ಹೆಬ್ಬಾಲೆ/ಕೂಡಿಗೆ, ಫೆ. 22: ಸಮೀಪದ ಬಾಣಾವರ ಉಪವಲಯ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯ ಬಾಣಾವರ ಸರ್ಕಲ್ ಬಳಿ ತೇಗದ ತೋಪಿನಲ್ಲಿ ಗುರುವಾರ ಮಧ್ಯಾಹ್ನ ಕಾಡ್ಗಿಚ್ಚು ಕಾಣಿಸಿಕೊಂಡು ಹತ್ತಾರೂ ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.
ಬಾಣಾವರ ವಲಯದ ಆಲದಮರ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಮಧ್ಯಾಹ್ನ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಹಂತ ಹಂತವಾಗಿ ಅರಣ್ಯ ಪ್ರದೇಶದಲ್ಲಿ ವ್ಯಾಪಿಸಿತ್ತು. ರಭಸದಿಂದ ಗಾಳಿ ಬೀಸುತ್ತಿದ್ದ ಹಿನ್ನೆಲೆಯಲ್ಲಿ ಬೆಂಕಿ ಉರಿದುಕೊಂಡು ತೇಗದ ತೋಪಿಗೆ ಹರಡಿತು. ತಕ್ಷಣ ವಿಷಯ ತಿಳಿದ ಉಪವಲಯ ಅರಣ್ಯಾಧಿಕಾರಿ ಮಹಾದೇವ ನಾಯಕ್, ಸಿಬ್ಬಂದಿ ಗಳಾದ ವರುಣ್ ಕುಮಾರ್, ರಾಜು, ಸಿಬ್ಬಂದಿಗಳು ಬೆಂಕಿ ನಂದಿಸಲು ಮುಂದಾದರು. ಆದರೆ ಬೆಂಕಿಯ ತೀವ್ರತೆ ಗಾಳಿ ಬೀಸಿದಂತೆ ವ್ಯಾಪಾಕ ವಾಗ ತೊಡಗಿತು. ತಕ್ಷಣ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರು.
ಸೋಮವಾರಪೇಟೆ ಮತ್ತು ಕುಶಾಲನಗರ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಕಾಡಿನ ಮಧ್ಯೆ ಬೆಂಕಿ ವ್ಯಾಪಕವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ಕಾಡಿನ ಒಳಗಡೆ ವಾಹನ ಹೋಗಲು ಸಾಧ್ಯವಾಗಲಿಲ್ಲ. ತಕ್ಷಣ ಸಿಬ್ಬಂದಿಗಳು ಪೈಪ್ ಮೂಲಕ ಕಾಡಿನ ಒಳಗಡೆ ನುಗ್ಗಿ ಬೆಂಕಿಯನ್ನು ನಂದಿಸಲು ಶ್ರಮಿಸಿದರು.
ಸೋಮವಾರಪೇಟೆ ಅಗ್ನಿಶಾಮಕ ದಳದ ಲವ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸುನಿಲ್ ಕುಮಾರ್, ವಿನಯ್, ಪ್ರಕಾಶ್, ಯಲ್ಲಪ್ಪ ಹಾಗೂ ಕುಶಾಲನಗರ ಠಾಣೆಯ ಚೇಯಣ್ಣ ನೇತೃತ್ವದಲ್ಲಿ ಸಂದೀಪ್, ಪ್ರೇಮನಂದ, ಪ್ರಕಾಶ್, ಮಂಜುನಾಥ್, ಪುಟ್ಟನಾಯಕ, ಶಂಕರ್ ಹಾಗೂ ಅರಣ್ಯ ಸಿಬ್ಬಂದಿಗಳು ಬೆಂಕಿ ನಂದಿಸಲು ತೊಡಗಿಸಿಕೊಂಡಿದ್ದರು. ಇದೀಗ ಅರಣ್ಯ ಪ್ರದೇಶದಲ್ಲಿ ಬೆಂಕಿಯ ಹತೋಟಿಗೆ ತರಲಾಗಿದೆ. ಮತ್ತೆ ಬೆಂಕಿ ಕಾಣಿಸಿಕೊಂಡು ಅನಾಹುತ ಸಂಭವಿದಂತೆ ಸಿಬ್ಬಂದಿಗಳು ಎಚ್ಚರಿಕೆ ವಹಿಸಿದ್ದಾರೆ.
ಡಿ.ಎಫ್.ಓ. ಭೇಟಿ: ಕಾಡ್ಗಿಚ್ಚು ವಿಷಯ ತಿಳಿದು ಸ್ಥಳಕ್ಕೆ ಡಿ.ಎಫ್.ಓ. ಮಂಜುನಾಥ್, ಎಸಿಎಫ್ ಎಂ.ಎಸ್. ಚಿಣ್ಣಪ್ಪ, ವಲಯ ಅರಣ್ಯಾಧಿಕಾರಿ ಲಕ್ಷ್ಮಿಕಾಂತ್ ಭೇಟಿ ನೀಡಿ ಪರಿಶೀಲಿಸಿದರು.
ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಕಾಡ್ಗಿಚ್ಚು ಮತ್ತೆ ಕಾಣಿಸಿಕೊಳ್ಳದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ.