ಸೋಮವಾರಪೇಟೆ, ಫೆ. 22 : ಬಹುತೇಕ ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸೋಮವಾರಪೇಟೆ ತಾಲೂಕಿಗೆ ಸರ್ಕಾರಿ ಅನುದಾನ ಕುಂಠಿತಗೊಳ್ಳುತ್ತಿದ್ದು, ಈ ಪರಿಣಾಮ ಅಭಿವೃದ್ಧಿಯಲ್ಲಿ ಹಿನ್ನಡೆ ಎದುರಿಸುತ್ತಿದೆ. ಕೊಡಗು ಜಿಲ್ಲೆಯಿಂದ ಸೋಮವಾರಪೇಟೆ ಬೇರ್ಪಡುತ್ತಿರುವಂತೆ ಕಾಣುತ್ತಿದೆ. ಸೋಮವಾರಪೇಟೆಗೆ ಪ್ರತ್ಯೇಕ ಜಿಲ್ಲೆಯ ಬೇಡಿಕೆ ಇಡುವದು ಅಥವಾ ನೆರೆಯ ಹಾಸನಕ್ಕೆ ಸೇರುವದು ಸೂಕ್ತ ಎಂಬ ಮಾತುಗಳು ತಾ.ಪಂ. ಸಾಮಾನ್ಯ ಸಭೆಯಲ್ಲಿ ಕೇಳಿಬಂದವು.

ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆಯಿತು. ಬಹುತೇಕ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ವಾರ್ಷಿಕ ಬೇಡಿಕೆಯನ್ನು ಸಮರ್ಪಕವಾಗಿ ಮಂಡಿಸುತ್ತಿಲ್ಲ. ಈ ಹಿನ್ನೆಲೆ ಅನುದಾನವೂ ಬರುತ್ತಿಲ್ಲ ಎಂದು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸಭೆಯ ಗಮನ ಸೆಳೆದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ಎಸ್‍ಇಪಿ-ಟಿಎಸ್‍ಪಿ) ಶ್ರೇಯೋಭಿವೃದ್ಧಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆಗೆ ಜಿಲ್ಲೆಗೆ 19.55 ಲಕ್ಷ ಬಂದಿದ್ದು, ಇದರಲ್ಲಿ 15.50 ಲಕ್ಷ ಬಿಡುಗಡೆಯಾಗಿ 12.24ಲಕ್ಷ ಖರ್ಚಾಗಿದೆ. ಈ ಅನುದಾನದಲ್ಲಿ ಸೋಮವಾರಪೇಟೆಗೆ ಕೇವಲ 60 ಸಾವಿರ ಲಭಿಸಿದೆ. ತೋಟಗಾರಿಕಾ ಇಲಾಖೆಯಲ್ಲಿ 19.84ಲಕ್ಷ ಖರ್ಚಾಗಿದ್ದು ತಾಲೂಕಿಗೆ ಕೇವಲ 70 ಸಾವಿರ ಬಿಡುಗಡೆಯಾಗಿದೆ. ಪಶು ಸಂಗೋಪನೆಯಲ್ಲಿ 14.07 ಲಕ್ಷ ಖರ್ಚಾಗಿದ್ದು, ಸೋಮವಾರಪೇಟೆಗೆ ಕೇವಲ 90 ಸಾವಿರ ಅನುದಾನ ಲಭ್ಯವಾಗಿದೆ ಎಂದು ಅಭಿಮನ್ಯುಕುಮಾರ್ ಸಭೆಯಲ್ಲಿ ತಿಳಿಸಿದರು.

