ಮಡಿಕೇರಿ, ಫೆ. 22: ಅಂತರ್ರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಅಂಗವಾಗಿ ಸಿ.ಎನ್.ಸಿ. ಆಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸತ್ಯಾಗ್ರಹ ನಡೆಯಿತು. ಕೊಡವ ತಕ್ಕನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರಿಸಬೇಕು ಮತ್ತು ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲೊಂದಾಗಿ ಪರಿಗಣಿಸಬೇಕು. ಪ್ರತಿ ವರ್ಷ ಆಕ್ಸ್‍ಫರ್ಡ್ ಡಿಕ್ಷ್ನರಿಯೂ ಜಗತ್ತಿನ ವಿವಿಧ ಭಾಷೆಗಳ 15 ಸಾವಿರ ಪದಗಳನ್ನು ಆಯ್ಕೆ ಮಾಡಿ ಅಳವಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು, ಈ ಆಕ್ಸ್‍ಫರ್ಡ್ ಡಿಕ್ಷ್ನರಿಯಲ್ಲಿ ಕೊಡವ ಭಾಷೆಯ ಪದಗಳನ್ನು ಸೇರಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸ ಲಾಯಿತು. ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ನಡೆದ ಸತ್ಯಾಗ್ರಹದಲ್ಲಿ ಅಜ್ಜಿಕುಟ್ಟಿರ ಲೋಕೇಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪುಲ್ಲೆರ ಕಾಳಪ್ಪ, ಕಾಟುಮಣಿಯಂಡ ಉಮೇಶ್, ಅಪ್ಪಾರಂಡ ಪ್ರಸಾದ್, ಬಾಚಮಂಡ ಕಸ್ತೂರಿ, ಬಾಚಮಂಡ ಬೆಲ್ಲು, ಅರೆಯಡ ಗಿರೀಶ್, ಮಂದಪಂಡ ಮನೋಜ್, ಬೇಪಡಿಯಂಡ ಬಿದ್ದಪ್ಪ, ನಂದಿನೆರವಂಡ ವಿಜು, ಅಪ್ಪಚ್ಚಿರ ರಮ್ಮಿ ನಾಣಯ್ಯ ಮುಂತಾದವರು ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ ಅವರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.