಿಕೆಗಳು ಪ್ರಾರಂಭಗೊಂಡಿವೆ. ಇದರಿಂದ ನದಿ ತಟಗಳಲ್ಲಿರುವ ಜಲಮೂಲಗಳಿಗೆ ಅಡ್ಡಿಯಾಗುವದರೊಂದಿಗೆ ಹರಿಯುತ್ತಿರುವ ನದಿ ಸಂಪೂರ್ಣ ಕಲುಷಿತಗೊಳ್ಳುತ್ತಿರುವದು ಬೆಳವಣಿಗೆಯಾಗಿದೆ. ಈ ನಡುವೆ ಪ್ರವಾಸಿಗರ ಭದ್ರತೆಗೆ ಕುತ್ತು ಉಂಟಾಗುವದರೊಂದಿಗೆ ಜೀವಹಾನಿ ನಡೆದ ಘಟನೆಗಳು ವರದಿಯಾಗಿವೆ. ನದಿ ತಟಕ್ಕೆ ನೂರಾರು ಲಾರಿಗಳಷ್ಟು ಮಣ್ಣು ತುಂಬಿ ನದಿಯ ಮೂಲಸ್ವರೂಪವನ್ನೇ ಬದಲಾಯಿಸಿದ ಚಿತ್ರಣವನ್ನು ಕೆಲವೆಡೆ ಕಾಣಬಹುದು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರಿದರೂ ಯಾವದೇ ರೀತಿ ಸ್ಪಂದನೆ ದೊರಕದೆ ಕೆಲವೆಡೆ ನದಿಯ ಅವನತಿಗೆ ಸ್ಥಳೀಯ ಗ್ರಾಮ ಪಂಚಾಯ್ತಿಗಳ ಅಧಿಕಾರಿಗಳೇ ಶಾಮೀಲಾಗುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಈ ಎಲ್ಲಾ ಬೆಳವಣಿಗೆ ನಡೆದರೂ ಸಂಬಂಧಿಸಿದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ನಗರಾಭಿವೃದ್ಧಿ ಯೋಜನೆ, ಕಂದಾಯ ಅಧಿಕಾರಿಗಳು ಸೇರಿದಂತೆ ಪ್ರವಾಸೋದ್ಯಮ ಇಲಾಖೆ ಸಂಪೂರ್ಣ ಮೌನವಹಿಸಿರುವದು ಸಂಶಯಕ್ಕೆ ಎಡೆಮಾಡಿದೆ ಎನ್ನುವದು ಈ ಭಾಗದ ನಾಗರಿಕರ ಆರೋಪವಾಗಿದೆ.

ಕುಶಾಲನಗರದ ಸಮೀಪ ಕಾವೇರಿ ನಿಸರ್ಗಧಾಮದ ಬಳಿ, ಗುಡ್ಡೆಹೊಸೂರು ವ್ಯಾಪ್ತಿಯ ಬೆಟಗೇರಿ, ತೆಪ್ಪದಕಂಡಿ, ರಂಗಸಮುದ್ರ ಮುಂತಾದ ಕಡೆ ಅಕ್ರಮವಾಗಿ ನದಿ ತಟಗಳನ್ನು ಬಳಸಿ ರಾತ್ರೋರಾತ್ರಿ ಮಣ್ಣು ತುಂಬಿಸಿ ಒತ್ತುವರಿ ಮಾಡಿರುವದು ಕಾಣಬಹುದು. ದಿನನಿತ್ಯ ಸಾವಿರಾರು ಸಂಖ್ಯೆಯ ಪ್ರವಾಸಿಗರು ಜೀವನದಿಗೆ ಲಗ್ಗೆ ಹಾಕುವದರೊಂದಿಗೆ ನದಿಯಲ್ಲಿ ವಾಣಿಜ್ಯ ಚಟುಚಟಿಕೆಯಲ್ಲಿ ತೊಡಗುವದರಿಂದ ಬಹುತೇಕ ಮಾನವ ನಿರ್ಮಿತ ತ್ಯಾಜ್ಯಗಳಿಂದ ನದಿ ನೀರು ನೇರವಾಗಿ ಕಲುಷಿತಗೊಳ್ಳುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯಗಳು ಸೇರಿದಂತೆ ಕೆಲವೆಡೆ ಶೌಚಾಲಯ ತ್ಯಾಜ್ಯಗಳು ಕೂಡ ನದಿಗೆ ಸೇರುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ನದಿ ನಡುವೆ ಅಕ್ರಮವಾಗಿ ವ್ಯಾಪಾರ ವಹಿವಾಟು ಕೇಂದ್ರಗಳು ಪ್ರಾರಂಭ ಗೊಂಡಿರುವ ನಿದರ್ಶನಗಳು ಕೂಡ ಪ್ರವಾಸಿ ತಾಣಗಳಲ್ಲಿ ಕಾಣಬಹುದು. ಹಲವೆಡೆ ಯಾಂತ್ರೀಕೃತ ಮೋಟಾರ್ ಬೋಟುಗಳಿಂದ ಹೊರಸೂಸುವ ಇಂಧನದಿಂದ ಜಲಚರಗಳು ಸಂಪೂರ್ಣ ನಾಶಗೊಳ್ಳುವದ ರೊಂದಿಗೆ ನೀರಿನ ಮೇಲೆ ತೇಲುತ್ತಿರುವ ಇಂಧನದ ಅಂಶಗಳು ಅಪಾಯಕಾರಿ ಬೆಳವಣಿಗೆಯನ್ನು ಸೃಷ್ಟಿಸುತ್ತಿವೆ. ಇದೇ ನೀರನ್ನು ಕಾವೇರಿ ತಟದ ಜನತೆ ಬಳಸುವದರೊಂದಿಗೆ ಅಪಾಯ ಎದುರಾಗುತ್ತಿದೆ.

