ಮಡಿಕೇರಿ, ಫೆ. 22: ನಗರಸಭೆಯ ಕಾರ್ಯವೈಖರಿ ಖಂಡಿಸಿ ಮಡಿಕೇರಿಯ ಹದಗೆಟ್ಟ ರಸ್ತೆಗಳು, ಒಳಚರಂಡಿ ಕಾಮಗಾರಿ ಅವ್ಯವಸ್ಥೆ, ಅಭಿವೃದ್ಧಿ ಕೆಲಸಗಳಿಗೆ ಗಮನ ಹರಿಸುತ್ತಿಲ್ಲ ಎಂದು ಜೆಡಿಎಸ್ ವತಿಯಿಂದ ಧರಣಿ ನಡೆಸಲಾಯಿತು. ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಂದ ಜನಪರ ಯಾವದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಧರಣಿ ನಿರತರು ಆರೋಪಿಸಿದರು.(ಮೊದಲ ಪುಟದಿಂದ) ವಸತಿ ಹಕ್ಕು ಪತ್ರ, ನಿವೇಶನ ಹಂಚಿಕೆಯಲ್ಲಿ ನಿರ್ಲಕ್ಷ್ಯದೊಂದಿಗೆ ಜನಸಾಮಾನ್ಯ ರಿಂದ ಸುಲಿಗೆ ಮಾಡಲಾಗುತ್ತಿದೆ ಎಂದು ನಗರಸಭಾ ಸದಸ್ಯ ಕೆ.ಎಂ. ಗಣೇಶ್ ಈ ವೇಳೆ ಗಂಭೀರ ಆರೋಪಿಸಿದರು. ಕಚೇರಿ ಕೆಲಸಗಳಿಗೆ ಬರುವವರನ್ನು ಅಲೆಸುವದರೊಂದಿಗೆ ಕಸ ವಿಲೇವಾರಿ ಇತ್ಯಾದಿ ನೆಪ ಹೇಳಿ ಹತ್ತಾರು ಸಾವಿರ ರೂ. ಸುಲಿಗೆ ಮಾಡಲಾಗುತ್ತಿರುವದಾಗಿ ರಶೀತಿಗಳನ್ನು ಪ್ರದರ್ಶಿಸಿದರು.

ಬೆಳಿಗ್ಗೆಯಿಂದ ಸಂಜೆಯ ತನಕ ನಗರಸಭಾ ಆಡಳಿತ ಕಚೇರಿ ಎದುರು ಧರಣಿಯೊಂದಿಗೆ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ನಗರಸಭೆ ಆಡಳಿತ ಪ್ರಮುಖರು ದ್ವೇಷದ ರಾಜಕಾರಣ ಬಿಟ್ಟು ಅಭಿವೃದ್ಧಿಯತ್ತ ಕಾಳಜಿ ವಹಿಸುವಂತೆ ಒತ್ತಾಯಿಸಲಾಯಿತು. ಧರಣಿ ನಿರತರನ್ನು ಉದ್ದೇಶಿಸಿ ನಗರಸಭಾ ಜೆಡಿಎಸ್ ಪ್ರತಿನಿಧಿಗಳು ಮಾತನಾಡಿದರು.

ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಆಡಳಿತ ವಿಕೇಂದ್ರೀಕರಣ ವ್ಯವಸ್ಥೆ ಜನಸಾಮಾನ್ಯರಿಗೆ ಸವಲತ್ತುಗಳನ್ನು ಕಲ್ಪಿಸುವ ಸಲುವಾಗಿ ಹೊರತು ಕಾಲಹರಣ ಮಾಡಬಾರದು ಎಂದು ನೆನಪಿಸಿದರು.

ಇಂದು ಸಾಂಕೇತಿಕವಾಗಿ ಧರಣಿ ನಡೆಸುವದರೊಂದಿಗೆ ಆಡಳಿತ ಪಕ್ಷ ತನ್ನ ಕಾರ್ಯವೈಖರಿಯನ್ನು ತಿದ್ದಿಕೊಳ್ಳಲು ಕಾಲಾವಕಾಶ ನೀಡುತ್ತಿರುವದಾಗಿ ಘೋಷಿಸುತ್ತಾ, ಮುಂದಿನ ದಿನಗಳಲ್ಲಿ ಜೆಡಿಎಸ್ ತೀವ್ರ ಪ್ರತಿಭಟನೆ ರೂಪಿಸಲಿದೆ ಎಂದು ಮುನ್ನೆಚ್ಚರಿಸಿದರು.

ನಗರಸಭೆ ಯಾವದೇ ಮಾಸಿಕ ಸಭೆಗಳ ನಿರ್ಣಯಗಳನ್ನು ಅನುಷ್ಠಾನಗೊಳಿಸುತ್ತಿಲ್ಲವೆಂದೂ, ಪಾರದರ್ಶಕವಾಗಿ ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳುತ್ತಿಲ್ಲವೆಂದೂ, ಒಣ ಪ್ರತಿಷ್ಠೆ, ದ್ವೇಷ ಸಾಧನೆಯ ರಾಜಕಾರಣದಲ್ಲಿ ಆಡಳಿತಾರೂಢರು ತೊಡಗಿದ್ದಾರೆಂದು ಬೊಟ್ಟು ಮಾಡಿದರು.

ನಗರ ಜೆಡಿಎಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಹಾಲಿ ಸದಸ್ಯೆ ಲೀಲಾ ಶೇಷಮ್ಮ, ಮಾಜಿ ಸದಸ್ಯ ಅಶ್ರಫ್, ಪಕ್ಷದ ಪ್ರಮುಖರಾದ ಹೊಸೂರು ಸತೀಶ್ ಜೋಯಪ್ಪ, ನಾರಾಯಣ ರೈ, ರವಿ ಕಿರಣ್, ಮಂಜುನಾಥ್, ಜಗದೀಶ್ ಸೇರಿದಂತೆ ನಗರ ಜೆಡಿಎಸ್ ಘಟಕದ ಪ್ರಮುಖರು ಹಾಗೂ ಕಾರ್ಯಕರ್ತರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾಧ್ಯಕ್ಷರು ಪಕ್ಷದ ನಗರ ಸಭಾ ಸದಸ್ಯ ಕೆ.ಎಂ. ಗಣೇಶ್ ಅವರಿಗೆ ತಂಪು ಪಾನೀಯ ನೀಡುವದರೊಂದಿಗೆ ಧರಣಿ ಮುಕ್ತಾಯಗೊಳಿಸಲಾಯಿತು.