ನಾಪೋಕ್ಲು, ಫೆ. 22: ಹೋಬಳಿಯಾದ್ಯಂತ ವಿದ್ಯುತ್ ಸಮಸ್ಯೆ ತಲೆದೋರಿದ್ದು ಸಮಸ್ಯೆಯನ್ನು ಕೂಡಲೇ ಸರಿಪಡಿಸದಿದ್ದಲ್ಲಿ ಸಂಘಸಂಸ್ಥೆಗಳ ನೆರವಿನೊಂದಿಗೆ ಇಲಾಖೆ ವಿರುದ್ಧ ಹೋರಾಟ ನಡೆಸಲಾಗುವದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ. ನಾಪೋಕ್ಲು ಸುತ್ತಮುತ್ತ ಗ್ರಾಮಾಂತರ ಪ್ರದೇಶಗಳಲ್ಲಿ ಕಳೆದ ಒಂದುವಾರದ ಹಿಂದೆ ತೀವ್ರ ವಿದ್ಯುತ್ ಸಮಸ್ಯೆ ತಲೆದೋರಿತ್ತು. ಈಚೆಗೆ ಹೆಚ್ಚಿನ ಅವಧಿ ವಿದ್ಯುತ್ ಕಡಿತದೊಂದಿಗೆ ವೋಲ್ಟೇಜ್ ವ್ಯತ್ಯಯಗೊಳ್ಳುತ್ತಿದೆ ಎಂದು ಅವರು ದೂರಿದ್ದಾರೆ. ಪರೀಕ್ಷಾ ಅವಧಿಯಲ್ಲಿ ವಿದ್ಯುತ್ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ವ್ಯಾಪಾರಸ್ಥರು ತೊಂದರೆಗೆ ಸಿಲುಕಿದ್ದಾರೆ. ವೋಲ್ಟೇಜ್ ಸಮಸ್ಯೆಯಿಂದ ಉಪಕರಣಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೂಡಲೇ ಸಮಸ್ಯೆ ಪರಿಹರಿಸಲು ಸೆಸ್ಕ್ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಶಿವಚಾಳಿಯಂಡ ಅಂಬಿಕಾರ್ಯಪ್ಪ, ಪ್ರಮುಖ ಪಾಡಿಯಮ್ಮಂಡ ಮನುಮಹೇಶ್, ಮತ್ತಿತರರು ಒತ್ತಾಯಿಸಿದ್ದಾರೆ.