ಶ್ರೀಮಂಗಲ, ಫೆ. 23: ಜಿಲ್ಲೆಯ ಮೂಲಕ ರೈಲ್ವೆ ಮಾರ್ಗ ಸೇರಿದಂತೆ ಯಾವದೇ ಮಾರಕ ಯೋಜನೆಗಳಿಗೆ ಅವಕಾಶ ನೀಡಬಾರದು. ಪ್ರಸ್ತಾವನೆ ಯಲ್ಲಿರುವ ರೈಲ್ವೆ ಮಾರ್ಗ ಹಾಗೂ ಬಹುಪಥ (6 ಹಾಗೂ 8 ಪಥದ ರಸ್ತೆ) ರಸ್ತೆಗಳಂತ ಯೋಜನೆಗಳನ್ನು ರೂಪಿಸದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ನಿಯೋಗ ಭೇಟಿ ಮಾಡಿ ಒತ್ತಾಯಿಸಲು ಹಾಗೂ ಸರ್ಕಾರ ಈ ಮಾರಕ ಯೋಜನೆ ಗಳನ್ನು ಅಧಿಕೃತವಾಗಿ ಸ್ಥಗಿತ ಗೊಳಿಸುವ ಆದೇಶ ಹೊರಡಿಸು ವವರೆಗೂ ಸರಣಿ ಹೋರಾಟ ಮುಂದುವರೆಸಲು ನಿರ್ಣಯ ಕೈಗೊಳ್ಳಲಾಯಿತು. ಕೊಡಗು ರೈಲ್ವೆ ವಿರೋಧಿ ಹೋರಾಟ ವೇದಿಕೆ ವತಿಯಿಂದ ಮಾರಕ ಯೋಜನೆಗಳನ್ನು ತಡೆಯಲು ನಡೆದ ಹೋರಾಟ ಹಾಗೂ ಮುಂದಿನ ಕಾರ್ಯ ಯೋಜನೆ ಬಗ್ಗೆ ಸಭೆ ನಡೆಸ ಲಾಯಿತು. ವೇದಿಕೆಯ ಸಂಚಾಲಕ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ ಮಾತನಾಡಿ, ರೈಲ್ವೆ ಯೋಜನೆ ವಿರುದ್ಧ ವೇದಿಕೆ ಹಮ್ಮಿಕೊಂಡಿದ್ದ ಹೋರಾಟವನ್ನು ಪ್ರಧಾನಿ ನರೇಂದ್ರ ಮೋದಿಯವರ ವಿರೋಧಿ ಹೋರಾಟ ಹಾಗೂ ವೇದಿಕೆಯನ್ನು ಕಾಂಗ್ರೆಸ್ ಬಿ ಟೀಂ ಎಂದು ಅಪಪ್ರಚಾರ ಮಾಡಿ ಜನರನ್ನು ಪ್ರತಿಭಟನಾ ರ್ಯಾಲಿಗೆ ಹೋಗುವದನ್ನು ತಡೆಯಲು ಷಡ್ಯಂತ್ರ ಮಾಡಿದರೂ, ಇದಕ್ಕೆ ಕೊಡಗಿನ ಮೇಲೆ ನೈಜ ಕಳಕಳಿ ಇರುವ ಪ್ರಜ್ಞಾವಂತ ನಾಗರಿಕರು ಕಿವಿಗೊಡದೆ ಬೆಂಬಲ ನೀಡಿದ್ದಾರೆ ಎಂದು ಹೇಳಿದರು. ವೇದಿಕೆಯ ಮುಖಂಡ ಕರ್ನಲ್ ಸಿ.ಪಿ. ಮುತ್ತಣ್ಣ ಮಾತನಾಡಿ, ಮೈಸೂರಿನಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಸಂಸದ ಪ್ರತಾಪ್ ಸಿಂಹ ಜಿಲ್ಲೆಯ ಮೂಲಕ ಯಾವದೇ ರೈಲ್ವೆ ಯೋಜನೆಗೆ ಅವಕಾಶ ನೀಡುವದಿಲ್ಲ ಎಂದು ಭರವಸೆ ನೀಡಿದ್ದಾರೆ. ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರನ್ನು ಜಿಲ್ಲೆಯ ನಿಯೋಗ ಸಹಿತ ಭೇಟಿಯಾಗಿ ಆತಂಕ ದೂರ ಮಾಡುವ ಭರವಸೆ ನೀಡಿದ್ದಾರೆ.
ಜಿಲ್ಲೆಯ ಮೂಲಕ ಪರಿಸರವನ್ನು ಹಾಗೂ ಜನರ ಆಸ್ತಿ ಪಾಸ್ತಿಯನ್ನು ನಷ್ಟಗೊಳಿಸುವಂತಹ ಬಹುಪಥದ ರಸ್ತೆಗೆ ಅವಕಾಶ ಇಲ್ಲ. ಇರುವ ರಸ್ತೆಯನ್ನೇ ಅಗಲೀಕರಣ ಮಾಡದೇ ಮೇಲ್ದರ್ಜೆ ಗೇರಿಸಲಾಗುವದು ಎಂದು ಹೇಳಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಯೋಜನಾಧಿಕಾರಿ ಗಳೊಂದಿಗೆ ಭೇಟಿ ಮಾಡಿಸಿ ಖಾತ್ರಿ ಪಡಿಸಿಕೊಳ್ಳುವ ಭರವಸೆ ನೀಡಿದ್ದಾರೆ ಎಂದರು. ವೇದಿಕೆಯ ಮುಖಂಡ ಮಾಚಿಮಾಡ ಎಂ. ರವೀಂದ್ರ ಮಾತನಾಡಿ, ಮುಂದಿನ ದಿನಗಳಲ್ಲಿ ಜಿಲ್ಲೆಗೆ ಮಾರಕವಾಗುವ ಯಾವದೇ ಯೋಜನೆಯನ್ನು ತಡೆಯಲು ಹಾಗೂ ಜಿಲ್ಲೆಯ ಹಿತರಕ್ಷಣೆಗಾಗಿ ಒಗ್ಗಟ್ಟಿನ ಬೆಂಬಲ ನೀಡಬೇಕೆಂದು ಕರೆ ನೀಡಿದರು. ಈ ಸಂದರ್ಭ ವೇದಿಕೆಯ ಪ್ರಮುಖರಾದ ಜಿಲ್ಲಾ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ, ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶೆರಿ ಸುಬ್ಬಯ್ಯ, ಪೊನ್ನಂಪೇಟೆ ಎಪಿಎಂಸಿ ಅಧ್ಯಕ್ಷ ಮಲ್ಲಮಾಡ ಪ್ರಭು ಪೂಣಚ್ಚ, ಗೋಣಿಕೊಪ್ಪ ಹಿಂದೂ ಮಲೆಯಾಳಿ ಸಂಘದ ಅಧ್ಯಕ್ಷ ಶರತ್ಕಾಂತ್ ಉಪಸ್ಥಿತರಿದ್ದರು.