ಚಿತ್ರ ವರದಿ ವಾಸು
ಸಿದ್ದಾಪುರ, ಫೆ. 22: ದಿಡ್ಡಳ್ಳಿ ಹಾಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಹಾಡಿಯ ನಿವಾಸಿಗಳು ನೀರಿಗಾಗಿ ಪರದಾಡು ವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ದಿಡ್ಡಳ್ಳಿ ಹಾಡಿಯ ವ್ಯಾಪ್ತಿಯಲ್ಲಿ 75ಕ್ಕೂ ಅಧಿಕ ಕುಟುಂಬಗಳಿದ್ದು ಕಳೆದ 2 ವಾರಗಳಿಂದ ಕುಡಿಯಲು ನೀರಿಲ್ಲದೆ ಸುಮಾರು 1 ಕಿ.ಮೀ. ದೂರಕ್ಕೆ ತೆರಳಿ ಹೊತ್ತುಕೊಂಡು ಅಥವಾ ಸೈಕಲಿನಲ್ಲಿ ಬಿಂದಿಗೆಗಳನ್ನು ಕಟ್ಟಿಕೊಂಡು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಡಿಯ ಸುತ್ತಲು ಕುಡಿಯುವ ನೀರು ಒದಗಿಸಿಕೊಡುವ ನಿಟ್ಟಿನಲ್ಲಿ ಹಲವಾರು ಟ್ಯಾಂಕ್‍ಗಳಿದ್ದರು ನೀರಿಲ್ಲದ ಹಿನ್ನೆಲೆಯಲ್ಲಿ ನಿಷ್ಪ್ರಯೋಜಕವಾಗಿವೆ. ಇರುವ ಕೊಳವೆ ಬಾವಿಗಳಲ್ಲಿ ಕೂಡ ಅಂತರ್ಜಲ ಕುಸಿತದಿಂದಾಗಿ ನೀರು ಬತ್ತಿ ಹೋಗಿದೆ. ಇತ್ತೀಚೆಗೆ ಹಾಡಿಗಳ ಬಳಿ ಕೊರೆದ ಕೊಳವೆ ಬಾವಿಗಳಲ್ಲಿ ನೀರು ಸಿಗದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ. ಹಾಡಿಯ ನಿವಾಸಿಗಳು ಕುಡಿಯುವ ನೀರಿಲ್ಲದೇ ಉರಿ ಬಿಸಿಲಿನಲ್ಲೇ ದೂರಕ್ಕೆ ತೆರಳಿ ನೀರು ತರುತ್ತಿರುವ ದೃಶ್ಯ ಕಂಡುಬಂದಿದೆ. ನೀರಿನ ಸಮಸ್ಯೆಯನ್ನು ಬಗೆಹರಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕೆಂದು ಹಾಡಿಯ ನಿವಾಸಿಗಳು ಒತ್ತಾಯಿಸಿದ್ದಾರೆ. ಕಳೆದೆರಡು ವಾರಗಳಿಂದ ನೀರಿನ ಸಮಸ್ಯೆ ತೀವ್ರವಾಗಿದ್ದ ಹಿನ್ನೆಲೆಯಲ್ಲಿ ಹಾಡಿಯ ನಿವಾಸಿಗಳು ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಗಾಯತ್ರಿ ಹಾಗೂ ಪಿ.ಡಿ.ಓ. ಸ್ಥಳಕ್ಕೆ ಭೇಟಿ ನೀಡಿದರು. ಆದರೆ ಪಿ.ಡಿ.ಓ. ಅಸಹಾಯಕತೆ ತೋಡಿಕೊಂಡರು.
ಆದಿವಾಸಿ ಮುಖಂಡ ಜೆ.ಕೆ. ಅಪ್ಪಾಜಿ ಇದೀಗ ದಿಡ್ಡಳ್ಳಿ ಹಾಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಅಪ್ಪಾಜಿ ತನ್ನ ಮನೆಯಿಂದ ಮೋಟಾರ್ ಅಳವಡಿಸಿ ಸ್ವಂತ ಖರ್ಚಿನಿಂದ ಹಾಡಿಯ ಎಲ್ಲಾ ನಿವಾಸಿಗಳಿಗೆ ನೀರು ಸರಬರಾಜು ಮಾಡಿಕೊಡುವದಾಗಿ ತಿಳಿಸಿದ್ದಾರೆ. ಗ್ರಾ.ಪಂ. ಹಾಗೂ ಜಿಲ್ಲಾಡಳಿತ ಹಾಡಿಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸಿಕೊಡುವವರೆಗೂ ತನ್ನ ಮನೆಯಿಂದ ನೀರು ಒದಗಿಸಿಕೊಡುವದಾಗಿ ತಿಳಿಸಿದರು.
ದಿಡ್ಡಳ್ಳಿ ಹಾಡಿಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದರೂ ಕೂಡ ಕೆಲವರು ರಾತ್ರಿ ಸಮಯದಲ್ಲಿ ಕೆಲವು ಕೊಳವೆ ಬಾವಿಗಳಿಂದ ತಮ್ಮ ತೋಟಗಳಿಗೆ ನೀರು ಹಾಯಿಸುತ್ತಿದ್ದು ಕೂಡಲೇ ಅಂತವರ ವಿರುದ್ಧ ಪಂಚಾಯಿತಿ ಅಧಿಕಾರಿ ಕ್ರಮ ಕೈಗೊಂಡು ಅದನ್ನು ಸ್ಥಗಿತಗೊಳಿಸಬೇಕೆಂದು ಹಾಡಿಯ ನಿವಾಸಿಗಳು ಒತ್ತಾಯಿಸಿದ್ದಾರೆ.