ಶ್ರೀಮಂಗಲ, ಫೆ. 22: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕುರ್ಚಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಳೆಗಾರ ಅಜ್ಜಮಾಡ ಬಿ.ಪೂಣಚ್ಚ (ಪೂವಣ್ಣು) ಅವರ ಮನೆಯ ಅಂತಸ್ತು ಸಂಪೂರ್ಣ ಹಾನಿಯಾಗಿದ್ದು, ಅಂದಾಜು ರೂ.40 ಲಕ್ಷ ಮೌಲ್ಯದ ಪೀಠೋಪಕರಣ, ಆಭರಣ ಸೇರಿದಂತೆ ಸಾಮಗ್ರಿಗಳು ಬೆಂಕಿಗಾಹುತಿಯಾಗಿದೆ ಎನ್ನಲಾಗಿದ್ದು, ಸ್ಥಳಕ್ಕೆ ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜು ಭೇಟಿ ನೀಡಿ ಪರಿಶೀಲಿಸಿದರು.

ತಾ. 21 ರಂದು ಸಂಜೆ 5 ಗಂಟೆಗೆ ನಡೆದ ಈ ಘಟನೆಯಿಂದ ಮನೆಯ ಮೇಲಿನ ಅಂತಸ್ತಿನ ಕಟ್ಟಡ ಮತ್ತು ಮೇಲ್ಛಾವಣಿ, ಗೋಡೆ, ಅಲ್ಮೇರಾ, ಮಂಚ ಸೇರಿದಂತೆ ಮನೆಯಲ್ಲಿದ್ದ ಎಲ್ಲಾ ಸಾಮಗ್ರಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಇದರೊಂದಿಗೆ ಅಲ್ಮೇರಾದಲ್ಲಿ ಇರಿಸಿದ್ದ ಚಿನ್ನದ ಆಭರಣ, ಪೀಚೆÉಕತ್ತಿ ಸೇರಿದಂತೆ ಬೆಲೆ ಬಾಳುವ ವಸ್ತುಗಳು ಸಹ ಬೆಂಕಿಯ ಉರಿಗೆ ಕರಗಿಹೋಗಿವೆ.ಬೆಂಕಿ ನಂದಿಸಲು ಪ್ರಯತ್ನಿಸಿದ ಮನೆಯ ಮಾಲೀಕ ಪೂಣಚ್ಚ ಅವರ ಮುಖದ ಭಾಗ, ಕೈ, ಕಾಲುಗಳಿಗೆ ಸಣ್ಣ ಪ್ರಮಾಣದ ಸುಟ್ಟಗಾಯಗಳಾಗಿದೆ. ಮನೆಯ ಕೆಳ ಅಂತಸ್ತಿನಲ್ಲಿ ಪೂಣಚ್ಚ ಅವರ ಮಗಳು ಕೋಣೇರಿರ ಪಾಯಲ್ ತನ್ನ 27 ದಿನದ ಹಸುಗೂಸು ಹಾಗೂ 3 ವಯಸ್ಸಿನ ಮಗುವಿನೊಂದಿಗೆ ಒಳಗಡೆ ಇದ್ದರು. ಪೂಣಚ್ಚ ಅವರ ಸಮಯ ಪ್ರಜ್ಞೆಯಿಂದ ಯಾವದೇ ತೊಂದರೆ ಆಗಿಲ್ಲ.

ಮನೆಗೆ ಬೆಂಕಿ ತಗುಲಿದ ನಂತರ ತನ್ನಷ್ಟಕ್ಕೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಈ ಸಂದರ್ಭ ಮನೆಯ ಸಮೀಪದ ತೋಟಕ್ಕೆ ಪಂಪ್ ಸೆಟ್ ಮೂಲಕ ನೀರು ಹಾರಿಸುತ್ತಿದ್ದು, ಬೆಂಕಿಯನ್ನು ನಂದಿಸಲು ಮನೆಯ ಸಮೀಪಕ್ಕೆ ಪೈಪ್‍ಗಳನ್ನು ಅಳವಡಿಸಿ ನೀರು ಹಾಯಿಸಿ ಬೆಂಕಿ ನಂದಿಸಲು ಮುಂದಾದ ಪರಿಣಾಮ ಕೆಳ ಅಂತಸ್ಥಿನ ಮನೆಗೆ ಯಾವದೇ ಹಾನಿ ಆಗುವದನ್ನು ತಡೆಯಲು ಸಾಧ್ಯವಾಯಿತು. ಕೂಡಲೇ ಗೋಣಿಕೊಪ್ಪದ ಅಗ್ನಿಶಾಮಕ ಠಾಣೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದ ಬೆನ್ನಲ್ಲೇ ಸಂಜೆ 6.30 ಕ್ಕೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಮನೆಗೆ ತಗುಲಿದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿ ರಾಧಾಕೃಷ್ಣ ಭೇಟಿ ನೀಡಿ ಮಹಜರು ನಡೆಸಿದ್ದಾರೆ.