ಸೋಮವಾರಪೇಟೆ, ಫೆ. 22: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕೃಷಿ ಫಸಲನ್ನು ನಷ್ಟಗೊಳಿಸುತ್ತಿವೆ.
ನಾಲ್ಕೈದು ಕಾಡಾನೆಗಳಿರುವ ಹಿಂಡು ಈ ಭಾಗದಲ್ಲಿ ಸಂಚರಿಸುತ್ತಿದ್ದು, ಗದ್ದೆ, ಕಾಫಿ ತೋಟಗಳಲ್ಲಿ ಮನಸೋಯಿಚ್ಛೆ ಸಂಚರಿಸಿ ಕೃಷಿ ಫಸಲನ್ನು ಧ್ವಂಸಗೊಳಿಸುತ್ತಿವೆ.
ಐಗೂರಿನ ಕೆ.ಪಿ. ದಿನೇಶ್ ಅವರು ಕೃಷಿ ಮಾಡಿದ್ದ ಭತ್ತವನ್ನು ಬಡಿದು ಗದ್ದೆಯಲ್ಲಿಯೇ ಚೀಲಗಳಲ್ಲಿ ತುಂಬಿಸಿ ಇಡಲಾಗಿತ್ತು. ನಿನ್ನೆ ರಾತ್ರಿ ಗದ್ದೆಗೆ ಲಗ್ಗೆಯಿಟ್ಟಿರುವ ಕಾಡಾನೆಗಳು ಸಾವಿರಾರು ರೂಪಾಯಿ ಮೌಲ್ಯದ ಭತ್ತವನ್ನು ಚೆಲ್ಲಾಡಿದ್ದು, ಬಡಿಯಲು ಬಾಕಿ ಉಳಿದಿದ್ದ ಪೈರನ್ನು ತಿಂದು ನಷ್ಟಗೊಳಿಸಿವೆ.
ಇದರೊಂದಿಗೆ ಗ್ರಾಮದ ಸುವಿನ ಕೃಪಾಲ್, ಎಂ.ಸಿ. ಗಣೇಶ್, ಕುಮಾರಪ್ಪ ಅವರುಗಳಿಗೆ ಸೇರಿದ ಕಾಫಿ ತೋಟಕ್ಕೆ ಧಾಳಿ ನಡೆಸಿ ಕಾಫಿ ಗಿಡಗಳನ್ನು ಕಿತ್ತೆಸೆದಿದ್ದು, ಬಾಳೆ ಕೃಷಿಯನ್ನು ಸಂಪೂರ್ಣ ಧ್ವಂಸ ಗೊಳಿಸಿವೆ.
ಕೃಷಿ ಫಸಲು ನಷ್ಟಕ್ಕೆ ಪರಿಹಾರ ನೀಡಬೇಕು. ಕಾಡಾನೆಗಳ ಹಾವಳಿಗೆ ತಡೆಯೊಡ್ಡಬೇಕು ಎಂದು ಒತ್ತಾಯಿಸಿ ಕೃಷಿಕರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.