ಮಡಿಕೇರಿ, ಫೆ.23 : ಕಾಫಿತೋಟಗಳ ಲೈನ್ ಮನೆಗಳಲ್ಲಿ ವಾಸವಿರುವ ನಿವೇಶನ ರಹಿತ ಪರಿಶಿಷ್ಟ ಕುಟುಂಬಗಳಿಗೆ ನಿವೇಶನ ಗುರುತಿಸಿ ಹಂಚಿಕೆ ಮಾಡಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದರು

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲೆಯ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ವಾಸವಿರುವ ನಿವೇಶನ ರಹಿತ ಪರಿಶಿಷ್ಟ ನಿವೇಶನ ಒದಗಿಸುವ ಕುರಿತ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೆದಮುಳ್ಳೂರು ಗ್ರಾಮದಲ್ಲಿ 7.50 ಎಕರೆ ಇದ್ದು ನಿವೇಶನ ಒದಗಿಸಲು ಕಾನೂನು ರೀತಿಯಲ್ಲಿ ಯಾವದೇ ತೊಂದರೆಗಳಿರವದಿಲ್ಲವೆಂದು ನಿರ್ಧರಿಸಿ ನಿವೇಶನ ಒದಗಿಸುವದು ಸೂಕ್ತವಾಗಿದ್ದು, ಅದನ್ನು ಫಲಾನುಭವಿಗಳಿಗೆ ನೀಡಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸೂಚನೆ ನೀಡಿದರು

ಸೂಕ್ಷ್ಮ ಅರಣ್ಯ ಪ್ರದೇಶ ಮತ್ತು ಕಂದಾಯ ಗ್ರಾಮಗಳನ್ನು ಬಿಟ್ಟು ಸರ್ಕಾರದ ಜಾಗವಾಗಿರಬೇಕು. ಜಿಲ್ಲೆಗೆ ಹತ್ತಿರದಲ್ಲಿರದಲ್ಲಿರುವಂತಹ ಜಾಗವನ್ನು ಗುರುತು ಮಾಡಿ ತಿಳಿಸಿ ಎಂದು ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ ಅವರು ತಿಳಿಸಿದರು. ಜಿ.ಪಂ ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ ಮೂರು ತಾಲೂಕಿನ ಮನೆಕಟ್ಟಿಕೊಳ್ಳಲು ಗ್ರಾಮ ಪಂಚಾಯಿತಿಗಳಲ್ಲಿ ಎನ್.ಓ.ಸಿ ಕೊಡುವಾಗ ಪರಿಶೀಲನೆ ಮಾಡಿ ಕೊಡಬೇಕು ಎಂದು ತಿಳಿಸಿದರು.

ಐಟಿಡಿಪಿ ಅಧಿಕಾರಿಗಳಾದ ಪ್ರಕಾಶ್ ಮಾತನಾಡಿ ಕೊಡಗು ಜಿಲ್ಲೆಯ ಲೈನ್‍ಮನೆಗಳಲ್ಲಿ ವಾಸವಿರುವ ಗಿರಿಜನ ಕುಟುಂಬದವರು ನಿವೇಶನ ಕೋರಿ ಸಲ್ಲಿಸಿದ್ದಾರೆ. ಅವುಗಳಲ್ಲಿ ಮಡಿಕೇರಿಯಿಂದ 6 ಅರ್ಜಿಗಳು, ಸೋಮವಾರಪೇಟೆಯಿಂದ 25 ಅರ್ಜಿಗಳು, ವೀರಾಜಪೇಟೆಯಿಂದ 815 ಅರ್ಜಿಗಳು ಸಲ್ಲಿಸಿರುತ್ತಾರೆ ಒಟ್ಟಾರೆ 846 ಅರ್ಜಿಗಳನ್ನು ಸಲ್ಲಿಸಿರುತ್ತಾರೆ ಎಂದು ತಿಳಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಗಳಾದ ಮರಿಯಾ ಕ್ರಿಸ್ತುರಾಜ, ಐಟಿಡಿಪಿ ಅಧಿಕಾರಿಗಳಾದ ಪ್ರಕಾಶ್, ತಹಶೀಲ್ದಾರ್ ಕುಸುಮ ಇತರರು ಇದ್ದರು.