ಮಡಿಕೇರಿ: ಬೆಂಗಳೂರು ವಿಶ್ವ ವಿದ್ಯಾನಿಲಯದ 53ನೇ ಘಟಿಕೋತ್ಸವ ಸಮಾರಂಭ ಇತ್ತೀಚೆಗೆ ಅಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಬೆಂಗಳೂರು ವಿಶ್ವ ವಿದ್ಯಾನಿಲಯದ ವಿದ್ಯುನ್ಮಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂರ್ನಾಡುವಿನ ವಿದ್ಯಾರ್ಥಿನಿ ಬಿ.ಕೆ. ಬೊಳ್ಳಮ್ಮ ಚಿನ್ನದ ಪದಕ ಪಡೆದಿದ್ದಾರೆ.

ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ಅವಕಾಶ

ಮಡಿಕೇರಿ: 2003 ರ ಸೆಮಿಸ್ಟರ್ ಪಠ್ಯಕ್ರಮದ (ಸಿ-03) ಒಂದು, ಎರಡು, ಮೂರು, ನಾಲ್ಕು, ಐದು ಮತ್ತು ಆರನೇ ಸೆಮಿಸ್ಟರ್‍ನ (ಸಿ-09) ಪಠ್ಯಕ್ರಮದಲ್ಲಿ ಸಮಾನತೆ ಇಲ್ಲದ ಪಠ್ಯ ವಿಷಯಗಳಿಗೆ 2017 ರ ನವೆಂಬರ್ - ಡಿಸೆಂಬರ್ ಸೆಮಿಸ್ಟರ್ ಪರೀಕ್ಷೆಯೇ ಅಂತಿಮ ಅವಕಾಶವಾಗಿದ್ದು, ನಂತರದ ಮುಂದಿನ ಪರೀಕ್ಷೆಗಳಿಗೆ ಹಾಜರಾಗಲು ಅನುಮತಿ ನೀಡಲಾಗುವದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ 2018 ರ ಏಪ್ರಿಲ್ - ಮೇ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿಲ್ಲವಾದ್ದರಿಂದ ಪರೀಕ್ಷಾ ಮತ್ತು ರೂ. 1000 ವಿಶೇಷ ಶುಲ್ಕ ಪಡೆಯಬಾರದೆಂದು ಎಲ್ಲಾ ಸಂಸ್ಥೆಗಳ ಪ್ರಾಂಶುಪಾಲರುಗಳಿಗೆ ಸೂಚಿಸಲಾಗಿತ್ತು.

ಆದರೆ ವಿದ್ಯಾರ್ಥಿ - ಪೋಷಕರ ಮನವಿಯ ಮೇರೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯನ್ನು ಪರಿಗಣಿಸಿ ಸದರಿ ವಿದ್ಯಾರ್ಥಿಗಳಿಗೆ 2018 ರ ಏಪ್ರಿಲ್ - ಮೇ ಡಿಪ್ಲೋಮ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ಅಂತಿಮ ಅವಕಾಶ ನೀಡಲಾಗಿದೆ. ಇದೇ ಕಟ್ಟಕಡೆಯ ಅವಕಾಶವಾಗಿದ್ದು ನಂತರದ ಮುಂದಿನ ಪರೀಕ್ಷೆಗಳಿಗೆ ಹಾಜರಾಗಲು ಅನುಮತಿ ನೀಡಲಾಗುವದಿಲ್ಲ.

ಸಮಾನತೆ ಇಲ್ಲದೆ ಪ್ರತಿ ವಿಷಯಕ್ಕೆ ವಿದ್ಯಾರ್ಥಿಯಿಂದ ರೂ. 1,000 ವಿಶೇಷ ಶುಲ್ಕವನ್ನು ಪಡೆಯಲು ಹಾಗೂ ಅಂತಹ ವಿದ್ಯಾರ್ಥಿಗಳಿಂದ ತಾ. 21.02.2018 ರಿಂದ 12.03.2018 ರವರೆಗೆ ದಂಡ ರಹಿತವಾಗಿ ಪರೀಕ್ಷಾ ಶುಲ್ಕ ಪಡೆಯಲು ತಿಳಿಸಲಾಗಿದೆ. ನಂತರದ ದಿನಗಳಲ್ಲಿ ವಿವಿಧ ಹಂತಗಳಲ್ಲಿ ಚಾಲ್ತಿಯಲ್ಲಿರುವ ಪರೀಕ್ಷಾ ಶುಲ್ಕಗಳ ಅಧಿಸೂಚನೆಯನುಸಾರ ದಂಡ ಶುಲ್ಕ ಸಹಿತವಾಗಿ ಪರೀಕ್ಷಾ ಶುಲ್ಕ ಪಡೆಯಲು ಸಂಬಂಧಿಸಿದ ಸಂಸ್ಥೆಗಳ ಪ್ರಿನ್ಸಿಪಾಲರುಗಳಿಗೆ ಸೂಚಿಸಲಾಗಿದೆ ಎಂದು ತಾಂತ್ರಿಕ ಪರೀಕ್ಷಾ ಮಂಡಳಿ ಕಾರ್ಯದರ್ಶಿ ತಿಳಿಸಿದ್ದಾರೆ.