ಸುಂಟಿಕೊಪ್ಪ,ಫೆ. 23 : ಅವೈಜ್ಞಾನಿಕವಾಗಿ ಇಳಿಜಾರು ರಸ್ತೆಯ ತೊರೆಗೆ ಮೋರಿ ನಿರ್ಮಿಸಿರುವದರಿಂದ ಪ್ರಾಣ ಹಾನಿಗೆ ಆಹ್ವಾನ ನೀಡುತ್ತಿದೆ.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಪಂಪ್ಹೌಸ್ ವಾರ್ಡ್ನಲ್ಲಿ 200ಕ್ಕೂ ಅಧಿಕ ಮನೆಗಳಿವೆ. ಸುಂಟಿಕೊಪ್ಪ ಪಂಚಾಯಿತಿಯ ದೊಡ್ಡ ವಾರ್ಡ್ ಆಗಿದ್ದು ಅತೀ ಹೆಚ್ಚು ಜನಸಂಣಿಯನ್ನು ಹೊಂದಿರುವ ಪಂಪ್ಹೌಸ್ಗೆ ತೆರಳುವ ಇಳಿಜಾರು ರಸ್ತೆ ಚರಂಡಿಗೆ ಮೋರಿ ನಿರ್ಮಿಸಲಾಗಿದೆ. ಈ ಮೋರಿಗೆ ತಡೆಗೋಡೆ ನಿರ್ಮಿಸದೆ ಇರುವದರಿಂದ ವಾಹನ ಚಾಲಕರು ರಸ್ತೆ ಹಾಗೂ ಮೋರಿಯ ಅಂದಾಜು ಗ್ರಹಿಸಲಾಗುತ್ತಿಲ್ಲ. ಅಚಾನಕ್ ಆಗಿ ರಸ್ತೆಯೆಂದು ಗ್ರಹಿಸಿ ಮೋರಿಗೆ ಇಳಿದರೆ, ಅಂದಾಜು 10 ರಿಂದ 15 ಅಡಿಗಳ ಪ್ರಪತಾದ ಕೆಳಗಿನ ತೊರೆಗೆ ಬೀಳುವ ಸಾಧ್ಯತೆ ಇದೆ. ಈಗಾಗಲೇ ಬೈಕ್ ಸೇರಿದಂತೆ ವಾಹನಗಳು ಮೋರಿಯಿಂದ ಬಿದ್ದು ಸವಾರರು ಗಾಯಗೊಂಡಿದ್ದಾರೆ.
ಪಂಪ್ಹೌಸ್ ರಸ್ತೆಯ ಈ ಮೋರಿ ಕೆಳಗಿನ ಚರಂಡಿಯಲ್ಲಿ ಕಲುಷಿತ ನೀರು ಕಟ್ಟಿ ನಿಂತಿದ್ದು ಗಬ್ಬೆದ್ದು ನಾರುತ್ತಿದೆ. ಬೇಸಿಗೆಯ ಸುಡುಬಿಸಿಲು ಆರಂಭಗೊಂಡಿದ್ದು ಸಾಂಕ್ರಾಮಿಕ ರೋಗ ರುಜಿನಗಳಿಗೆ ಆಹ್ವಾನ ನೀಡುತ್ತಿದೆ. ಗ್ರಾಮ ಪಂಚಾಯಿತಿಯವರು ಮೋರಿಗೆ ತಡೆಗೋಡೆ ನಿರ್ಮಿಸಿ, ಚರಂಡಿಯನ್ನು ಶುಚಿಗೊಳಿಸಿ ಮುಂದೆ ಸಂಭವಿಸಬಹುದಾದ ಅನಾಹುತ ತಪ್ಪಿಸಬೇಕಿದೆ.
- ಬಿ.ಡಿ.ರಾಜುರೈ