ಮಡಿಕೇರಿ, ಫೆ. 20: ಕ್ರೀಡೆಯ ತವರು.., ಅದರಲ್ಲೂ ಹಾಕಿ ಕಲಿಗಳ ಬೀಡು ಎಂದೇ ಖ್ಯಾತಿವೆತ್ತಿರುವ ಪುಟ್ಟ ಕೊಡಗು ಜಿಲ್ಲೆ ಸಾಕಷ್ಟು ಮಂದಿ ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಹಾಕಿ ಆಟಗಾರರನ್ನು ಕೊಡುಗೆಯಾಗಿ ನೀಡಿದೆ. ಭಾರತ ತಂಡದ ನಾಯಕತ್ವದ ಖಲಿಗಳು ವಿಶ್ವಕಪ್ನಲ್ಲಿ ಚಿನ್ನ ಗೆದ್ದಂತಹ ಅಪ್ರತಿಮ ಆಟಗಾರರನ್ನು ನೀಡಿರುವ ಹೆಗ್ಗಳಿಕೆ ನಮ್ಮದು. ಸೌಲಭ್ಯಗಳ ಕೊರತೆಯ ನಡುವೆಯೂ ಇಲ್ಲಿನ ಕ್ರೀಡಾಪಟುಗಳು ತಮ್ಮ ಪರಿಶ್ರಮದಿಂದಲೇ ಸಾಧನೆ ತೋರಿದ್ದಾರೆ. ಈ ಸಾಧನೆ- ಸಾಧಕರೊಂದಿಗೆ ಇದೀಗ ಕೊಡಗಿನ ಹಾಕಿ ತಂಡವೊಂದು ರಾಷ್ಟ್ರಮಟ್ಟದಲ್ಲಿ ಸಾಧನೆ ತೋರುವದರೊಂದಿಗೆ ಕೊಡಗು ಹಾಗೂ ಕರ್ನಾಟಕಕ್ಕೆ ಕೀರ್ತಿ ತಂದಿದೆ. ಹಾಕಿ ಕೂರ್ಗ್ನ ಬಾಲಕಿಯರ ತಂಡ ಇದೇ ಪ್ರಥಮ ಬಾರಿಗೆ ಅಸ್ಸಾಂನಲ್ಲಿ ನಡೆದ ರಾಷ್ಟ್ರಮಟ್ಟದ ಸಬ್ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸುವದರೊಂದಿಗೆ ಸಾಧನೆ ತೋರಿದ್ದು, ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಹೊತ್ತು ತಂದಿದೆ.
ಹಾಕಿಯ ತವರೂರು ಎಂದೇ ಕರೆಸಿಕೊಳ್ಳುವ ಜಿಲ್ಲೆಯಲ್ಲಿ ಈವರೆಗೆ ಇಲ್ಲಿನ ಹಾಕಿ ಆಟಗಾರರಿಗೆ ರಾಜ್ಯಮಟ್ಟದಲ್ಲಿ ಭಾಗವಹಿಸಲು ಕೂಡ ಅವಕಾಶವಿರಲಿಲ್ಲ. ಆದರೆ ಇದೀಗ ಹಾಕಿ ಇಂಡಿಯಾದೊಂದಿಗೆ ಹಾಕಿ ಕೂರ್ಗ್ ವಿಲೀನಗೊಂಡ ಬಳಿಕ ಆಟಗಾರರಿಗೆ ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ಅವಕಾಶ ಲಭ್ಯವಾಗಿದೆ. ಕಳೆದ ಮೂರು ವರ್ಷಗಳಿಂದ ಹಾಕಿ ಕೂರ್ಗ್ನ ಬಾಲಕರು, ಪುರುಷರು, ಬಾಲಕಿಯರು, ಮಹಿಳೆಯರ ತಂಡಗಳು 8 ಬಾರಿ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದೆಯಾದರೂ ಇದೇ ಪ್ರಥಮ ಬಾರಿಗೆ ತಂಡ ಫೈನಲ್ ಪ್ರವೇಶಿಸಿದೆ. ಪರಿಶ್ರಮ ಹಾಗೂ ಪ್ರಯತ್ನದೊಂದಿಗೆ ಆಟವಾಡಿದ ಆಟಗಾರ್ತಿಯರು ಬೆಳ್ಳಿ ಬಟ್ಟಲನ್ನು ತಮ್ಮದಾಗಿಸಿಕೊಂಡಿದ್ದಾರೆ. ಚೊಚ್ಚಲ ಗೆಲುವಿನ ಹಿಂದೆ ಶ್ರಮಿಸಿದವರ ಮನದಾಳದ ನುಡಿ ಇಲ್ಲಿದೆ...
