ವೀರಾಜಪೇಟೆ, ಫೆ. 23 : ವಿದ್ಯುತ್ ಪ್ರವಾಹದಿಂದ ಆಯಿಲ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡು ಮರದ ಮಿಲ್ ಬೆಂಕಿಗೆ ಆಹುತಿಯಾದ ಘಟನೆ ನಗರದ ಪಂಜರ್‍ಪೇಟೆಯ ಗಣಪತಿ ಬೀದಿಯಲ್ಲಿ ಸಂಭವಿಸಿದೆ.

ಪಂಜರ್‍ಪೇಟೆಯಿಂದ ಗಣಪತಿ ಬೀದಿಗೆ ತೆರಳುವ ರಸ್ತೆಯ ಅಂಚಿನಲ್ಲಿರುವ ಮೂರ್ನಾಡು ನಿವಾಸಿ ಪ್ರಶಾಂತ್ ಎಂಬವರಿಗೆ ಸೇರಿದ ಮರದ ಮಿಲ್‍ಗೆ ಸಂಜೆ ಐದು ಗಂಟೆಯ ಹೊತ್ತಿಗೆ ಬೆಂಕಿ ತಗುಲಿದ್ದು ಮಿಲ್ಲಿನ ವ್ಯವಸ್ಥಾಪಕ ಮಾಥ್ಯೂ ಅವರು ಗಮನಿಸಿದಾಗ ವಿದ್ಯುತ್ ಪ್ರವಾಹಕದಿಂದ ಆಯಿಲ್ ಸೋರಿಕೆಯಾಗುತ್ತಿರುವದು ಕಂಡು ಬಂದಿದೆ. ಬಿಸಿಲಿನ ತಾಪಕ್ಕೆ ವಿದ್ಯುತ್ ಪ್ರವಾಹಕದಲ್ಲಿ ಬೆಂಕಿ ಕಾಣಿಸಿಕೊಂಡು ಪಸರಿಸಿ ಮರದ ಹೊಟ್ಟು ಹಾಗೂ ಯಂತ್ರಗಳಿಗೆ ಬೆಂಕಿ ಹಬ್ಬಿದೆ. ಅಗ್ನಿಶಾಮಕ ದಳಕ್ಕೆ ದೂರವಾಣಿ ಕರೆ ಮಾಡಲಾಗಿ ಅಗ್ನಿಶಾಮಕ ದಳವು ಸ್ಥಳಕ್ಕೆ ಆಗಮಿಸಿ ಸುಮಾರು 2 ಗಂಟೆಗಳ ಕಾಲ ಸತತ ಪ್ರಯತ್ನದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿ ಯಾಯಿತು. ಮರದ ಮಿಲ್ಲಿನಲ್ಲಿ ವ್ಯವಸ್ಥಾಪಕರು ಹಾಗೂ ಕಿರಿಯ ಸಹಾಯಕರು ಮಾತ್ರ ಇದ್ದರು. ಸ್ಥಳಕ್ಕೆ ವೀರಾಜಪೇಟೆ ನಗರ ಪೊಲೀಸ್ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಹಾಗೂ ಸಿಬ್ಬಂದಿಗಳು ಅಗಮಿಸಿ ಹೆಚ್ಚಿನ ಅನಾಹುತ ತಡೆಗಟ್ಟುವಲ್ಲಿ ಸಹಕರಿಸಿದ್ದಾರೆ. ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.