ಗೋಣಿಕೊಪ್ಪ ವರದಿ, ಫೆ. 23: ಸರ್ಕಾರದ ಪರಿಶಿಷ್ಟ ಜಾತಿ ಉಪ ಯೋಜನೆ, ಗಿರಿಜನ ವಿಶೇಷ ಯೋಜನೆ ಅಭಿವೃದ್ಧಿ ಮುಂಗಡ ಪತ್ರದಲ್ಲಿ ಸ್ಥಳೀಯ ಯರವ ಸಮುದಾಯವನ್ನು ಕೈಬಿಟ್ಟಿರುವದನ್ನು ಖಂಡಿಸಿ ಯರವ ಯುವ ಒಕ್ಕೂಟದಿಂದ ಮಾರ್ಚ್ 5 ರಂದು ಪೊನ್ನಂಪೇಟೆ ತಾಲೂಕು ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವದು ಎಂದು ಯರವ ಯುವ ಒಕ್ಕೂಟ ಗೌರವ ಅಧ್ಯಕ್ಷ ಪಿ.ಎಸ್. ಮುತ್ತ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಭಿವೃದ್ಧಿ ಯೋಜನೆಯಡಿ ಜೇನು ಕುರುಬ ಹಾಗೂ ಸೋಲಿಗ ಸಮುದಾಯಕ್ಕೆ ಮೂಲಭೂತ ಸೌಲಭ್ಯ ಮತ್ತು ಹಣಕಾಸು ವ್ಯವಸ್ಥೆಯನ್ನು ಮೀಸಲಿಟ್ಟಿದೆ. ಆದರೆ ಯರವ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ತೀರ ಹಿಂದುಳಿದ ಬುಡಕಟ್ಟು ಸಮಾಜವಾಗಿದ್ದರೂ ಕಡೆಗಣಿಸಲಾಗಿದೆ. ಶೇ. 77 ರಷ್ಟು ಯರವ ಸಮುದಾಯ ಸ್ವಂತ ಮನೆಗಳಿಲ್ಲದೆ ಸ್ಥಳೀಯ ಕಾಫಿ ತೋಟದ ಲೈನ್ ಮನೆಗಳಲ್ಲಿ ಹಲವಾರು ದಶಕಗಳಿಂದ ಸರ್ಕಾರದ ಯಾವದೇ ಸೌಲಭ್ಯ ಪಡೆಯದೆ ಅತಂತ್ರರಾಗಿದ್ದಾರೆ.

ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳೊಂದಿಗೆ ಗುರುತಿಸುವಲ್ಲಿ ಹಿರಿಯ ಅಧಿಕಾರಿಗಳು ವಿಫಲರಾಗಿದ್ದಾರೆ. ಸಮಸ್ಯೆಗಳಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಇಲ್ಲದಿದ್ದಲ್ಲಿ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದ್ದಾರೆ.