ದೊಡ್ಡ ಸಾಧನೆ- ಕಾಳಯ್ಯ
ಪುಟ್ಟ ಜಿಲ್ಲೆಯ ಹಾಕಿ ಕೂರ್ಗ್ ತಂಡ ರಾಷ್ಟ್ರಮಟ್ಟದಲ್ಲಿ ಬೆಳ್ಳಿ ಪದಕ ಗೆದ್ದಿರುವದು ಬಹುದೊಡ್ಡ ಸಾಧನೆಯಾಗಿದೆ ಎಂದು ಹಾಕಿಕೂರ್ಗ್ನ ಅಧ್ಯಕ್ಷ, ವಿಶ್ವಕಪ್ನಲ್ಲಿ ಚಿನ್ನಗೆದ್ದ ಪೈಕೇರ ಕಾಳಯ್ಯ ಹರ್ಷ ವ್ಯಕ್ತಪಡಿಸಿದರು. ನಮ್ಮಲ್ಲಿ ಪ್ರತಿಭೆಗಳಿದ್ದಾರೆ. ಅವರುಗಳನ್ನು ಪ್ರೋತ್ಸಾಹಿಸುವದು ನಮ್ಮ ಕೆಲಸ. 16 ಹಾಗೂ 19 ವರ್ಷದೊಳಗಿನವರಿಗೆ ಜಿಲ್ಲೆಯಲ್ಲಿಯೇ ತರಬೇತಿ ನೀಡುತ್ತೇವೆ. ಪೊನ್ನಂಪೇಟೆಯ ಚಂಗಪ್ಪ ಅವರು ಇದರ ಉಸ್ತುವಾರಿಯಾಗಿದ್ದಾರೆ. ಮುಂದಿನ ಏಪ್ರಿಲ್ನಲ್ಲಿ 19 ವರ್ಷದೊಳಗಿನ ಬಾಲಕರು ಹಾಗೂ ಬಾಲಕಿಯರ ಪಂದ್ಯಾವಳಿ ಭೋಪಾಲ್ನಲ್ಲಿ ನಡೆಯಲಿದ್ದು, ಎರಡು ತಂಡಗಳನ್ನು ಕಳುಹಿಸಿಕೊಡಲಾಗುವದೆಂದರು.
ತೃಪ್ತಿ ತಂದಿದೆ- ಲವ
ಕೊಡಗಿನ ಮಕ್ಕಳಿಗೆ ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ. ಇದೀಗ ಹಾಕಿ ಇಂಡಿಯಾದೊಂದಿಗೆ ವಿಲೀನಗೊಂಡ ಬಳಿಕ ಉತ್ತಮ ಅವಕಾಶ ಸಿಗುತ್ತಿದ್ದು, ಕೊಡಗು ತಂಡ ಈ ಬಾರಿ ಫೈನಲ್ ಪ್ರವೇಶಿಸಿ ಬೆಳ್ಳಿ ಗೆದ್ದಿರುವದು ತೃಪ್ತಿ ತಂದಿದೆ ಎಂದು ಹಾಕಿ ಕೂರ್ಗ್ನ ಕಾರ್ಯದರ್ಶಿ ಪಳಂಗಂಡ ಲವ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಸೆಮಿಫೈನಲ್ ಪ್ರವೇಶಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ ಎಂದರು. ಹಾಕಿ ಇಂಡಿಯಾ ನಿಯಮದಂತೆ ಕೊಡಗು- ಬೆಂಗಳೂರು, ಕರ್ನಾಟಕ ಹೀಗೆ ಆಟಗಾರರನ್ನು ಆಯ್ಕೆ ಮಾಡಿ ತಂಡ ರಚನೆ ಮಾಡಲಾಗುತ್ತದೆ. ಆಯ್ಕೆಯಾದ 18 ಮಂದಿ ಆಟಗಾರರನ್ನು ಒಂದೇ ಕಡೆ ತರಬೇತಿ ನೀಡಲಾಗುತ್ತದೆ. ವಸತಿ, ಊಟದ ವ್ಯವಸ್ಥೆ ಮಾಡಬೇಕಾಗುತ್ತದೆ. ಅಂದಾಜು 1.50 ಲಕ್ಷದಷ್ಟು ವೆಚ್ಚವಾಗಲಿದ್ದು, ಎಲ್ಲವನ್ನೂ ಹಾಕಿ ಕೂರ್ಗ್ ಭರಿಸುತ್ತದೆ.