ಇಲಾಖಾಧಿಕಾರಿಗಳು ಸಮರ್ಪಕ ವಾಗಿ ತಮ್ಮ ಇಲಾಖೆಯ ಕೋರಿಕೆ ಪಟ್ಟಿ ಸಲ್ಲಿಸುತ್ತಿಲ್ಲ. ಇದರೊಂದಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲೂ ಸೋಮವಾರಪೇಟೆ ತಾಲೂಕಿಗೆ ಅನುದಾನ ನೀಡುತ್ತಿಲ್ಲ. ಸಚಿವರ ಆಪ್ತ ಸಹಾಯಕರು ವೀರಾಜಪೇಟೆಗೆ ಬಹುತೇಕ ಅನುದಾನ ಮೀಸಲಿಡುತ್ತಿದ್ದಾರೆ. ಸೋಮವಾರಪೇಟೆ ತಾಲೂಕು ಕೊಡಗಿನಿಂದ ಬೇರ್ಪಡುತ್ತಿ ರುವಂತೆ ಕಂಡುಬರುತ್ತಿದೆ ಎಂದರು.

ಈ ಸಂದರ್ಭ ಸೋಮವಾರಪೇಟೆ ಪ್ರತ್ಯೇಕ ಜಿಲ್ಲೆಯಾದರೇ ಅಥವಾ ನೆರೆಯ ಹಾಸನ ಜಿಲ್ಲೆಗೆ ಸೇರ್ಪಡೆಗೊಂಡರೆ ಒಳ್ಳೆಯದಾಗಬಹುದೇನೋ? ಎಂಬ ಮಾತು ಸಭೆಯಲ್ಲಿ ಕೇಳಿಬಂದವು.

ಹಾಡಿಗಳ ಬಗ್ಗೆ ಚರ್ಚೆ: ತಾಲೂಕಿನ ಬಾಳೆಗುಂಡಿ ಮತ್ತು ಜ್ಯೋತಿ ನಗರ ಗಿರಿಜನ ಹಾಡಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ನ್ಯಾಯಾಲಯದ ನೆಪವೊಡ್ಡಿ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಅಲ್ಲಿನ ಮಂದಿ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ನೀವು ಏನ್ ಕ್ರಮ ಕೈಗೊಂಡಿದ್ದೀರಿ? ಎಂದು ಸಮಾಜಕಲ್ಯಾಣ ಇಲಾಖಾಧಿಕಾರಿ ಚನ್ನಬಸವಯ್ಯ ಅವರನ್ನು ಸದಸ್ಯ ಮಣಿಉತ್ತಪ್ಪ ಪ್ರಶ್ನಿಸಿದರು.

ಈ ಬಗ್ಗೆ ಸಮರ್ಪಕ ಉತ್ತರ ನೀಡಲು ಅಧಿಕಾರಿ ತಡಕಾಡಿದ ಹಿನ್ನೆಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ನಿಮಗೆ ಯಾವ ಹಾಡಿಗಳು ಎಲ್ಲೆಲ್ಲಿ ಇವೆ ಎಂಬದಾದರೂ ಗೊತ್ತಾ? ಎಷ್ಟು ಹಾಡಿಗಳಿಗೆ ಭೇಟಿ ನೀಡಿದ್ದೀರಿ? ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಅರಿವಿದೆಯೇ? ಎಂದು ಪ್ರಶ್ನಿಸಿದರು.

ಬಾಳೆಗುಂಡಿ ಹಾಡಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ನ್ಯಾಯಾಲಯದ ತಡೆಯಾಜ್ಞೆಯಿಂದ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. 15 ದಿನಗಳ ಒಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ಬೀಗ ಜಡಿಯಲಾಗುವದು ಎಂದು ಮಣಿ ಉತ್ತಪ್ಪ ಎಚ್ಚರಿಸಿದರು.

ಹಾಡಿಗೆ ತಾ.ಪಂ.ನಿಂದ ತಕ್ಷಣ ನಿಯೋಗ ಭೇಟಿ ನೀಡಿ ದಾಖಲಾತಿಗಳನ್ನು ಕ್ರೋಡೀಕರಿಸಿ ನ್ಯಾಯಾಲಯದ ಮೂಲಕ ವ್ಯವಹರಿಸಲಾಗುವದು. ಮಾರ್ಚ್ 5 ರೊಳಗೆ ಈ ಬಗ್ಗೆ ಸಮಗ್ರ ದಾಖಲಾತಿ ಸಂಗ್ರಹಿಸಿ ಎಂದು ಅಧ್ಯಕ್ಷೆ ಪುಷ್ಪಾ ರಾಜೇಶ್ ಸೂಚಿಸಿದರು.

