ಗೋಣಿಕೊಪ್ಪ ವರದಿ, ಫೆ. 22 : ಕಾವೇರಿ ವಿದ್ಯಾಸಂಸ್ಥೆ ಹಾಗೂ ಮಂಗಳೂರು ವಿಶ್ವ ವಿದ್ಯಾಲಯ ಸಹಯೋಗದಲ್ಲಿ 45 ನೇ ವರ್ಷದ ಚೆರಿಯಪಂಡ ಕುಶಾಲಪ್ಪ ಸ್ಮಾರಕ ಅಂತರ ಕಾಲೇಜು ಹಾಕಿ ಟೂರ್ನಿಗೆ ಗೋಣಿಕೊಪ್ಪ ಕಾವೇರಿ ಕಾಲೇಜು ಮೈದಾನದಲ್ಲಿ ಚಾಲನೆ ನೀಡಲಾಯಿತು.
ವಿಶ್ವ ವಿದ್ಯಾನಿಲಯದ ಮಾಜಿ ಹಾಕಿ ಆಟಗಾರ ಮುರುವಂಡ ಸಂಜು ಹಾಗೂ ಅಖಿಲ ಭಾರತ ವಿಶ್ವವಿದ್ಯಾನಿಲಯದ ಮಾಜಿ ಹಾಕಿ ಆಟಗಾರ್ತಿ ಕೊಟ್ಟಂಗಡ ಶೈಲ ಇವರುಗಳು ಹಾಕಿ ಡ್ರಿಬ್ಲಿಂಗ್ ಮೂಲಕ ಉದ್ಘಾಟಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಟೂರ್ನಿಯಲ್ಲಿ ಅಂತರಾಷ್ಟ್ರೀಯ ಕರಾಟೆ ಪಟು ಜಮ್ಮಡ ಜೋಯಪ್ಪ, ಮಂಗಳೂರು ವಿಶ್ವ ವಿದ್ಯಾನಿಲಯದ ಮಾಜಿ ಹಾಕಿ ಆಟಗಾರ ಮುರುವಂಡ ಸಂಜು ಹಾಗೂ ಅಖಿಲ ಭಾರತ ವಿಶ್ವವಿದ್ಯಾನಿಲಯದ ಮಾಜಿ ಹಾಕಿ ಆಟಗಾರ್ತಿ ಕೊಟ್ಟಂಗಡ ಶೈಲ ಅವರುಗಳನ್ನು ಸನ್ಮಾನಿಸಲಾಯಿತು.
ಶೈಲ ಸನ್ಮಾನ ಸ್ವೀಕರಿಸಿ ಮಾತನಾಡಿ, 30 ವರ್ಷಗಳ ಹಿಂದೆ ಹಾಕಿ ಕ್ರೀಡೆಯಲ್ಲಿ ಅಸಕ್ತಿಯಿರುವ ಕ್ರೀಡಾಪಟುಗಳಿಗೆ ಸಂಪನ್ಮೂಲಗಳ ಕೊರತೆಯಿತ್ತು. ಪ್ರಸ್ತುತ ಉತ್ತಮ ತರಬೇತಿಯೊಂದಿಗೆ ಕ್ರೀಡಾಪಟುಗಳಿಗೆ ಅವಕಾಶಗಳು ಹೆಚ್ಚಿದೆ. ವಿದ್ಯಾರ್ಥಿಗಳು ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಕ್ರೀಡೆಯಲ್ಲಿ ಸಾಧನೆ ಮಾಡಬೇಕು. ಇದರೊಂದಿಗೆ ಬಾಷೆಗೂ ಹೆಚ್ಚಿನ ಒತ್ತು ನೀಡಬೇಕು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಉಪನಿದೇರ್ಶಕ ಡಾ. ಹೆಚ್. ಎನ್. ರಮೇಶ್ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆಯಲ್ಲಿ ತೊಡಗಿಸಿಕೊಂಡು ಸರ್ಕಾದಿಂದ ನೀಡಲಾಗಿರುವ ಕ್ರೀಡಾ ಮೀಸಲಾತಿಯ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಹಿರಿಯ ಉಪನ್ಯಾಸಕಿ ಪ್ರೊ.ಅಕ್ಕಮ್ಮ, ದೈಹಿಕ ಶಿಕ್ಷಕ ಎಂ. ಟಿ. ಸಂತೋಷ್, ತರಬೇತುದಾರ ಮಿನ್ನಂಡ ಜೋಯಪ್ಪ, ಮಂಗಳೂರು ವಿವಿ ದೈಹಿಕ ಶಿಕ್ಷಣ ಸಹಾಯಕ ನಿರ್ದೇಶಕ ಡಾ. ಹೆಚ್. ಎನ್. ರಮೇಶ್, ಹಿರಿಯ ಉಪನ್ಯಾಸಕರು ಗಳಾದ ತುಳಸಿ, ಭಾರತಿ ಉಪಸ್ಥಿತರಿದ್ದರು.
ಯು. ಟಿ. ಪೆಮ್ಮಯ್ಯ, ವಿಜಯಕುಮಾರ್, ಸಿ. ಎಂ. ಕಿರಣ್ ಪರಿಚಯ ಮಾಡಿದರು. ಅಮೃತ್ ಹಾಗೂ ತಂಡ ಪ್ರಾರ್ಥಿಸಿದರು. ಪಿ. ಆರ್. ನಿತ್ಯಾ ವಂದಿಸಿದರು.
ಫಲಿತಾಂಶ : ಜಿಎಫ್‍ಜಿಸಿ ಶನಿವಾರಸಂತೆ ಹಾಗೂ ಪೊನ್ನಂಪೇಟೆ ಸಾಯಿಶಂಕರ್ ತಂಡಗಳ ನಡುವಿನ ಪಂದ್ಯದಲ್ಲಿ ಶನಿವಾರಸಂತೆ ತಂಡ 3-1 ಗೋಲುಗಳ ಗೆಲುವು ದಾಖಲಿಸಿತು. ಸೋಮವಾರಪೇಟೆ ಸೆಂಟ್ ಜೋಸೆಫ್ ತಂಡವು ವೀರಾಜಪೇಟೆ ಸರ್ಕಾರಿ ಕಾಲೇಜು ವಿರುದ್ಧ 2-0 ಗೋಲುಗಳ ಜಯ ಸಾಧಿಸಿತು. ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜು ತಂಡವು ಮಂಗಳೂರು ವಿಶ್ವ ವಿದ್ಯಾಲಯ ವಿರುದ್ದ 2-0 ಗೋಲುಗಳ ಗೆಲುವು ದಾಖಲಿಸಿತು.
ಮಂಗಳೂರು ಸೆಂಟ್ ಅಲೋಶಿಯೆಸ್ ಕಾಲೇಜು ತಂಡವು ಶನಿವಾರಸಂತೆ ಸರ್ಕಾರಿ ಕಾಲೇಜು ತಂಡವನ್ನು 2-0 ಗೋಲುಗಳಿಂದ ಮಣಿಸಿತು. ಗೋಣಿಕೊಪ್ಪ ಕಾವೇರಿ ಕಾಲೇಜು ತಂಡವು ಸೆಂಟ್ ಫಿಲೋಮಿನಾಸ್ ತಂಡವನ್ನು 4-0 ಅಂತರದಿಂದ ಸೋಲಿಸಿತು.