ಕೂಡಿಗೆ, ಫೆ. 23: ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳಿಂದ ಎಂಟು ಕೋಟಿ ರೂ ವೆಚ್ಚದಲ್ಲಿ ಶುದ್ಧ ಕುಡಿಯುವ ಕಾವೇರಿ ನದಿಯಿಂದ ನೀರೆತ್ತುವ ಮೂಲಕ ಹೆಬ್ಬಾಲೆಯ ಹೃದಯ ಭಾಗದಲ್ಲಿ ನೀರು ಶುದ್ಧೀಕರಣ ಘಟಕ ಹಾಗೂ ಬೃಹತ್ ನೀರಿನ ಟ್ಯಾಂಕ್ ಅನ್ನು ನಿರ್ಮಾಣಗೊಳಿಸಿ 6 ಗ್ರಾಮ ಪಂಚಾಯಿತಿ ವ್ಯಾಪ್ತಿಯ 12 ಉಪಗ್ರಾಮಗಳಿಗೆ ನೀರೊದಗಿಸುವ ಈ ಬೃಹತ್ ಯೋಜನೆ ರೂಪಿಸಲಾಗಿತ್ತು.

ಕಳೆದ ಎಂಟು ತಿಂಗಳಿನಿಂದ ನೀರು ಶುದ್ಧೀಕರಣ ಪ್ರಕ್ರಿಯೆಯಲ್ಲಿ ಕ್ಲೋರಿನ್ ಅನ್ನು ಬಳಸದೇ ಹೊಳೆಯಿಂದ ನೇರವಾಗಿ ಬಂದ ನೀರನ್ನು ನೆಪ ಮಾತ್ರಕ್ಕೆ ಮೂರು ತೊಟ್ಟಿಗಳಲ್ಲಿ ತುಂಬಿಸಿ ನಂತರ ಶುದ್ಧೀಕರಣ ಘಟಕದ ಮೂಲಕ ಬೃಹತ್ ಟ್ಯಾಂಕ್‍ಗೆ ಹರಿಸುವ ಪ್ರಕ್ರಿಯೆ ದಿನಂಪ್ರತಿ ನಡೆಯುತ್ತಿದೆ. ಆದರೆ, ಕ್ಲೋರಿನ್ ಕೊಠಡಿಯಲ್ಲಿರುವ 1 ಟನ್ ಗಾತ್ರದ ಕ್ಲೋರಿನ್‍ನ ಸಿಲಿಂಡರ್ (500 ಕೆ.ಜಿಯ ಎರಡು ಸಿಲಿಂಡರ್‍ಗಳು) ನೆಪಮಾತ್ರಕ್ಕೆ ಇದ್ದು, ಇದರ ಮೂಲಕ ನೀರು ಶುದ್ಧೀಕರಣ ಘಟಕಕ್ಕೆ ಕ್ಲೋರಿನ್ ಹೋಗದೆ ಕ್ಲೋರಿನ್ ಸರಬರಾಜಾಗುವ ಸಂಪಡನ ಸುಟ್ಟುಹೋಗಿದ್ದು, ಇದುವರೆಗೂ ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸುವ ಚಿಂತನೆ ಮಾಡದೆ ಅಶುದ್ಧ ನೀರು ಆಗುತ್ತಿದೆ.

ಶಿರಂಗಾಲದಿಂದ ಮುಳ್ಳುಸೋಗೆ ಗ್ರಾಮ ಪಂಚಾಯಿತಿವರೆಗೆ ಬೃಹತ್ ಪೈಪ್‍ಗಳನ್ನು ಅಳವಡಿಸಿ ಅವುಗಳ ಮೂಲಕ ನೀರನ್ನು ಹರಿಸಲಾಗುತ್ತಿದೆ. ಹೆಬ್ಬಾಲೆಯಿಂದ ಬಂದ ನೀರನ್ನು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ತಾಲೂಕು ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಿಕೊಂಡಿರುವ ಟ್ಯಾಂಕ್‍ಗಳಿಗೆ ನೀರನ್ನು ತುಂಬಿಸಿ ನಂತರ ಉಪ ಪೈಪ್‍ಗಳ ಮೂಲಕ ಎಲ್ಲಾ ಗ್ರಾಮದ ಬೀದಿಗಳಿಗೆ ನೀರೋದಗಿಸುವ ಯೋಜನೆ ಇದಾಗಿದೆ.

