ಮಡಿಕೇರಿ, ಫೆ. 23: ಪರಸ್ಪರ ಕೂಡಿ ಬಾಳುತ್ತಿದ್ದ ಎರಡು ಕುಟುಂಬಗಳ ನಡುವೆ ಯಾರಿಗೂ ಏನೊಂದು ತಿಳಿಯದ ರೀತಿಯಲ್ಲಿ ಇಂದು ಮಧ್ಯಾಹ್ನ ಅಸಮಾಧಾನ ಸ್ಫೋಟಗೊಂಡ ಪರಿಣಾಮ, ಪರಿಚಿತ ಮಹಿಳೆಗೆ ಗುಂಡು ಹೊಡೆದು ಸಾಯಿಸಿ, ಅದೇ ಕೋವಿಯಿಂದ ವ್ಯಕ್ತಿಯೋರ್ವ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕೃತ್ಯ ಕಾಲೂರು ಗ್ರಾಮದಲ್ಲಿ ಸಂಭವಿಸಿದೆ. ಅಲ್ಲಿನ ನಿವಾಸಿ ಚನ್ನಪಂಡ ನಂಜಪ್ಪ ಎಂಬವರ ಪತ್ನಿ ವಿಶಾಲಾಕ್ಷಿ ಯಾನೆ ಲಲಿತಾ (42) ಎಂಬಾಕೆಯನ್ನು ಗುಂಡುಹಾರಿಸಿ ಕೊಲೆಗೈದಿರುವ ಆರೋಪಿ, ಅದೇ ಗ್ರಾಮದ ಕುಳೋಡಂಡ ಧರ್ಮರಾಯ ಯಾನೆ ಕಾಶಿ (43) ತಾನೂ ಕೂಡ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಘಟನೆ ಸಂಭವಿಸಿದ್ದು, ನಂಜಪ್ಪ ಅವರ ಪತ್ನಿ ವಿಶಾಲಾಕ್ಷಿ ತನ್ನ ಮನೆಯ ಅಂಗಳದಲ್ಲಿ ಕಾಫಿಯನ್ನು ಶುದ್ಧೀಕರಿಸುತ್ತಿದ್ದರೆನ್ನಲಾಗಿದೆ. ಈ ಸಂದರ್ಭ ಕೋವಿಯೊಂದಿಗೆ ತನ್ನ ಮನೆಯಿಂದ ಬಂದಿರುವ ಧರ್ಮರಾಯ ನೇರವಾಗಿ
(ಮೊದಲ ಪುಟದಿಂದ) ಮಹಿಳೆಯ ಕುತ್ತಿಗೆಯಿಂದ ಕೆಳಭಾಗಕ್ಕೆ ಗುಂಡು ಹಾರಿಸಿದ್ದಾನೆ. ವಿಶಾಲಾಕ್ಷಿ ಅಲ್ಲೇ ಕುಸಿದುಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಕ್ಷಣಾರ್ಧದಲ್ಲಿ ಮತ್ತೊಂದು ಗುಂಡಿನ ಶಬ್ಧ ಕೇಳಿಸಿದ್ದು, ಅಕ್ಕಪಕ್ಕದವರು ಶಬ್ಧ ಬಂದೆಡೆಗೆ ಧಾವಿಸಿ ನೋಡುವಷ್ಟರಲ್ಲಿ ಧರ್ಮರಾಯ ಗಲ್ಲಕ್ಕೆ ಹೊಡೆದುಕೊಂಡಿದ್ದ ಗುಂಡು ಮುಖವನ್ನು ಛಿದ್ರಗೊಳಿಸಿ ರಕ್ತದ ಕೋಡಿ ಹರಿಯತೊಡಗಿದೆ.
ಈ ಘಟನೆ ನಡೆಯುವ ವೇಳೆಗೆ ಇಂದು ಶುಕ್ರವಾರದ ಮಡಿಕೇರಿ ಸಂತೆಗೆ ದುರ್ದೈವಿ ವಿಶಾಲಾಕ್ಷಿಯ ಪತಿ ನಂಜಪ್ಪ ಹಾಗೂ ಆತ್ಮಹತ್ಯೆಗೆ ಮುಂದಾಗಿದ್ದ ಧರ್ಮರಾಯನ ಪತ್ನಿ ರಾಣಿ ಕೂಡ ಗ್ರಾಮದವರೊಡಗೂಡಿ ಬಂದಿದ್ದು, ಮೊಬೈಲ್ ಕರೆಯೊಂದಿಗೆ ವಿಷಯ ತಿಳಿದು ಮನೆಯತ್ತ ದೌಡಾಯಿಸಿದ್ದಾರೆ. ಕೂಡಲೇ ಜೀವನ್ಮರಣ ಸ್ಥಿತಿಯಲ್ಲಿದ್ದ ಧರ್ಮರಾಯನನ್ನು ಇಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ. ಬಳಿಕ ಮಹಿಳೆಯ ಶವವನ್ನು ಆಸ್ಪತ್ರೆಗೆ ತರಲಾಗಿದೆ.
ವಿಷಯ ತಿಳಿದು ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚೇತನ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಹಜರು ನಡೆಸುವದರೊಂದಿಗೆ ಕಾನೂನು ಕ್ರಮ ಕೈಗೊಂಡಿದ್ದಾರೆ. ಮೃತೆ ವಿಶಾಲಾಕ್ಷಿಯ ಪತಿ ಘಟನೆ ಬಗ್ಗೆ ದೂರು ಸಲ್ಲಿಸಿದ್ದು, ಕೆಲವು ದಿನದ ಹಿಂದೆ ತನ್ನ ಪತ್ನಿಯೊಂದಿಗೆ ಆರೋಪಿ ಅನುಚಿತವಾಗಿ ವರ್ತಿಸಿದ್ದು, ಇಂದು ಮತ್ತೆ ಆಕೆ ಒಂಟಿಯಾಗಿದ್ದ ಸಮಯ ಸಾಧಿಸಿ ಅದೇ ರೀತಿ ದುಷ್ಕøತ್ಯಕ್ಕೆ ವಿಫಲ ಯತ್ನದೊಂದಿಗೆ ಕೊಲೆ ಮಾಡಿರಬಹುದೆಂದು ಹೇಳಿಕೆ ನೀಡಿದ್ದಾರೆ. ಆ ಮೇರೆಗೆ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಡಿವೈಎಸ್ಪಿ ಕೆ.ಎಸ್. ಸುಂದರರಾಜ್ ತಿಳಿಸಿದ್ದಾರೆ.
ಎರಡು ಶವಗಳನ್ನು ಇಲ್ಲಿನ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು, ತಾ. 24ರಂದು (ಇಂದು) ಮರಣೋತ್ತರ ಪರೀಕ್ಷೆ ನಡೆಯಬೇಕಿದೆ. ಮೃತೆ ವಿಶಾಲಾಕ್ಷಿ ಪತಿ ನಂಜಪ್ಪ ಹಾಗೂ ಇಬ್ಬರು ಪುತ್ರರನ್ನು ಅಗಲಿದರೆ, ಧರ್ಮರಾಯ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.