ಮಡಿಕೇರಿ, ಫೆ. 22: ಕೊಡಗು ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಕಾಡಾನೆ ಧಾಳಿಗೆ ಸಿಲುಕಿ 41 ಮಂದಿ ಪ್ರಾಣ ಕಳೆದುಕೊಂಡಿದ್ದು, 53 ಮಂದಿ ಗಾಯಗೊಂಡಿದ್ದಾರೆ. ವನ್ಯ ಮೃಗಗಳಿಗೆ ಸಿಲುಕಿ ವಿವಿಧೆಡೆಗಳಲ್ಲಿ 84 ಜಾನುವಾರುಗಳು ಪ್ರಾಣ ಕಳೆದುಕೊಂಡಿವೆಯಲ್ಲದೆ, ಮೂರು ಪ್ರಕರಣಗಳಲ್ಲಿ ಮನೆಗಳಿಗೆ ಹಾನಿಯಾಗಿವೆ ಎಂದು ಅರಣ್ಯ ಇಲಾಖೆಯ ಮೂಲಗಳಿಂದ ಗೊತ್ತಾಗಿದೆ.ಮೇಲಿನ ಪ್ರಕರಣಗಳಲ್ಲಿ ಅರಣ್ಯ ಇಲಾಖೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ 2007ನೇ ಇಸವಿಯಿಂದ ಇತ್ತೀಚೆಗೆ 2018ರ ಜನವರಿ ತನಕ ಕೊಡಗು ಜಿಲ್ಲೆಯಲ್ಲಿ ಒಟ್ಟು 12,254 ಮೊಕದ್ದಮೆಗಳು ನಮೂದಿಸಲ್ಪಟ್ಟಿವೆಯಲ್ಲದೆ, ಬೆಳೆ ಹಾನಿ ಸಂಬಂಧ ದಾಖಲಾಗಿರುವ ಈ ಪ್ರಕರಣಗಳಲ್ಲಿ ಫಸಲು ನಷ್ಟ ಸಂಬಂಧ ಇದುವರೆಗೆ ಒಟ್ಟು ರೂ. 3,78,88,677 ಮೊತ್ತ ಪರಿಹಾರ ಕಲ್ಪಿಸಲಾಗಿದೆ.
ಅಲ್ಲದೆ, ಕಾಡಾನೆ ಧಾಳಿಯಿಂದ ಪ್ರಾಣ ಕಳೆದುಕೊಂಡಿರುವ ಒಟ್ಟು 41 ಪ್ರಕರಣಗಳಲ್ಲಿ ಮೃತರ ಕುಟುಂಬಗಳಿಗೆ ಒಟ್ಟು 1,28,50,000 ಹಣವನ್ನು ಪರಿಹಾರ ರೂಪದಲ್ಲಿ ಒದಗಿಸಲಾಗಿದೆ ಎಂದು ಅಧಿಕೃತ ಮೂಲಗಳಿಂದ ಮಾಹಿತಿ ಲಭಿಸಿದೆ. ಇನ್ನು ಗಾಯಗೊಂಡಿರುವ ವ್ಯಕ್ತಿಗಳಿಗೆ ಒಟ್ಟು 53 ಪ್ರಕರಣಗಳಲ್ಲಿ ರೂ. 9,23,995 ಮೊತ್ತದ ಆರ್ಥಿಕ ನೆರವು ನೀಡಲಾಗಿದೆ.