ತಂಡಕ್ಕೆ ಆಯ್ಕೆ ಮಾಡುವ ಸಂದರ್ಭ ಸಾಕಷ್ಟು ಒತ್ತಡಗಳಿರುತ್ತವೆ. ಆದರೆ ಒತ್ತಡ ಹೇರುವವರು ಖರ್ಚು- ವೆಚ್ಚದ ಬಗ್ಗೆ ಯಾರೂ ಕೇಳುವದಿಲ್ಲ. ಹಾಕಿ ಕೂರ್ಗ್ ಅಧ್ಯಕ್ಷ ಪೈಕೇರ ಕಾಳಯ್ಯ ಅವರೇ ಕಾಳಜಿ ವಹಿಸಿ ಆಟಗಾರರ ಭವಿಷ್ಯಕ್ಕೋಸ್ಕರ ಬಹುಪಾಲು ವೆಚ್ಚವನ್ನು ತಾವೇ ಭರಿಸುತ್ತಾರೆ. ಮತ್ತೆ ಕೆಲವರು ಸಹಾಯ ಮಾಡುತ್ತಾರೆಂದು ಲವ ಹೇಳುತ್ತಾರೆ. ಈ ಬಾರಿ ತಂಡವನ್ನು ಅಂತರ್ರಾಷ್ಟ್ರೀಯ ತರಬೇತುದಾರರಾದ ಬುಟ್ಟಿಯಂಡ ಚಂಗಪ್ಪ, ಕುಪ್ಪಂಡ ಸುಬ್ಬಯ್ಯ ಅವರುಗಳು ಸಜ್ಜುಗೊಳಿಸಿದ್ದರು. ಅಸ್ಸಾಂನಲ್ಲಿ ನಡೆದ ಪಂದ್ಯಾವಳಿಗೆ ತರಬೇತುದಾರರಾಗಿ ವಿನೋದ್ ಕುಮಾರ್ ಹಾಗೂ ತಂಡದ ವ್ಯವಸ್ಥಾಪಕಿಯಾಗಿ ಕುಡೆಕಲ್ ಸವಿತಾ ಅವರುಗಳು ಕರೆದೊಯ್ದಿದ್ದು, ಯಶಸ್ವಿಯಾಗಿ ಮುನ್ನಡೆಸಿದ್ದಾರೆಂದು ಶ್ಲಾಘಿಸಿದರು.
ಭರವಸೆ ಇತ್ತು- ಚಂಗಪ್ಪ
ಕಳೆದ ಬಾರಿ ತಂಡ ಮೂರನೇ ಸ್ಥಾನ ಬಂದಿತ್ತು. ಈ ಬಾರಿ ಮೊದಲನೇ ಸ್ಥಾನ ಬರುತ್ತದೆಂಬ ನಂಬಿಕೆ ಇತ್ತು. ತಂಡ ಕೂಡ ಉತ್ತಮವಾಗಿತ್ತು. ಆದರೂ ಎರಡನೇ ಸ್ಥಾನ ಬಂದಿದೆ. ನಾವು ನೀಡಿದ ತರಬೇತಿಗೆ ಫಲ ಸಿಕ್ಕಿದೆ ಎಂದು ತರಬೇತುದಾರರಾದ ಬುಟ್ಟಿಯಂಡ ಚಂಗಪ್ಪ ತಮ್ಮ ಸಂತಸ ಹಂಚಿಕೊಂಡರು. ಈ ಬಾರಿ ತಂಡವನ್ನು ಆಯ್ಕೆ ಮಾಡುವ ಸಂದರ್ಭ ಪೊನ್ನಂಪೇಟೆ ಹಾಸ್ಟೆಲ್ ಮಕ್ಕಳು ಮಾತ್ರ ತಯಾರಿಯಲ್ಲಿದ್ದರು. ಸಾಯಿ ಹಾಗೂ ಕೂಡಿಗೆ ಮಕ್ಕಳು ಪರೀಕ್ಷೆ ಹಿನ್ನೆಲೆಯಲ್ಲಿ ತಯಾರಿರಲಿಲ್ಲ. ಕೊನೆಯ 10 ದಿನಗಳ ತರಬೇತಿಯಲ್ಲಿ ತಂಡವನ್ನು ತಯಾರಿ ಮಾಡಲಾಗಿದೆ. ಆದರೂ ಮಕ್ಕಳು ಉತ್ತಮ ಪ್ರದರ್ಶನ ನೀಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪಂದ್ಯಾವಳಿಯಲ್ಲಿ ಇಂಡಿಯಾ ಕ್ಯಾಂಪ್ಗೆ ಹಾಕಿ ಕೂರ್ಗ್ನ 8 ಮಂದಿ ಆಟಗಾರ್ತಿಯರು ಆಯ್ಕೆಯಾಗಿರುವದು ಒಂದು ದೊಡ್ಡ ಸಾಧನೆಯಾಗಿದೆ. ಈ ಬಾರಿ ತಂಡ ಕಳುಹಿಸುವಲ್ಲಿ ಎಲ್ಲಾ ರೀತಿಯ ನೆರವು ನೀಡಿದ ದಾನಿಗಳನ್ನು ನೆನೆಸಿಕೊಳ್ಳಬೇಕಾಗುತ್ತದೆ. ಅವರ ಸಹಕಾರದಿಂದಾಗಿ ಯಾವದೇ ತೊಂದರೆ ಆಗಿಲ್ಲ. ರೈಲುಮಾರ್ಗ ಮಾತ್ರ ಟಿಕೆಟ್ ಅಲಭ್ಯತೆಯಿಂದ ಕೊಂಚ ದೂರದ ಪ್ರಯಾಣವಾಯಿತು. ಮುಂದಕ್ಕೆ ಇನ್ನೂ ಉತ್ತಮವಾದ ತಂಡ ರಚಿಸಿ ಗೆಲುವು ಸಾಧಿಸಲು ಪ್ರಯತ್ನಿಸಲಾಗುವದೆಂಬ ಅಭಿಲಾಷೆ ವ್ಯಕ್ತಪಡಿಸಿದರು.
ಹೊಂದಾಣಿಕೆ ಆಟ- ವಿನೋದ್
ಈ ಬಾರಿಯ ತಂಡ ಉತ್ತಮವಾಗಿತ್ತು. ಒಬ್ಬರಿಗೊಬ್ಬರು ಹೊಂದಾಣಿಕೆಯೊಂದಿಗೆ ಎಲ್ಲಾ 18 ಮಂದಿ ಆಟಗಾರ್ತಿಯರು ಕೂಡ ಉತ್ತಮ ಪ್ರದರ್ಶನ ತೋರಿದ್ದಾರೆ. ಮೊದಲ ಬಾರಿಗೆ ಒಂದು ಇತಿಹಾಸ ಸೃಷ್ಟಿಸಿದ್ದಾರೆ ಎಂದು ತರಬೇತುದಾರರಾಗಿ ತಂಡವನ್ನು ಕೊಂಡೊಯ್ದಿದ್ದ ಎಂ.ವಿ. ವಿನೋದ್ ಕುಮಾರ್ ಅಭಿಪ್ರಾಯಿಸಿದರು. ಮುಖ್ಯ ತರಬೇತುದಾರರಾದ ಚಂಗಪ್ಪ, ಸುಬ್ಬಯ್ಯ, ರೋಷನ್, ಸಾಯಿ ಕೇಂದ್ರದ ಚತುರ್ವೇದಿ, ಬಿಂದಿಯಾ ಅವರುಗಳ ಸಹಕಾರ ಸಾಧನೆಗೆ ಸ್ಫೂರ್ತಿಯಾಗಿತ್ತು. ತಂಡದ ಎಲ್ಲಾ ಮಕ್ಕಳನ್ನು ಆತ್ಮೀಯತೆಯಿಂದ ನೋಡಿಕೊಂಡು ಹುರಿದುಂಬಿಸುತ್ತಿದ್ದ ತಂಡದ ವ್ಯವಸ್ಥಾಪಕರಾಗಿದ್ದ ಕುಡೆಕಲ್ ಸವಿತಾ ಹಾಗೂ ಮಾಧ್ಯಮದವರ ಸಹಕಾರ ಮತ್ತಷ್ಟು ಹುಮ್ಮಸ್ಸು ನೀಡಿದೆ. ಅದರಲ್ಲೂ ‘ಶಕ್ತಿ’ ಸಲಹಾ ಸಂಪಾದಕ ಆನಂತ ಶಯನ ಅವರು ತಂಡವನ್ನು ಚೆನ್ನೈನಲ್ಲಿ ಬರಮಾಡಿಕೊಂಡು ಮಕ್ಕಳಿಗೆ ಪಾನೀಯ ನೀಡಿ ಸತ್ಕರಿಸಿದ್ದು, ಖುಷಿ ತಂದಿತು. ಮೈಸೂರಿನಲ್ಲಿ ಅಲ್ಲಿನ ಕೊಡವ ಸಮಾಜ ಕಲ್ಚರಲ್ ಅಂಡ್ ರಿಕ್ರಿಯೇಷನ್ ಕ್ಲಬ್ನವರು ಉಪಹಾರದ ವ್ಯವಸ್ಥೆ ಮಾಡಿ ಸತ್ಕರಿಸಿದ್ದನ್ನು ಮರೆಯಲಾಗದೆಂದರು.
