ಮಡಿಕೇರಿ, ಫೆ. 23: ಕೊಡಗು ಜಿಲ್ಲೆಯಲ್ಲಿ ಮೇಲಿಂದ ಮೇಲೆ ಸಂಭವಿಸುತ್ತಿರುವ ಆನೆ - ಮಾನವ ಸಂಘರ್ಷ ಹಾಗೂ ವನ್ಯ ಮೃಗಗಳ ಧಾಳಿಗೆ ಜಾನುವಾರುಗಳು ಬಲಿಯಾಗುತ್ತಿರುವದನ್ನು ಶಾಶ್ವತವಾಗಿ ತಡೆಗಟ್ಟಬೇಕೆಂದು ಆಗ್ರಹಿಸಿ ಇಂದು ರೈತ ಸಂಘದ ನೇತೃತ್ವದಲ್ಲಿ ಕಾರ್ಮಿಕರು, ಬೆಳೆಗಾರರು ಒಗ್ಗೂಡಿ ಪ್ರತಿಭಟನೆ ಸಲ್ಲಿಸುವದರೊಂದಿಗೆ ಇಲ್ಲಿನ ಅರಣ್ಯ ಭವನಕ್ಕೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಇಲ್ಲಿನ ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡ ಬೆಳೆಗಾರ ಪ್ರಮುಖರು, ಕಾರ್ಮಿಕರು ಹಾಗೂ ರೈತ ಸಂಘಟನೆ ಪದಾಧಿಕಾರಿಗಳು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ಅಲ್ಲಿಂದ ಮುಖ್ಯ ಮಾರ್ಗದಿಂದ ಸುದರ್ಶನ ವೃತ್ತಕ್ಕಾಗಿ ಮೆರವಣಿಗೆಯಲ್ಲಿ ಅರಣ್ಯ ಭವನದತ್ತ ಸಾಗಿದರು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರತಿಭಟನಾಕಾರರನ್ನು ಪೊಲೀಸ್ ಬಿಗಿ ಭದ್ರತೆ ನಡುವೆ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಅರಣ್ಯ ಭವನ ದ್ವಾರದ ಬಳಿ ತಡೆ ಹಿಡಿಯಲಾಯಿತು.
ಈ ವೇಳೆ ಪೊಲೀಸ್ ಇಲಾಖೆ ಹಾಗೂ ರೈತ ಸಂಘದ ಪ್ರಮುಖರ ನಡುವೆ ಒಂದಿಷ್ಟು ಮಾತಿನ ಚಕಮಕಿ ನಡೆದು, ತಾವು ಶಾಂತಿಯುತ ಹೋರಾಟ ನಡೆಸಲಿದ್ದು, ಯಾವದೇ ತೊಂದರೆಗೆ ಅವಕಾಶವಾಗದಂತೆ ನಡೆದುಕೊಳ್ಳುವದಾಗಿಯೂ, ಅರಣ್ಯ ಭವನ ಆವರಣಕ್ಕೆ ಬಿಡಬೇಕೆಂದು ಆಗ್ರಹಿಸಿದರು. ಆ ಮೇರೆಗೆ ಡಿವೈಎಸ್ಪಿ ಕೆ.ಎಸ್. ಸುಂದರ್‍ರಾಜ್ ನೇತೃತ್ವದಲ್ಲಿ ಅವಕಾಶ ಮಾಡಿಕೊಡಲಾಯಿತು.
ಅಲ್ಲಿ ಜಮಾಯಿಸಿದ ಪ್ರತಿಭಟನಾ ಕಾರರನ್ನು ಉದ್ದೇಶಿಸಿ
(ಮೊದಲ ಪುಟದಿಂದ) ರೈತ ಸಂಘದ ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಕೊಡಗಿನಲ್ಲಿ ನಿರಂತರ ಕಾಡಾನೆ - ಮಾನವ ಸಂಘರ್ಷದೊಂದಿಗೆ ಸಾವು, ನೋವು, ಆಸ್ತಿ ಹಾನಿ ಸಂಭವಿಸುತ್ತಿದೆಯೆಂದು ಆರೋಪಿಸಿ ದರಲ್ಲದೆ, ವನ್ಯ ಮೃಗ ಧಾಳಿಗೆ ನಿರಂತರ ಜಾನುವಾರುಗಳು ಬಲಿಯಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಗಳು ಸ್ಪಷ್ಪ ಮಾಹಿತಿ ಒದಗಿಸಬೇಕೆಂದು ಆಗ್ರಹಿಸಿದರು.
