ಸೋಮವಾರಪೇಟೆ, ಫೆ. 23: ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಅಲ್ಪಸಂಖ್ಯಾತ ಘಟಕದಿಂದ ತಾ. 27 ರಂದು ಪೂರ್ವಾಹ್ನ 10 ಗಂಟೆಗೆ ಕುಶಾಲನಗರದ ರೈತ ಭವನದಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದು ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ರಫೀಕ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್, ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಸಯ್ಯದ್ ಮುಹೀದ್ ಅಲ್ತಾಫ್, ರಾಷ್ಟ್ರ ಉಪಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯಾ, ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್. ವಿಶ್ವನಾಥ್, ಕೊಡಗು ಉಸ್ತುವಾರಿ ಜಿ.ಟಿ. ದೇವೇಗೌಡ, ಕ್ರಿಶ್ಚಿಯನ್ ಘಟಕದ ಅಧ್ಯಕ್ಷ ವಿಲ್ಸನ್ ರೆಡ್ಡಿ, ಮಾಜಿ ಸಚಿವ ಜೀವಿಜಯ, ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.
ಸಮಾವೇಶದಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದರಲ್ಲದೇ, ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷರು ಮುಸ್ಲಿಂ ಸಮುದಾಯದವರನ್ನು ತುಚ್ಛ ಹೇಳಿಕೆಗಳಿಂದ ನಿಂದಿಸಿದರಿಂದ ಮನನೊಂದು ಹಲವಷ್ಟು ಮಂದಿ ಅಲ್ಪಸಂಖ್ಯಾತರು ಆ ಪಕ್ಷವನ್ನು ತೊರೆದು ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.
ಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಘಟಕದ ಜಿಲ್ಲಾ ವಕ್ತಾರ ಅಬ್ಬಾಸ್, ಕ್ಷೇತ್ರ ಉಪಾಧ್ಯಕ್ಷ ಎಂ.ಬಿ. ಮಹಮ್ಮದ್, ಪ್ರಮುಖರಾದ ಪಿ.ಎ. ಅಬ್ದುಲ್ಲಾ, ಎಂ.ಎ. ಹ್ಯಾರಿಸ್ ಉಪಸ್ಥಿತರಿದ್ದರು.