ಸೆಮಿಫೈನಲ್ ಹಂತದಿಂದ ಪಂದ್ಯ ಕಷ್ಟವಿತ್ತು. ಉತ್ತರ ಭಾರತದವರು ಬಲಾಢ್ಯರು. ಆದರೂ ನಮ್ಮ ಮಕ್ಕಳು ಆಡಿದ್ದಾರೆ. ಟರ್ಫ್ನಲ್ಲಿ ಅಭ್ಯಾಸವಿರುವವರು ಅಸ್ಸಾಂನಲ್ಲಿ ಮಣ್ಣಿನ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆಂದರು. ಕೊಡಗಿನಿಂದ ಹೋಗಿ ಅಸ್ಸಾಂನ ಜನತೆಯ ಮನಸ್ಸನ್ನು ಗೆದ್ದಿದ್ದಾರೆ. ಅಸ್ಸಾಂನವರು ನಮಗೆ ಫೈನಲ್ಸ್ನಲ್ಲಿ ಬೆಂಬಲಿಸಿದ್ದನ್ನು ಮರೆಯಲಾಗದು ಎಂದರು.
ಆರಂಭದಿಂದಲೇ ದೆಹಲಿ ವಿರುದ್ಧ 6-0, ಗುಜರಾತ್ ವಿರುದ್ಧ 10-0 ಹಾಗೂ ಮುಂಬೈ ವಿರುದ್ಧ 5-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫೈನಲ್ಗೇರಿತ್ತು. ಫೈನಲ್ನಲ್ಲಿ ಆತಿಥೇಯ ಹಾಕಿ ಅಸ್ಸಾಂ ವಿರುದ್ಧ 1-0 ಗೋಲಿನಿಂದ ಸೋಲನ್ನನುಭವಿಸಿ ಬೆಳ್ಳಿ ಕಿರೀಟ ಮುಡಿಗೇರಿಸಿಕೊಂಡಿತು. ಅಲ್ಲದೆ, ಈ ಪಂದ್ಯಾವಳಿ ಮೂಲಕ ‘ಬಿ’ ಡಿವಿಜನ್ ಪಂದ್ಯಾವಳಿಯಿಂದ ‘ಎ’ ಡಿವಿಜನ್ಗೆ ಬಡ್ತಿ ಪಡೆದುಕೊಂಡಿದೆ. ಇದರೊಂದಿಗೆ ಪಂದ್ಯಾವಳಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ತಂಡದ ನಾಯಕಿ ಪಾರ್ವತಿ, ನೇತ್ರಾವತಿ (ಗೋಲ್ ಕೀಪರ್), ಶಿಲ್ಪ, ಕಾವ್ಯ, ಪ್ರಗತಿ, ಅಪ್ಸರ, ಆದೀರ, ಜಾಹ್ನವಿ ಭಾರತೀಯ ಸಬ್ಜೂನಿಯರ್ ಕ್ಯಾಂಪ್ಗೆ ಆಯ್ಕೆಯಾಗಿರುವದು ಹೆಮ್ಮೆಯ ವಿಷಯ. ಹಾಕಿಕೂರ್ಗ್ನೊಂದಿಗೆ ಕ್ರೀಡಾಪ್ರೇಮಿಗಳು, ಜಿಲ್ಲಾಡಳಿತ, ಜನಪ್ರತಿನಿಧಿಗಳು ಕೈಜೋಡಿಸಿದಲ್ಲಿ ಕೊಡಗಿನ ಹಾಕಿ ಖಲಿಗಳು ಅಂತರ್ರಾಷ್ಟ್ರೀಯ ಮಟ್ಟದಲ್ಲೂ ನಮ್ಮ ಕೀರ್ತಿ ಪತಾಕೆ ಹಾರಿಸಬಲ್ಲರು. -ಕುಡೆಕಲ್ ಸಂತೋಷ್.