ಇದರೊಂದಿಗೆ ನದಿಯ ನಡುವೆ ಇರುವ ನಡುಗಡ್ಡೆಗಳು ಬೋಟ್‍ಗಳ ರಭಸಕ್ಕೆ ಸಿಲುಕಿ ಬಹುತೇಕ ಕರಗಿ ನಿಲ್ಲುವದರೊಂದಿಗೆ ಮರಗಳ ಅಸ್ತಿತ್ವಕ್ಕೆ ಕೊಡಲಿ ಏಟು ಬೀಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಕಾವೇರಿ ನದಿಯಲ್ಲಿ ರ್ಯಾಫ್ಟಿಂಗ್ ಕ್ರೀಡೆ ಹೆಸರಿನಲ್ಲಿ ಅನಾರೋಗ್ಯಕರ ಬೆಳವಣಿಗೆಗಳು ನಡೆಯುತ್ತಿದ್ದು, ಜೀವಹಾನಿಗಳು ಮರುಕಳಿಸುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ತಕ್ಷಣ ಗಮನಹರಿಸ ಬೇಕು ಎನ್ನುತ್ತಾರೆ ಕುಶಾಲನಗರ ಗ್ರಾಮ ಪಂಚಾಯ್ತಿ ಸದಸ್ಯ ನಂಜುಂಡಸ್ವಾಮಿ.

ನದಿ ತಟಗಳಲ್ಲಿ ಯಾವದೇ ವಾಣಿಜ್ಯ ಚಟುವಟಿಕೆಗಳನ್ನು ನಡೆಸಬೇಕಾದಲ್ಲಿ ಹಲವು ಇಲಾಖೆಗಳ ಅನುಮತಿ ಕಡ್ಡಾಯ ಎನ್ನುತ್ತಾರೆ ಸೋಮವಾರಪೇಟೆ ತಹಶೀಲ್ದಾರ್ ಮಹೇಶ್. ಈ ಬಗ್ಗೆ ಪರಿಶೀಲನೆ ನಡೆಸಿ ನಿಯಮ ಮೀರಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಬೇಸಿಗೆ ಅವಧಿಯಲ್ಲಿ ನದಿಯಲ್ಲಿ ವಾಣಿಜ್ಯ ಚಟುವಟಿಕೆ ನಡೆಸಿದಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ ಕಾರಣ ನೀರಿನ ಗುಣಮಟ್ಟ ಕುಸಿತ ಕಾಣುವದರೊಂದಿಗೆ ಇದರ ಬಳಕೆಯಿಂದ ನಾಗರಿಕರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಈಗಾಗಲೆ ನೀರಿನ ಗುಣಮಟ್ಟದ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದಾಖಲೆ ಪ್ರಕಾರ ಪ್ರವಾಸಿ ಕೇಂದ್ರ ವ್ಯಾಪ್ತಿಯಲ್ಲಿ ನೀರಿನ ಗುಣಮಟ್ಟ ಬಹುತೇಕ ಕುಸಿತ ಉಂಟಾಗಿರುವ ಬಗ್ಗೆ ದಾಖಲೆ ಕಾಣಬಹುದು.

ಎ ದರ್ಜೆಯಲ್ಲಿ ಇರಬೇಕಾದ ನೀರಿನ ಗುಣಮಟ್ಟ ಭಾಗಮಂಡಲ ಕೆಲವೆಡೆ ಬಿ ದರ್ಜೆಗೆ ಇಳಿದಿದ್ದು ಇನ್ನು ಸಿದ್ದಾಪುರ, ಕುಶಾಲನಗರ ವ್ಯಾಪ್ತಿಯಲ್ಲಿ ಸಿ ದರ್ಜೆಗೆ ಕುಸಿದಿದೆ ಎನ್ನುತ್ತಾರೆ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಜಿ.ಆರ್. ಗಣೇಶನ್. ಜಿಲ್ಲೆಯ 5 ಕಡೆ ಕಾವೇರಿ ನದಿ ನೀರಿನ ಗುಣಮಟ್ಟ ಪರಿಶೀಲನೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಪ್ರತಿ ತಿಂಗಳು ನದಿ ನೀರಿನ ಗುಣಮಟ್ಟ ಕ್ಷೀಣಿಸುತ್ತಿರುವ ಬಗ್ಗೆ ದಾಖಲೆ ಮಾಡಲಾಗುತ್ತಿದೆ.