ಕಾಡಾನೆ ಹಾವಳಿ ವಿರುದ್ಧ ಕ್ರಮಕ್ಕೆ ಆಗ್ರಹ: ಐಗೂರು ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಅರಣ್ಯ ಇಲಾಖೆ ತಕ್ಷಣ ಗಮನಹರಿಸಬೇಕೆಂದು ಐಗೂರು ಗ್ರಾ.ಪಂ. ಸದಸ್ಯ ಚಂಗಪ್ಪ ಒತ್ತಾಯಿಸಿದರು.

ಐಗೂರು ಭಾಗದ ಟಾಟಾ ಕಾಫಿ ಎಸ್ಟೇಟ್‍ನವರು ಸೋಲಾರ್ ಬೇಲಿ ನಿರ್ಮಿಸಿರುವ ಹಿನ್ನೆಲೆ ಕಾಡಾನೆಗಳು ಜನವಸತಿ ಪ್ರದೇಶಕ್ಕೆ ಲಗ್ಗೆ ಇಡುತ್ತಿವೆ. ಅರಣ್ಯ ಇಲಾಖೆಯಿಂದ ಸಮರ್ಪಕವಾಗಿ ಆನೆ ಕಂದಕ-ಸೋಲಾರ್ ಬೇಲಿ ನಿರ್ಮಿಸಿಲ್ಲ ಎಂದರು. ಚೆಟ್ಟಳ್ಳಿ ಭಾಗದಲ್ಲೂ ಆನೆ ಹಾವಳಿ ಮಿತಿಮೀರಿದೆ. ಅರಣ್ಯ ಇಲಾಖಾ ಸಿಬ್ಬಂದಿಗಳು ಅತ್ತ ತಲೆ ಹಾಕುತ್ತಿಲ್ಲ ಎಂದು ಸದಸ್ಯ ಮಣಿ ಉತ್ತಪ್ಪ ಆರೋಪಿಸಿದರು.

ಈರಳೆವಳಮುಡಿ, ಭೂತನಕಾಡು ಸೇರಿದಂತೆ ಇತರೆಡೆ ನಿರಂತರವಾಗಿ ಆನೆಗಳು ಧಾಳಿ ಮಾಡುತ್ತಿವೆ. ಅರಣ್ಯ ಇಲಾಖೆಯಿಂದ ನಿರ್ಮಿಸಲಾಗಿರುವ ಅಟ್ಟಣಿಗೆಯಲ್ಲಿ ಯಾರೂ ಇರುವದಿಲ್ಲ. ರಾತ್ರಿ ವೇಳೆ ಬೆಂಕಿ ಹಾಕುತ್ತಿಲ್ಲ ಎಂದು ಮಣಿ ಆರೋಪಿಸಿದರು. ಬೆಳೆನಷ್ಟ ಪರಿಹಾರ ಸಮರ್ಪಕವಾಗಿ ರೈತರಿಗೆ ತಲುಪುತ್ತಿಲ್ಲ ಎಂದು ಸದಸ್ಯೆ ವಿಮಲಾವತಿ ಸಭೆಯ ಗಮನ ಸೆಳೆದರು.

