ಮಡಿಕೇರಿ, ಫೆ.21 : ವೀರಾಜಪೇಟೆ ತಾಲೂಕಿನ ಹೆಬ್ಬಾಲೆ ದೇವರಪುರ ಗ್ರಾಮದಲ್ಲಿರುವ ಪರಿಶಿಷ್ಟ ಪಂಗಡದ ಸುಮಾರು 150 ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿ ತಾ.23 ರಿಂದ ನಗರದ ಗಾಂಧಿ ಮೈದಾನದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ದಲಿತ ಸಂಘರ್ಷ ಸಮಿತಿ ನಿರ್ಧರಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ವಿಭಾಗೀಯ ಸಂಚಾಲಕ ಹೆಚ್.ಎಸ್.ಕೃಷ್ಣಪ್ಪ ಸ್ವಾತಂತ್ರ್ಯ ಪೂರ್ವದಿಂದಲೂ ಗ್ರಾಮದ ಸರ್ವೆ ಸಂ.8/1 ಹಾಗೂ 8/2 ರಲ್ಲಿ ವಾಸಿಸುತ್ತಿರುವ ದುರ್ಬಲರು ಕೃಷಿ ಕಾರ್ಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಪ್ರದೇಶದಲ್ಲಿ 150 ಕ್ಕೂ ಹೆಚ್ಚಿನ ಕುಟುಂಬಗಳು ವಾಸಿಸುತ್ತಿದ್ದರೂ ಇಲ್ಲಿಯವರೆಗೆ ಸರಕಾರ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಯಾವದೇ ಮೂಲಭೂತ ಸೌಲಭ್ಯಗಳನ್ನು ನೀಡಿಲ್ಲವೆಂದು ಆರೋಪಿಸಿದರು. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಖಂಡಿಸಿ ತಾ.23 ರಿಂದ ಧರಣಿ ಸತ್ಯಾಗ್ರಹ ಆರಂಭಿಸುತ್ತಿದ್ದು, ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರೆಯಲಿದೆ ಎಂದರು.
ಸಮಿತಿಯ ಜಿಲ್ಲಾ ಸಂಚಾಲಕರಾದ ಹೆಚ್.ಆರ್.ಪರಶುರಾಮ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಕಳೆದಿದ್ದರೂ ಜಿಲ್ಲಾಡಳಿತಕ್ಕೆ ಕನಿಷ್ಟ ಕುಡಿಯುವ ನೀರನ್ನು ನೀಡಲು ಸಾಧ್ಯವಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಅನೇಕ ವರ್ಷಗಳಿಂದ ಈ ಹಾಡಿ ನಿವಾಸಿಗಳ ಸಂಕಷ್ಟದ ಬದುಕನ್ನು ಪ್ರತಿಭಟನೆಗಳ ಮೂಲಕ ಆಳುವವರ ಗಮನ ಸೆಳೆಯಲಾಗಿದೆ. ಆದರೆ ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಮಾತ್ರ ದುರ್ಬಲರನ್ನು ಬಳಸಿಕೊಳ್ಳುತ್ತಿರುವ ಜನಪ್ರತಿನಿಧಿಗಳು ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ಗಳಿದ್ದರೂ ಮೂಲಭೂತ ಸೌಲಭ್ಯ ನೀಡುತ್ತಿಲ್ಲವೆಂದು ಆರೋಪಿಸಿದರು.
ದೇವಾಲಯ ಸಮಿತಿ ಪ್ರಕರಣದ ಕುರಿತು ನ್ಯಾಯಾಲಯದ ಮೆಟ್ಟಿಲೇರಿದ್ದು, ಅತಂತ್ರ ಸ್ಥಿತಿಯಲ್ಲಿ ವಾಸಿಸುತ್ತಿರುವ ಬಡವರ ಪರ ಕಾನೂನು ಹೋರಾಟ ನಡೆಸಬೇಕಾದ ಸರಕಾರ ಮೌನಕ್ಕೆ ಶರಣಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಾ. 23 ರಿಂದ ಆರಂಭಗೊಳ್ಳುವ ಅಹೋರಾತ್ರಿ ಧರಣಿಗೂ ಮೊದಲು ನಗರದ ಮುಖ್ಯ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವದು. ಧರಣಿಯಲ್ಲಿ 400 ಮಂದಿ ಪಾಲ್ಗೊಳ್ಳುತ್ತಿದ್ದು, ಪ್ರತಿದಿನ 50 ರಿಂದ 60 ಮಂದಿ ಧರಣಿ ಸ್ಥಳದಲ್ಲಿ ತಂಗಲಿದ್ದಾರೆ ಎಂದರು. ಜಿಲ್ಲಾಧಿಕಾರಿಗಳು ಲಿಖಿತ ರೂಪದಲ್ಲಿ ಭರವಸೆ ನೀಡುವಲ್ಲಿಯವರೆಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಂಚಾಲಕ ಬಿ.ಆರ್.ರಜನಿಕಾಂತ್, ಪಿ.ಜೆ.ಸುಬ್ರಮಣಿ, ವೀರಾಜಪೇಟೆ ತಾಲೂಕು ಸಂಚಾಲಕ ಹೆಚ್.ಎಲ್.ಕುಮಾರ್ ಹಾಗೂ ಸಂಘಟನಾ ಸಂಚಾಲಕ ಉಣ್ಣಿಕೃಷ್ಣ ಉಪಸ್ಥಿತರಿದ್ದರು.