ವೀರಾಜಪೇಟೆ ಫೆ. 22: ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಂಗಡಿ ಮಳಿಗೆಗಳ ಹರಾಜಿನಿಂದ ಪಂಚಾಯಿತಿಗೆ ವಾರ್ಷಿಕ ರೂ. 93,83,208 ಆದಾಯ ಬಂದಿದೆ. ಬಿಡ್ದಾರರ ಪೈಪೋಟಿ ಅಂಗಡಿ ಮಳಿಗೆಗಳ ಬಾಡಿಗೆ ಹೆಚ್ಚಾಗಲು ಕಾರಣವಾಗಿದ್ದು ಕೇವಲ 29 ಅಂಗಡಿಗಳ ಹರಾಜಿನಿಂದ ಪಟ್ಟಣ ಪಂಚಾಯಿತಿಗೆ ಭಾರೀ ಆದಾಯ ದೊರೆತು ದಾಖಲೆಯನ್ನು ನಿರ್ಮಿಸಿದೆ.
ಈ ಹಿಂದೆ ಪಂಚಾಯಿತಿಗೆ ಬಾಡಿಗೆಯಾಗಿ ವಾರ್ಷಿಕ ರೂ 4,96,320 ಆದಾಯ ಬರುತ್ತಿದ್ದು ಇದೀಗ ವಾರ್ಷಿಕ ಆದಾಯ 19ಪಟ್ಟು ಅಧಿಕವಾಗಿದ್ದು ಪಂಚಾಯಿತಿಯು ನಿರೀಕ್ಷಿತ ಮಟ್ಟಕ್ಕಿಂತಲೂ ಹೆಚ್ಚಿನ ಆದಾಯ ದೊರೆತಿದೆ.
ಖಾಸಗಿ ಬಸ್ ನಿಲ್ದಾಣದ ನೆಲ ಅಂತಸ್ತಿನ ತರಕಾರಿ ಅಂಗಡಿ ಮಳಿಗೆ ರೂ. 60,000 ದಿಂದ 1,53,000 ಬಾಡಿಗೆಗೆ ಹರಾಜಾಗಿದ್ದು, 29 ಮಳಿಗೆಗಳ ಹರಾಜಿನಿಂದ ತಿಂಗಳಿಗೆ ರೂ. 7,81,934 ಆದಾಯ ಬರಲಿದೆ. ಈ ಹಿಂದೆ ಇದೇ ಮಳಿಗೆಗಳಿಗೆ ರೂ. 41,360 ಆದಾಯ ಬರುತ್ತಿತ್ತು. ಉಳಿದಿರುವ 6 ಅಂಗಡಿ ಮಳಿಗೆಗಳಿಗೆ ಯಾರೂ ಟೆಂಡರ್ ಹಾಕದ ಕಾರಣ ಇದರ ಹರಾಜನ್ನು ಮುಂದೂಡ ಲಾಯಿತು. ಪಟ್ಟಣ ಪಂಚಾಯಿತಿಗೆ ಸೇರಿದ ಎಲ್ಲಾ ಮಳಿಗೆಗಳನ್ನು ಕಾನೂನಿನ ತೊಡಕಿನಿಂದಾಗಿ 18 ವರ್ಷಗಳಿಂದ ಮುಂದೂಡಲಾಗಿತ್ತು. ಮಳಿಗೆಗಳ ಹರಾಜಿಗೆ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದ್ದರಿಂದ ಪುರಭವನದಲ್ಲಿ ಹರಾಜು ಪ್ರಕ್ರಿಯೆ ಮುಕ್ತವಾಗಿ ನಡೆಯಿತು. ಹರಾಜಿನಲ್ಲಿ 161 ಮಂದಿ ಬಿಡ್ದಾರರು ಭಾಗವಹಿಸಿದ್ದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್ ಅವರ ಸಮ್ಮುಖದಲ್ಲಿ ಹರಾಜು ಪ್ರಕ್ರಿಯೆ ನಡೆಯಿತು.
ಸ್ಥಾಯಿ ಸಮಿತಿ ಅಧ್ಯಕ್ಷ ರಚನ್ ಮೇದಪ್ಪ, ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಪಂಚಾಯಿತಿ ಸದಸ್ಯರುಗಳು, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಅಭಿಯಂತರ ಎನ್.ಪಿ. ಹೇಮ್ ಕುಮಾರ್, ಯೋಜನಾ ನಿರ್ದೇಶಕ ಗೋಪಾಲಕೃಷ್ಣ, ರೆವಿನ್ಯೂ ಇನ್ಸ್ಪೆಕ್ಟರ್ ಸೋಮೇಶ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ತಾಲೂಕು ತಹಶೀಲ್ದಾರ್ ಆರ್. ಗೋವಿಂದ ರಾಜ್ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದರು.
ಅಹಿತಕರ ಘಟನೆಗಳು ನಡೆಯದಂತೆ ಪುರಭವನದ ಸುತ್ತ ಸಶಸ್ತ್ರ ಪೊಲೀಸ್ ಪಡೆ ತುಕಡಿ, ಮಹಿಳಾ ಪೊಲೀಸರು ಸೇರಿದಂತೆ 27 ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತ್ನಲ್ಲಿ ಪಾಲ್ಗೊಂಡಿದ್ದರು.