ಕೊಡಗು ಜಿಲ್ಲಾ ರೈತರು ಮತ್ತು ಕಾರ್ಮಿಕರ ಅರಣ್ಯ ಹೋರಾಟ ಸಮಿತಿ ನೇತೃತ್ವ ವಹಿಸಿದ್ದ ಮಂಡೇಪಂಡ ಪ್ರವೀಣ್ ಬೋಪಯ್ಯ, ಕೆ.ಎಂ. ಕುಶಾಲಪ್ಪ, ಸಂಕೇತ್ ಪೂವಯ್ಯ, ಸುಜಾ ಬೋಪಯ್ಯ, ಡಾ. ದುರ್ಗಾ ಪ್ರಸಾದ್, ಭರತ್ ಕುಮಾರ್ ಅವರುಗಳು ಮಾತನಾಡಿ, ಆನೆ-ಮಾನವ ಸಂಘರ್ಷ ಹಾಗೂ ಜೀವ ಹಾನಿ ತಡೆಗಟ್ಟಲು ಶಾಶ್ವತ ಪರಿಹಾರ ಲಭಿಸುವ ತನಕ ನಿರಂತರ ಹೋರಾಟಕ್ಕೆ ಬೆಂಬಲ ಘೋಷಿಸಿದರು.
ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರು ಜಿಲ್ಲೆಯನ್ನು ಕಡೆಗಣಿಸಿರುವ ಪರಿಣಾಮ ಸಂಬಂಧಿಸಿದ ಅರಣ್ಯಾಧಿಕಾರಿಗಳು ಕೂಡ ರೈತ - ಕಾರ್ಮಿಕರ ಜೀವಕ್ಕೆ ಬೆಲೆಯಿಲ್ಲವೆಂಬಂತೆ ಆನೆಗಳ ಪರವಾಗಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ವಕೀಲ ಕೆ.ಬಿ. ಹೇಮಚಂದ್ರ, ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ, ಗಣೇಶ್ ಶ್ರೀಮಂಗಲ, ಮಹದೇವ, ವೇಣುಪ್ರಸಾದ್, ಬಷೀರ್ ಅವರುಗಳು ಮಾತನಾಡಿ, ಅರಣ್ಯಾಧಿಕಾರಿಗಳ ಕಾರ್ಯವೈಖರಿ ಖಂಡಿಸಿದರು.
ಕಿಚ್ಚಿಟ್ಟು ಆಕ್ರೋಶ : ಆನೆ ಧಾಳಿಯಿಂದ ಸಾವು, ವನ್ಯ ಮೃಗ ಧಾಳಿ, ಆಸ್ತಿ ಹಾನಿ ಸಂಬಂಧ ನೀಡುವ ಅತ್ಯಲ್ಪ ಪರಿಹಾರ ಸೇರಿದಂತೆ ಅರಣ್ಯ ಇಲಾಖೆಯ ಸುತ್ತೋಲೆಗೆ ಆಕ್ಷೇಪಿಸಿದ ಪ್ರತಿಭಟನಾಕಾರರು ಅದನ್ನು ಕಿಚ್ಚಿಟ್ಟು ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಾ, ನೂತನವಾಗಿ ವೈಜ್ಞಾನಿಕ ದಿಸೆಯಲ್ಲಿ ಅರಣ್ಯ ಕಾಯ್ದೆ ಜಾರಿಗೆ ಒತ್ತಾಯಿಸಿದರು.
ಇಂದಿನ ಪ್ರತಿಭಟನೆಯಲ್ಲಿ ಮಹಿಳಾ ಕಾರ್ಮಿಕರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕಾಡಾನೆ ಧಾಳಿಯಿಂದ ಪ್ರಾಣ ಕಳೆದುಕೊಂಡಿರುವ ಕುಟುಂಬ ಸದಸ್ಯರು, ವನ್ಯಮೃಗ ಧಾಳಿಯಿಂದ ಜಾನುವಾರುಗಳನ್ನು ಅಗಲಿರುವ ಸಂತ್ರಸ್ತ ಕುಟುಂಬ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಅರಣ್ಯ ಭವನದ ಬಳಿ ಡಿವೈಎಸ್ಪಿ ಸುಂದರ್‍ರಾಜ್ ನೇತೃತ್ವದಲ್ಲಿ ಪ್ರೊಬೆಷನರಿ ಎಸ್ಪಿ ಯತೀಶ್, ಇನ್ಸ್‍ಪೆಕ್ಟರ್‍ಗಳಾದ ಮೇದಪ್ಪ, ಪ್ರದೀಪ್, ದಿವಾಕರ್ ಸೇರಿದಂತೆ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.