ಆದರೆ, ಇದೀಗ ಹೆಬ್ಬಾಲೆಯಿಂದ ಬಂದ ನೀರನ್ನು ಗ್ರಾಮ ಪಂಚಾಯಿತಿಗಳಲ್ಲೂ ಪರಿಶೀಲಿಸದೆ ನೇರವಾಗಿ ಗ್ರಾಮದ ಮನೆಗಳಿಗೆ ಸರಬರಾಜು ಮಾಡುವ ಕಾರ್ಯದಲ್ಲಿ ಎಲ್ಲಾ ಗ್ರಾಮ ಪಂಚಾಯ್ತಿಯವರು ತಲ್ಲೀನರಾಗಿದ್ದಾರೆ. ಆದರೆ, ಕಳೆದ ಎರಡು ತಿಂಗಳಿನಿಂದ ಕಾವೇರಿ ನದಿಯಲ್ಲೂ ನೀರು ಕಡಿಮೆಯಾಗಿ ಕಲ್ಮಶ ನೀರು ಶುದ್ಧೀಕರಣ ಕೇಂದ್ರಕ್ಕೆ ಬರುತ್ತಿದ್ದು, ಈ ನೀರನ್ನೇ ಯಾವದೇ ರೀತಿಯಲ್ಲಿ ಶುದ್ಧೀಕರಣ ಮಾಡದೆ ರಾಸಾಯನಿಕ ಕ್ಲೋರೀನ್ ಅನ್ನು ಬಳಸದೆ ಅಶುದ್ಧ ನೀರನ್ನು ನೇರವಾಗಿ ಕುಡಿಯಲು ಸರಬರಾಜು ಮಾಡುತ್ತಿದ್ದು, ಇದರಿಂದ ಜನರಿಗೆ ರೋಗ-ರುಜಿನಗಳು ಹೆಚ್ಚಾಗುತ್ತಿವೆ. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ಕÀಳೆದ 17 ತಿಂಗಳ ಹಿಂದೆ ಈ ಬೃಹತ್ ಕುಡಿಯುವ ನೀರಿನ ಯೋಜನೆಯ ಘಟಕವನ್ನು ಕೊಡಗು ಜಿಲ್ಲಾ ಪಂಚಾಯ್ತಿಗೆ ಹಸ್ತಾಂತರ ಮಾಡಿದ್ದಾರೆ. ಇದರ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯಿತಿಯ ಗ್ರಾಮಾಂತರ ಕುಡಿಯುವ ನೀರಿನ ಯೋಜನೆಯ ಇಂಜಿನಿಯರಿಂಗ್ ವಿಭಾಗ ನಿರ್ವಹಿಸುತ್ತಿದ್ದು, ಇಂತಹ ಸಮಸ್ಯೆಯ ಬಗ್ಗೆ ಎಚ್ಚೆತ್ತುಕೊಳ್ಳದೆ, ನಿರ್ಲಕ್ಷ್ಯ ವಹಿಸಿದೆ. ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಶಿರಂಗಾಲ, ತೊರೆನೂರು ಹೆಬ್ಬಾಲೆ ಗ್ರಾಮ ಪಂಚಾಯಿತಿ ಗ್ರಾಮ ಸಭೆಗಳಲ್ಲಿಯೂ ಸರಬರಾಜಾಗುತ್ತಿರುವ ಅಶುದ್ಧ ನೀರನ್ನು ಪ್ರದರ್ಶಿಸಿ ಗ್ರಾಮಸ್ಥರು ದೂರು ನೀಡಿದ್ದು, ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದರು.

ಆದರೆ, ಈವರೆಗೆ ತುಕ್ಕು ಹಿಡಿದಿರುವ ಕ್ಲೋರಿನ್ ಸಿಲಿಂಡರ್ ಮತ್ತು ವಯರ್‍ಗಳ ಸರಿಪಡಿಸುವಿಕೆಗೆ ಮುಂದಾಗದಿರುವದರಿಂದ ಸರ್ಕಾರದಿಂದ ಇದಕ್ಕಾಗಿ ಕಾದಿರಿಸಿದ ಹಣ ಪೋಲಾಗುತ್ತಿದೆ ಎಂಬದು ಸಾರ್ವಜನಿಕರಲ್ಲಿ ಸಂಶಯಕ್ಕೆಡೆ ಮಾಡಿಕೊಟ್ಟಿದೆ.

ಕಾವೇರಿ ನದಿಯಿಂದ ನೀರು ದಿನಂಪ್ರತಿ 2.5 ದಶಲಕ್ಷ ನೀರು ಶುದ್ಧಿಕರಣ ಘಟಕಕ್ಕೆ ಸರಬ ರಾಜಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ 5 ಗ್ರಾಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ 12 ಗ್ರಾಮಗಳ ಜನರು ಅಶುದ್ಧ ನೀರು ಕುಡಿದು ಒಂದಲ್ಲ ಒಂದು ರೋಗದಿಂದ ನರಳುತ್ತಿದ್ದಾರೆ. ಈ ವ್ಯವಸ್ಥೆಯನ್ನು ಒಂದುವಾರದಲ್ಲಿ ಸರಿಪಡಿಸದಿದ್ದಲ್ಲಿ ತಾಲೂಕು ಗ್ರಾಮಾಂತರ ಕುಡಿಯುವ ನೀರು ಇಂಜಿನಿಯರಿಂಗ್ ವಿಭಾಗದ ಎದುರು ಪ್ರತಿಭಟನೆ ಮಾಡಲಾಗು ವದು ಎಂದು ತೊರೆನೂರು ಸಹಕಾರ ಬ್ಯಾಂಕಿನ ನಿರ್ದೇಶಕ ಕೃಷ್ಣೇಗೌಡ, ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಕೆ. ಪಾಂಡುರಂಗ, ಶಿರಂಗಾಲದ ಮಂಜುನಾಥ್, ಚಂದ್ರಶೇಖರ್, ಜಯಣ್ಣ, ಕೂಡಿಗೆಯ ಪೃಥ್ವೀಶ್ ಹೆಬ್ಬಾಲೆ, ಕೂಡಿಗೆ, ಕೂಡು ಮಂಗಳೂರು, ಶಿರಂಗಾಲ, ತೊರೆ ನೂರು ಗ್ರಾಮ ವ್ಯಾಪ್ತಿಯ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ತೆರಳಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.

-ಕೆ.ಕೆ. ನಾಗರಾಜಶೆಟ್ಟಿ