ಸೋಮವಾರಪೇಟೆ ಆರ್‍ಎಫ್‍ಓ ಲಕ್ಷ್ಮೀಕಾಂತ್ ಮಾತನಾಡಿ, ತಮಿಳುನಾಡು ಮಾದರಿಯಲ್ಲಿ ಬೇಲಿ ನಿರ್ಮಿಸುವ ಪ್ರಸ್ತಾವನೆ ಇಲಾಖೆಯ ಮುಂದಿದೆ. ಈ ಯೋಜನೆ ಕಾರ್ಯಗತವಾದರೆ ಸಮಸ್ಯೆ ಬಗೆಹರಿಸಲಿದೆ. ಐಗೂರು ಭಾಗದಲ್ಲಿ ಅರಣ್ಯದೊಳಗೆ ಕೆರೆ ನಿರ್ಮಿಸಲಾಗಿದೆ. ಕಂದಕವನ್ನು ದುರಸ್ತಿಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಕುಶಾಲನಗರ ಆರ್‍ಎಫ್‍ಓ ಅರುಣ್ ಮಾತನಾಡಿ, ಜನವಸತಿ ಪ್ರದೇಶಕ್ಕೆ ಆನೆಗಳು ಬರದಂತೆ ತಡೆಯಲು ಪಟಾಕಿ ಸಿಡಿಸಲಾಗುತ್ತಿದೆ. ಅಟ್ಟಣಿಗೆಯಲ್ಲಿ ಸಿಬ್ಬಂದಿಗಳು ಇರುತ್ತಾರೆ. ಪಟಾಕಿಗೆಂದೇ 86 ಸಾವಿರ ಹಣ ವಿನಿಯೋಗಿಸಲಾಗಿದೆ ಎಂದು ಮಾಹಿತಿ ಒದಗಿಸಿದರು.

ಕುಡಿಯುವ ನೀರಿನ ಕಾಮಗಾರಿ: ತಾಲೂಕಿನ ಹರದೂರು-ಮಾದಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ರೂ. 90ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೀರಿನ ಘಟಕದಲ್ಲಿ ನೀರು ಶುದ್ದೀಕರಣಗೊಳ್ಳುತ್ತಿಲ್ಲ. ಈ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರನ ವಿರುದ್ಧ ಪೊಲೀಸ್ ದೂರು ನೀಡುವಂತೆ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅವರು ತಾ.ಪಂ. ಕಚೇರಿ ಅಧಿಕಾರಿಗೆ ಸೂಚಿಸಿದರು.

ಇದೇ ವಿಚಾರವಾಗಿ ಉಪಾಧ್ಯಕ್ಷರು ಮತ್ತು ಅಭಿಯಂತರ ರಮೇಶ್ ಹಾಗೂ ವೀರೇಂದ್ರ ಅವರುಗಳ ಮಧ್ಯೆ ತೀವ್ರ ಚರ್ಚೆ ನಡೆಯಿತು. ಅಂತಿಮವಾಗಿ ಅಭಿಯಂತರರು ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡಂತೆ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುವ ಬಗ್ಗೆ ತೀರ್ಮಾನಿಸಲಾಯಿತು.

ಕುಡಿಯುವ ನೀರಿನ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಬೋರ್‍ವೆಲ್‍ಗಳು ಕೆಟ್ಟರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ಕ್ರಮ ವಹಿಸಬೇಕು ಎಂದು ಉಪಾಧ್ಯಕ್ಷರು ಸೂಚಿಸಿದರು.

ಬೋರ್‍ವೆಲ್ ದಂಧೆ: ಅವರೆದಾಳು ಗ್ರಾಮದ ಬೋರ್‍ವೆಲ್‍ಗೆ ಮೋಟಾರ್ ಅಳವಡಿಸಿಲ್ಲ ಎಂದು ಸದಸ್ಯ ಕುಶಾಲಪ್ಪ ಗಮನ ಸೆಳೆದರು. ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ 3 ಬೋರ್‍ವೆಲ್‍ಗಳು ವಿಫಲವಾಗಿವೆ. ಇಲಾಖಾಧಿಕಾರಿಗಳು ಬೋರ್‍ವೆಲ್ ದಂಧೆ ಮಾಡುತ್ತಿದ್ದೀರಾ? ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ ಅವರು, ಅಭಿಯಂತರ ರಮೇಶ್ ಅವರನ್ನು ಖಾರವಾಗಿ ಪ್ರಶ್ನಿಸಿದರು.