ಉತ್ತಮ ತಂಡ
‘ಈ ಬಾರಿಯ ತಂಡ ಚೆನ್ನಾಗಿತ್ತು. ಎಲ್ಲರೂ ಚೆನ್ನಾಗಿ ಆಡಿದ್ದಾರೆ. ಫೈನಲ್ವರೆಗೆ ತಲಪಿದ್ದು, ನಿಜಕ್ಕೂ ಖುಷಿಯಾಯಿತು. ಅದರಲ್ಲೂ ತಂಡ ಮುನ್ನಡೆಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಮಣ್ಣಿನ ಮೈದಾನವಾದ್ದರಿಂದ ಸ್ವಲ್ಪ ಕಷ್ಟವಾಯಿತು. ಟರ್ಫ್ ಆಗಿದ್ದರೆ ನಾವೇ ಗೆಲ್ಲುತ್ತಿದ್ದೆವು. ಕೋಚ್ ಹಾಗೂ ಟೀಂ ಮ್ಯಾನೇಜರ್ ತುಂಬಾನೆ ಸಪೋರ್ಟ್ ಮಾಡಿದರು. ನೆಕ್ಸ್ಟ್ ಟೈಂ ಖಂಡಿತಾ ಗೆಲ್ತೀವಿ’.
-ಕೆಚ್ಚೆಟ್ಟಿರ ಪಾರ್ವತಿ, ನಾಯಕಿ.
ಗೋಲು ಮಾಡಿದ್ದೆ ಖುಷಿ
‘ಫಸ್ಟ್ ಟೈಂ ಫೈನಲ್ಗೆ ಹೋಗಿದ್ದು ತುಂಬಾ ಖುಷಿಯಾಗಿದೆ. ಅದ್ರಲ್ಲೂ ಗೋಲು ಮಾಡಿದ್ದು, ತಂಡದ ವೈಸ್ ಕ್ಯಾಪ್ಟನ್ ಆಗಿ ಜವಾಬ್ದಾರಿ ನಿಭಾಯಿಸಿದ ತೃಪ್ತಿ ಇದೆ. ಎಲ್ಲರೂ ಚೆನ್ನಾಗಿ ಆಟ ಆಡಿದ್ರು, ಕೋಚ್, ಮ್ಯಾನೇಜರ್ ತುಂಬಾನೇ ಎಂಕರೇಜ್ ಮಾಡಿದ್ರು. ಚೆನ್ನಾಗಿ ನೋಡ್ಕೊಂಡ್ರು. ತುಂಬಾ ಎಂಜಾಯ್ ಕೂಡ ಮಾಡಿದ್ವಿ. ಇಂಡಿಯನ್ ಕ್ಯಾಂಪ್ಗೆ ಸೆಲೆಕ್ಟ್ ಆಗಿದ್ದು, ಇನ್ನೂ ಖುಷಿಯಾಗ್ತಿದೆ. ಅಲ್ಲಿಯೂ ಸೆಲೆಕ್ಟ್ ಆದ್ರೆ ಇನ್ನಷ್ಟು ಖುಷಿಯಾಗುತ್ತೆ.
-ಪೊನ್ನಿಮಾಡ ಶಿಲ್ಪ, ಉಪನಾಯಕಿ.
