*ಗೋಣಿಕೊಪ್ಪಲು, ಫೆ. 23 : ಅಭಿವೃದ್ಧಿ ಕೆಲಸಗಳ ಮೇಲೆ ರಾಜಕೀಯ ಮಾಡುವ ಪ್ರವೃತ್ತಿಯನ್ನು ಕಾಂಗ್ರೆಸ್ ಪಕ್ಷ ಬೆಳೆಸಿಕೊಂಡಿದೆ ಎಂದು ಸರ್ಕಾರದ ವಿರುದ್ದ ಶಾಸಕ ಕೆ.ಜಿ. ಬೋಪಯ್ಯ ಕಿಡಿ ಕಾರಿದ್ದಾರೆ.

ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣಗೇರಿ - ಬೆಳ್ಳೂರು ರಸ್ತೆಯ ಮರುಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ರಸ್ತೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಸರ್ಕಾರ ವಿಶೇಷ ಅನುದಾನವನ್ನು ನೀಡಿಲ್ಲ. ಹಾಗಾಗಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಬಯಸಿದಂತೆ ಮಾಡಲು ಸಾಧ್ಯವಾಗಿಲ್ಲ. ರಸ್ತೆ ಕಾಮಗಾರಿಗಳು ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳ ಮೇಲೆ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಬಿ.ಜೆ.ಪಿ. ಸರ್ಕಾರದ ಆಡಳಿತವಿದ್ದಾಗ ಯಾವದೇ ಪಕ್ಷ ಬೇದವಿಲ್ಲದೆ ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ತಾ.ಪಂ ಮಾಜಿ ಉಪಾಧ್ಯಕ್ಷೆ ತೀತಿರ ಊರ್ಮಿಳಾ ಮಾತನಾಡಿ ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ 5 ಗ್ರಾಮಗಳಿಗೂ ಅನುದಾನ ಬಿಡುಗಡೆ ಗೊಳಿಸಿ ರಸ್ತೆ ಅಭಿವೃದ್ದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಆರ್.ಎಂ.ಸಿ. ಸದಸ್ಯ ಪ್ರವೀಣ್ ಮಾತನಾಡಿ ಪ್ರಥಮ ಆದ್ಯತೆಯಲ್ಲಿ ಅನುದಾನ ಬಳಸಿ ಗ್ರಾಮದ ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು. ಈ ಸಂದರ್ಭ ತಾ.ಪಂ ಉಪಾಧ್ಯಕ್ಷ ನೆಲ್ಲೀರ ಚಲನ್, ಗ್ರಾಮ ಸದಸ್ಯರುಗಳಾದ ಅಜ್ಜಿಕುಟ್ಟಿರ ಮಾದಪ್ಪ, ದಿವೀನ್, ಜಿಲ್ಲಾ ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ತಾಲ್ಲೂಕು ಮಂಡಳ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷ ಸನ್ನು ಉತ್ತಪ್ಪ, ಯುವ ಮೋರ್ಚಾ ಅಧ್ಯಕ್ಷ ಕಾವೇರಿಯಪ್ಪ, ಪಿ.ಎಲ್.ಡಿ. ಬ್ಯಾಂಕ್ ಸದಸ್ಯ ಹರೀಶ್ ನಂಜಪ್ಪ, ಫೆಡರೇಷನ್ ನಿರ್ದೇಶಕ ಮಧು ದೇವಯ್ಯ ಇದ್ದರು.