ಮತ್ತೊಂದೆಡೆ ಬೇರೆ ಬೇರೆ ಸಂದರ್ಭಗಳಲ್ಲಿ ರೈತರು ಸಾಕಿದ್ದ ಜಾನುವಾರುಗಳು ಮೃಗಗಳ ಧಾಳಿಗೆ ಸಿಲುಕಿ ಜೀವ ಕಳೆದುಕೊಂಡಿರುವ ಪ್ರತ್ಯೇಕ 84 ಪ್ರಕರಣಗಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯಿಂದ, ಸಂಬಂಧಿಸಿದ ಕುಟುಂಬಗಳಿಗೆ ಪರಿಹಾರ ರೂ. 4,50,850 ಮೊತ್ತವನ್ನು ಒದಗಿಸಲಾಗಿದೆ. ಇನ್ನು ಕಾಡಾನೆ ಧಾಳಿ ಸಂಬಂಧ ಆಸ್ತಿ (ಮನೆ) ಹಾನಿ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ರೂ. 27,000 ಮೊತ್ತದ ಪರಿಹಾರ ನೀಡಲಾಗಿದೆ.
ಈ ರೀತಿಯಾಗಿ ಕಳೆದ ಒಂದು ದಶಕದಿಂದ ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹಾಗೂ ವನ್ಯಮೃಗಗಳ ಧಾಳಿಯಿಂದ ನಷ್ಟ ಹೊಂದಿರುವ ವಿಭಿನ್ನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯಿಂದ ನೊಂದ ಕುಟುಂಬಗಳಿಗೆ ಒಟ್ಟು ರೂ. 5,21,33,522 ಮೊತ್ತವನ್ನು
(ಮೊದಲ ಪುಟದಿಂದ) ಪರಿಹಾರ ರೂಪದಲ್ಲಿ ಒದಗಿಸಲಾಗಿದೆ ಎಂದು ಮಾಹಿತಿ ಲಭಿಸಿದೆ.
ವಾರ್ಷಿಕ ನೋಟ: ದಶಕದ ಹಿಂದೆ 2007-2008ರಲ್ಲಿ ಬೆಳೆ ಹಾನಿ ಪ್ರಕರಣಗಳು 1,923, ಪ್ರಾಣಹಾನಿ 6, ಗಾಯಗೊಂಡಿದ್ದು 12, 6 ಜಾನುವಾರು ಬಲಿ ಸಂಭವಿಸಿವೆ. 2008-2009ರಲ್ಲಿ 1,400 ಬೆಳೆ ಹಾನಿ, 6 ಸಾವು, 6 ಗಾಯ, 10 ಜಾನುವಾರುಗಳು ಸಾವನ್ನಪ್ಪಿವೆ. 2009-10ರಲ್ಲಿ ಅನಾಹುತಗಳು ಸ್ವಲ್ಪಮಟ್ಟಿಗೆ ಇಳಿಮುಖ ಕಂಡಿವೆ.
ಈ ಸಾಲಿನಲ್ಲಿ 557 ಬೆಳೆ ಹಾನಿ, 3 ಪ್ರಾಣಹಾನಿ, 7 ಗಾಯಾಗ ಳೊಂದಿಗೆ 10 ಜಾನುವಾರುಗಳು ವನ್ಯಮೃಗಗಳಿಗೆ ಬಲಿಯಾಗಿವೆ. 2010-11 ರಲ್ಲಿ ಬೆಳೆ ಹಾನಿ ಅಧಿಕಗೊಂಡು 1,136 ಪ್ರಕರಣಗಳು ದಾಖಲಾಗಿವೆ. ಈ ವರ್ಷ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಮೂರು ಜಾನುವಾರುಗಳು ಬಲಿಯಾಗಿವೆ.
ಅನಂತರದಲ್ಲಿ 2011-12ನೇ ವರ್ಷದಲ್ಲಿ 612 ಪ್ರಕರಣಗಳು ಗೋಚರಿಸಿದ್ದು, ಒಬ್ಬರು ಪ್ರಾಣ ಕಳೆದುಕೊಂಡು ಎಂಟು ಮಂದಿ ಕಾಡಾನೆ ಧಾಳಿಯಿಂದ ಗಾಯಗೊಂಡಿದ್ದಾರೆ. ಹತ್ತು ಜಾನುವಾರುಗಳು ಮೃಗಗಳಿಗೆ ಬಲಿಯಾಗಿವೆ. 2012-13ನೇ ಸಾಲಿಗೆ 535 ಕೃಷಿ ನಷ್ಟ ಪ್ರಕರಣಗಳು ಸಂಭವಿಸಿದ್ದು, ಮೂವರು ಜೀವ ಕಳೆದುಕೊಂಡು ನಾಲ್ವರು ಗಾಯಗೊಂಡಿದ್ದಾರೆ. ಐದು ಜಾನುವಾರುಗಳು ಮೃಗಗಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿವೆ.
