ಶನಿವಾರಸಂತೆ, ಫೆ. 22: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಇರುವ ವಿವಾದಾಸ್ಪದ ವಾಣಿಜ್ಯ ಸಂಕೀರ್ಣ ಮಳಿಗೆಗಳ ಸ್ವಾಧೀನ ವಿಚಾರವಾಗಿ ಗುತ್ತಿಗೆದಾರ ಹಾಗೂ ಗ್ರಾಮ ಪಂಚಾಯಿತಿ ನಡುವಿನ ವಿವಾದಕ್ಕೆ, 3 ವರ್ಷಗಳ ಹೋರಾಟಕ್ಕೆ ಜಿಲ್ಲಾಧಿಕಾರಿಯವರ ಆದೇಶ ಅಂತಿಮ ತೆರೆ ಎಳೆದಿದೆ.

ಜಿಲ್ಲಾಧಿಕಾರಿ ಅವರ ಮುಕ್ತ ನ್ಯಾಯಾಲಯ ಮೇಲ್ಮನವಿದಾರ ಗುತ್ತಿಗೆದಾರ ಎಸ್.ಎನ್. ರಘು ಅವರ ಮೇಲ್ಮನವಿಯನ್ನು ವಜಾಗೊಳಿಸಿದೆ. ಪ್ರತಿವಾದಿಗಳಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಹಾಗೂ ಅಭಿವೃದ್ಧಿ ಅಧಿಕಾರಿ ಧನಂಜಯ್ ವಿಳಂಬವಿಲ್ಲದೆ ವಿವಾದಿತ ಜಮೀನನ್ನು ವಶಕ್ಕೆ ಪಡೆದು ಸಾರ್ವಜನಿಕ ಉಪಯೋಗಕ್ಕಾಗಿ ಉಪಯೋಗಿಸಿ ಕೊಳ್ಳಲು ಮತ್ತು ವಿವಾದಿತ ಕಟ್ಟಡ ಇತರ ಸರ್ವೆ ನಂಬರ್‍ನಲ್ಲಿ ಸ್ಥಾಪಿತವಾಗಿದ್ದಲ್ಲಿ ಆ ಬಗ್ಗೆ ಕಾನೂನು ರೀತಿಯಲ್ಲಿ ಸುಪರ್ದಿಗೆ ಪಡೆದುಕೊಳ್ಳಲು ಆದೇಶಿಸಿದೆ.

ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಸ.ನಂ. 61/ಎರ 0.04 ಎಕರೆ ಜಾಗವನ್ನು ನೆಲ ಬಾಡಿಗೆ ಆಧಾರದಲ್ಲಿ ವಾಣಿಜ್ಯ ಸಂಕೀರ್ಣ ಕಟ್ಟಡ ನಿರ್ಮಿಸಲು ಗುತ್ತಿಗೆದಾರ ಎಸ್.ಎನ್. ರಘು ಅವರಿಗೆ 1999ರಲ್ಲಿ 12 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. 12 ವರ್ಷ 8 ತಿಂಗಳು ಕಳೆದರೂ ಗುತ್ತಿಗೆದಾರರು ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಪಂಚಾಯಿತಿಗೆ ಹಸ್ತಾಂತರಿಸಲಿಲ್ಲ. 2014ಕ್ಕೆ ಅವರು ಕಟ್ಟಡವನ್ನು ಪಂಚಾಯಿತಿಗೆ ಹಸ್ತಾಂತರಿಸಬೇಕಿತ್ತು. ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರು ಗ್ರಾಮ ಪಂಚಾಯಿತಿ ಕ್ರಮಕೈಗೊಳ್ಳು ವಂತೆ ಆದೇಶ ಮಾಡಿದ್ದರೂ, ಗುತ್ತಿಗೆದಾರರು ಕಟ್ಟಡವನ್ನು ಪಂಚಾಯಿತಿಗೆ ಹಸ್ತಾಂತರಿಸದೆ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು.

ಹೈಕೋರ್ಟ್ ಉಪ ವಿಭಾಗಾಧಿಕಾರಿಯವರಿಗೆ ಸೂಕ್ತ ವಿಚಾರಣೆ ಮಾಡಿ ಇತ್ಯರ್ಥಗೊಳಿಸು ವಂತೆ ಆದೇಶಿಸಿತ್ತು. ಕಾನೂನು ಸಮ್ಮತ ವಿಚಾರಣೆ ಮಾಡಿದ ಉಪವಿಭಾಗಾಧಿ ಕಾರಿ ಮೇಲ್ಮನವಿಯನ್ನು ವಜಾಗೊಳಿಸುವಂತೆ ಕೋರಿದ್ದರು.

ಇದೀಗ ಮೇಲ್ಮನವಿದಾರ ಎಸ್.ಎನ್. ರಘು ಅವರ ಮೇಲ್ಮನವಿಯನ್ನು ಜಿಲ್ಲಾಧಿಕಾರಿಯವರ ಮುಕ್ತ ನ್ಯಾಯಾಲಯ ವಜಾಗೊಳಿಸಿ ಪಂಚಾಯಿತಿಗೆ ಆದೇಶ ರವಾನಿಸಿದೆ.

ಜಿಲ್ಲಾಧಿಕಾರಿಯವರ ಆದೇಶದನ್ವಯ ಕಾನೂನು ರೀತಿ ಗುತ್ತಿಗೆದಾರರಿಂದ ಸಾರ್ವಜನಿಕ ಆಸ್ತಿಯಾದ ವಾಣಿಜ್ಯ ಸಂಕೀರ್ಣ ಮಳಿಗೆಯನ್ನು ವಶಪಡಿಸಿ ಕೊಳ್ಳಲಾಗು ವದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಚ್. ಮಹಮ್ಮದ್ ಗೌಸ್ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.