ಶಕ್ತಿಮೀರಿ ಪ್ರಯತ್ನ
‘ಲೀಗ್ ಹಂತದ ಎಲ್ಲಾ ಪಂದ್ಯಾವಳಿಗಳಲ್ಲೂ ಯಾವದೇ ಗೋಲುಗಳಾಗದಂತೆ ತಡೆದೆ. ಆದರೆ ಸೆಮಿಫೈನಲ್ನಲ್ಲಿ ಸ್ವಲ್ಪ ಕಷ್ಟವಾಯಿತು. ಶೂಟೌಟ್ ಸಂದರ್ಭ ಸೋಲುತ್ತೇವೆಂಬ ಭಯದಿಂದ ಕಣ್ಣೀರು ಬಂತು. ಅಂತೂ ಗೆದ್ದೆವು. ಆದರೆ ಫೈನಲ್ನಲ್ಲಿ ಇನ್ನೂ ಕಷ್ಟವಿತ್ತು. ದುರದೃಷ್ಟವಶಾತ್ 1 ಗೋಲಿನಿಂದ ಸೋತುಬಿಟ್ಟೆವು. ಎಲ್ಲ ಆಟಗಾರರು ಸಹಕಾರ ನೀಡಿದರು’
-ನೇತ್ರಾವತಿ, ಗೋಲ್ಕೀಪರ್.
ವಿನ್ ಆಗ್ತೀವಿ ಅಂದ್ಕೊಂಡ್ವಿ
‘ಫಸ್ಟ್ ಟೈಂ ಫೈನಲ್ಗೆ ಬಂದಿದ್ದು, ಲಾಸ್ಟ್ ಟೈಂ ಥರ್ಡ್ ಪ್ಲೇಸ್ ಬಂದಿತ್ತು. ಈ ಸಲ ವಿನ್ ಆಗ್ತೀವಿ ಅಂದ್ಕೊಂಡ್ವಿ. ಟರ್ಫ್ನಲ್ಲಿ ಆಡಿ ಅಸ್ಸಾಂನಲ್ಲಿ ಗ್ರಾಸ್ಗ್ರೌಂಡ್ನಲ್ಲಿ ಸ್ವಲ್ಪ ಕಷ್ಟ ಆಯ್ತು. ನೆಕ್ಸ್ಟ್ ಗೆಲ್ತೀವಿ. ಎಲ್ಲ ವ್ಯವಸ್ಥೆಗಳು ಚೆನ್ನಾಗಿದ್ದವು. ಕೋಚ್, ಮ್ಯಾನೇಜರ್ ತುಂಬಾ ಸಪೋರ್ಟ್ ಮಾಡಿದ್ರು’
-ರಮ್ಯ, ಅಪ್ಸರ
ಹೊಸ ಅನುಭವ
‘ಹಾಕಿ ಆಟ ನೋಡಿ ಆನಂದಿಸುತ್ತಿದ್ದೆ. ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಆದರೆ ಇದೇ ಮೊದಲ ಬಾರಿಗೆ ಒಂದು ತಂಡವನ್ನು ದೂರದೂರಿಗೆ ಕರೆದೊಯ್ದಿರುವದು ಒಂದು ಹೊಸ ಅನುಭವ. ಮಕ್ಕಳು ಕೂಡ ಎಲ್ಲರೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಗೆಲುವು ಸಾಧಿಸಿದ್ದರೆ ತುಂಬಾ ಖುಷಿಯಾಗುತ್ತಿತ್ತು. ಹೊಸ ಹಾಗೂ ಚಳಿಯ ವಾತಾವರಣದಲ್ಲಿ ನಮ್ಮ ತಂಡದವರ ಆಟದ ಪ್ರದರ್ಶನಕ್ಕೆ ಬೇರೆ ರಾಜ್ಯದ ತಂಡದವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ನಮ್ಮ ತಂಡ ‘ಎ’ ಡಿವಿಜನ್ಗೆ ಪ್ರಮೋಟ್ ಆಗಿದೆ. ತಂಡದ ಎಂಟು ಮಂದಿ ಆಟಗಾರ್ತಿಯರು ಇಂಡಿಯಾ ಕ್ಯಾಂಪ್ಗೆ ಆಯ್ಕೆಯಾಗಿರುವದು ಖುಷಿಯಾಗಿದೆ. ಉತ್ತಮ ವ್ಯವಸ್ಥೆಗಳೊಂದಿಗೆ ಅವಕಾಶ ಕಲ್ಪಿಸಿದ ಹಾಕಿ ಕೂರ್ಗ್ಗೆ ಅಭಾರಿಯಾಗಿದ್ದೇನೆ’
-ಕುಡೆಕಲ್ ಸವಿತ, ವ್ಯವಸ್ಥಾಪಕಿ.