ಇನ್ನು 2013-14ನೇ ಸಾಲಿನಲ್ಲಿ ಕೃಷಿ ನಾಶ ಪ್ರಕರಣಗಳು 601 ಸಂಭವಿಸಿದ್ದು, ಮೂವರು ಪ್ರಾಣ ಕಳೆದುಕೊಂಡರೆ, ನಾಲ್ವರು ಗಾಯಗೊಂಡು ಏಳು ಜಾನುವಾರುಗಳು ಬಲಿಯಾಗಿವೆ. 2014-15ನೇ ಸಾಲಿಗೆ ಬಹುಶಃ ಬೆಳೆಹಾನಿ ಅಧಿಕಗೊಂಡು 1719 ಪ್ರಕರಣ ದಾಖಲಾಗಿವೆ. ಈ ವರ್ಷ ಇಬ್ಬರು ಸಾವು, ಮೂವರಿಗೆ ಗಾಯದೊಂದಿಗೆ ಮೃಗಗಳು 11 ಜಾನುವಾರುಗಳನ್ನು ಬಲಿ ಪಡೆದಿವೆ.
ಬಳಿಕ 2015-16ನೇ ವರ್ಷ 1,212 ಬೆಳೆ ಹಾನಿ, ಮೂವರ ಪಾಣಹಾನಿ, ಇಬ್ಬರಿಗೆ ಗಾಯಗ ಳೊಂದಿಗೆ ಹತ್ತು ಜಾನುವಾರುಗಳು ಧಾಳಿಗೆ ಸಿಲುಕಿ ಒಂದು ಆಸ್ತಿ ನಷ್ಟ ಪ್ರಕರಣ ದಾಖಲಾಗಿವೆ. 2016-17ನೇ ಸಾಲಿನಲ್ಲಿ 1,374 ಕೃಷಿ ನಷ್ಟ ಪ್ರಕರಣ, ಆರು ಮಂದಿ ಪ್ರಾಣಹಾನಿ, ಇಬ್ಬರಿಗೆ ಗಾಯದೊಂದಿಗೆ ಹತ್ತು ಸಾಕು ಪ್ರಾಣಿಗಳು ಮೃಗಗಳಿಗೆ ಬಲಿಯಾಗಿವೆ.
ಮಾತ್ರವಲ್ಲದೆ 2017-18ನೇ ಸಾಲಿನಲ್ಲಿ ಕಳೆದ ಜನವರಿ ತನಕ ಒಟ್ಟು 1,187 ಫಸಲು ನಷ್ಟ ಪ್ರಕರಣ ದಾಖಲಾಗಿದ್ದು, ನಾಲ್ವರು ಪ್ರಾಣ ಕಳೆದುಕೊಂಡು ಮೂವರು ಗಾಯಗೊಂಡಿದ್ದಾರೆ. ಈ ಅವಧಿಗೆ ಏಳು ಜಾನುವಾರುಗಳು ಮೃಗಗಳಿಗೆ ಬಲಿಯಾಗಿದ್ದು, ಎರಡು ಮನೆಗಳು ಕಾಡಾನೆಯಿಂದ ಹಾನಿಗೀಡಾದ ಪ್ರಕರಣಗಳು ಸಂಭವಿಸಿವೆ.
-ಚಿ.ನಾ. ಸೋಮೇಶ್