ನದಿ ತಟಗಳಲ್ಲಿ ಬಹುತೇಕ ಕಡೆ ಪ್ರವಾಸಿಗರಿಗೆ ಸಮರ್ಪಕವಾಗಿ ಮಾಹಿತಿ ಒದಗಿಸುವ ಫಲಕ ಇಲ್ಲದಿರುವದು ಈ ಎಲ್ಲಾ ಆವಾಂತರಕ್ಕೆ ಕಾರಣ ಎನ್ನುವದು ಸ್ಥಳೀಯರ ದೂರಾಗಿದೆ.

ಪ್ರವಾಸಿಗರಿಗೆ ಸಮರ್ಪಕವಾದ ಶೌಚಾಲಯ ವ್ಯವಸ್ಥೆ, ನದಿ ತಟಗಳಿಗೆ ಅಥವಾ ಪರಿಸರಕ್ಕೆ ಹಾನಿಯಾಗುವಂತಹ ಪ್ಲಾಸ್ಟಿಕ್ ಬಾಟಲ್‍ಗಳನ್ನು ನದಿ ತಟಗಳಿಗೆ ಒಯ್ಯುವದಕ್ಕೆ ನಿರ್ಬಂಧ ಹೇರುವದು ಹಾಗೂ ಪ್ರವಾಸಿಗರಿಗೆ ಜಿಲ್ಲಾಡಳಿತ ಮೂಲಕ ಸಮರ್ಪಕ ಮಾಹಿತಿ ಹಾಗೂ ಅರಿವು ಮೂಡಿಸುವ ಕೆಲಸವನ್ನು ಜಿಲ್ಲಾಡಳಿತ ತಕ್ಷಣ ಮಾಡಬೇಕಾಗಿದೆ ಎಂಬದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪ್ರಮುಖರ ಆಗ್ರಹವಾಗಿದೆ.

ನದಿ ಕಲುಷಿತಗೊಳಿಸುವ ಪ್ರಕರಣಗಳು ಕಂಡುಬಂದಲ್ಲಿ ಸ್ಥಳೀಯ ಅಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎನ್ನುವದು ಕೊಡಗು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರ ಪ್ರತಿಕ್ರಿಯೆ ಯಾಗಿದೆ. ಆದರೆ ಯಾವದೇ ಗ್ರಾಮಪಂಚಾಯ್ತಿ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳದಿರುವದು ಬೆಳವಣಿಗೆಯಾಗಿದೆ.

ವಾರಾಂತ್ಯ ವೇಳೆಗೆ ಕೊಡಗು ಜಿಲ್ಲೆಗೆ ಲಕ್ಷ ಸಂಖ್ಯೆಯಲ್ಲಿ ಪ್ರವಾಸಿಗರು ಲಗ್ಗೆಯಿಡುತ್ತಿದ್ದು ಈ ಬಗ್ಗೆ ಆಡಳಿತ ವ್ಯವಸ್ಥೆಗಳು ಕನಿಷ್ಟ ಕಾಳಜಿ ವಹಿಸದಿದ್ದಲ್ಲಿ ಮುಂದೊಂದು ದಿನ ಜೀವನದಿ ಕಾವೇರಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸಾಧ್ಯತೆ ಎದುರಾಗಲಿದೆ ಎನ್ನುವದು ಪರಿಸರವಾದಿಗಳ ಆತಂಕವಾಗಿದೆ.

ಎಲ್ಲೆಂದರಲ್ಲಿ ನದಿಗೆ ಅಕ್ರಮವಾಗಿ ದಾರಿ ನಿರ್ಮಿಸಿ ಕೆಲವು ವ್ಯಕ್ತಿಗಳು ಪ್ರವಾಸಿಗರಿಂದ ಹಣ ವಸೂಲಿ ಮಾಡುತ್ತಿರುವ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಮೂಲಕ ಪರಿಸರ ಸ್ನೇಹಿ ಪ್ರವಾಸೋದ್ಯಮ ಸೃಷ್ಟಿಸುವಲ್ಲಿ ಜಿಲ್ಲಾಡಳಿತ ತಕ್ಷಣ ಯೋಜನೆ ರೂಪಿಸಬೇಕಾಗಿದೆ.

ಇತ್ತೀಚಿನ ಘಟನೆಗಳ ಹಿನ್ನಲೆಯಲ್ಲಿ ದುಬಾರೆ ವ್ಯಾಪ್ತಿಯಲ್ಲಿ ಪೊಲೀಸ್ ಹೊರ ಠಾಣೆಯೊಂದನ್ನು ಆರಂಭಿಸಲು ಇಲಾಖೆ ಮುಂದಾಗಿದೆ ಎಂದು ಎಸ್.ಪಿ. ರಾಜೇಂದ್ರ ಪ್ರಸಾದ್ ಅವರು ತಿಳಿಸಿದ್ದಾರೆ.