14ನೇ ಹಣಕಾಸು ಯೋಜನೆಯಡಿ ಎಲ್ಲಾ ಗ್ರಾಮ ಪಂಚಾಯಿತಿಗಳು ಕಡ್ಡಾಯವಾಗಿ ಕುಡಿಯುವ ನೀರಿನ ಯೋಜನೆಗೆ ಹಣ ಮೀಸಲಿಡುವಂತೆ ತಾ.ಪಂ.ನಿಂದ ಸೂಚನೆ ನೀಡಲು ನಿರ್ಧರಿಸಲಾಯಿತು. ನೀರುಗುಂದ ಗ್ರಾಮದ ನೀರಿನ ಟ್ಯಾಂಕ್‍ನಲ್ಲಿ ಲೀಕೇಜ್ ಇದೆ ಎಂದು ಅಧ್ಯಕ್ಷೆ ಪುಷ್ಪಾ ಆರೋಪಿಸಿದರು.

ಅರಕಲಗೂಡಿನಲ್ಲಿ ಕಟ್ಟಡ ನಿರ್ಮಾಣವೇ?: ಪಶುಸಂಗೋಪನಾ ಇಲಾಖೆಯಿಂದ ತಾಲೂಕಿನ ಬ್ಯಾಡಗೊಟ್ಟದಲ್ಲಿ 100 ಏಕರೆ ಪ್ರದೇಶದಲ್ಲಿ ಆಡು ಸಾಕಾಣಿಕಾ ಕೇಂದ್ರದ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ 2 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಮಾಹಿತಿಯನ್ನು ನೀಡಲಾಗುತ್ತಿದೆ. ಅಸಲಿಗೆ ಅಲ್ಲಿ ಕಟ್ಟಡ ನಿರ್ಮಾಣ ವಾಗುತ್ತಿದೆಯಾ ಅಥವಾ ಅರಕಲ ಗೂಡಿನಲ್ಲಿ ನಿರ್ಮಿಸ ಲಾಗುತ್ತಿದೆಯಾ? ಎಂದು ಅಭಿಮನ್ಯುಕುಮಾರ್ ವ್ಯಂಗ್ಯವಾಗಿ ಪ್ರಶ್ನಿಸಿದರು.

ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಪಶು ಇಲಾಖೆಯ ಸಹಾಯಕ ನಿರ್ದೇಶಕ ಚಿಟ್ಟಿಯಪ್ಪ ಅವರಿಗೆ ಸಭೆಯಲ್ಲಿ ಸೂಚಿಸಲಾಯಿತು. ತಾಲೂಕು ವ್ಯಾಪ್ತಿಯಲ್ಲಿ ಹಲವಷ್ಟು ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯಗಳಿಲ್ಲ. ತಕ್ಷಣ ಎಲ್ಲಾ ಅಂಗನವಾಡಿಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವಂತೆ ಸಭೆಯಲ್ಲಿದ್ದ ಅಧಿಕಾರಿ ಮಹೇಶ್ ಅವರಿಗೆ ಸೂಚಿಸಲಾಯಿತು.

ಸಭೆಯಲ್ಲಿ ಸದಸ್ಯರುಗಳಾದ ಸಬಿತಾ ಚನ್ನಕೇಶವ, ಸಿ.ಎ. ಕುಸುಮ, ಎಂ.ಕೆ. ಚಂಗಪ್ಪ, ಎನ್.ಎಸ್. ಜಯಣ್ಣ, ಲೀಲಾವತಿ, ಆರ್.ಪುಷ್ಪ, ವಿಮಲಾವತಿ, ಸುಹಾದ ಅಶ್ರಫ್, ಹೆಚ್.ಡಿ. ಮಣಿ, ಬಿ.ಈ. ಸವಿತ, ಹೆಚ್.ಎನ್. ತಂಗಮ್ಮ ಅವರುಗಳು ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗವಹಿಸಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖಾ ಮಾಹಿತಿಯನ್ನು ಒದಗಿಸಿದರು.