ಮಡಿಕೇರಿ, ಫೆ. 23: ಒಂದು ಜನಾಂಗ ಸಾಮಾಜಿಕವಾಗಿ, ಆರ್ಥಿಕವಾಗಿ ಸಂಘಟಿತವಾಗಲು ಸಮಾವೇಶಗಳು ಅಗತ್ಯವಾಗಿದೆ. ಸಂಘಟಿತ ಸಮಾಜ ದೇಶಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕರೆ ನೀಡಿದರು.
ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಕ್ರಾಂತಿ ಸಂಘಟನೆ ವತಿಯಿಂದ ಜಿಲ್ಲಾ ಮಟ್ಟದ ಭೋವಿ ಜನಾಂಗದ ಐಕ್ಯತಾ ಸಮಾವೇಶ ಮತ್ತು ಭೋವಿ ಸಮುದಾಯದ ಆದಿ ಗುರು ಶ್ರೀ ಸಿದ್ಧರಾಮೇಶ್ವರ 846ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಭೋವಿ ಜನಾಂಗದ ಸಮಾವೇಶ ಪ್ರಥಮ ಬಾರಿಗೆ ನಡೆಯುತ್ತಿದ್ದು, ಜನಾಂಗ ಬಾಂಧವರು ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯು ವಂತಾಗಬೇಕು.
(ಮೊದಲ ಪುಟದಿಂದ) ಜನಾಂಗದಲ್ಲಿ ಆರ್ಥಿಕವಾಗಿ ಸಬಲರಾದವರು ವಿದ್ಯಾನಿಧಿ ಸ್ಥಾಪಿಸುವ ಮೂಲಕ ಆರ್ಥಿಕವಾಗಿ ಹಿಂದುಳಿ ದವರ ಮಕ್ಕಳಿಗೆ ಶಿಕ್ಷಣಕ್ಕಾಗಿ ಸಹಾಯಧನ ಕಲ್ಪಿಸುವಂತಾಗಬೇಕು. ಜಾತಿ ದೃಢೀಕರಣ ಪತ್ರಗಳು ಇತ್ತೀಚೆಗೆ ದುರುಪಯೋಗವಾಗುತ್ತಿದ್ದು, ಭೋವಿ ಜನಾಂಗದವರು ತಮ್ಮ ಜಾತಿ ದೃಢೀಕರಣ ಪತ್ರಗಳು ದುರುಪಯೋಗ ವಾಗದಂತೆ ಎಚ್ಚರಿಕೆ ವಹಿಸಬೇಕು. ಮೀಸಲಾತಿಗೆ ತಕ್ಕಂತೆ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ಭೋವಿ ಜನಾಂಗದ ಸಮುದಾಯ ಭವನ ನಿರ್ಮಾಣದ ಪ್ರಮುಖ ಬೇಡಿಕೆಗೆ ಸ್ಪಂದಿಸಿದ ಶಾಸಕರು, ಕುಶಾಲನಗರದಲ್ಲಿ ಪೈಸಾರಿ ಜಾಗವಿದ್ದು, ಜನಾಂಗದ ಪ್ರಮುಖರು ಪತ್ತೆ ಹಚ್ಚಿಕೊಟ್ಟಲ್ಲಿ ಜಾಗ ನೀಡುವದರೊಂದಿಗೆ ಸಮುದಾಯ ಭವನ ನಿರ್ಮಾಣಕ್ಕೆ ರೂ. 1 ಕೋಟಿ ಅನುದಾನವನ್ನು ಕಲ್ಪಿಸಿಕೊಡುವದಾಗಿ ಭರವಸೆ ನೀಡಿದರು. ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಸಮಾಜಗಳು ಸಂಘಟಿತರಾಗದಿದ್ದಲ್ಲಿ ಸರ್ಕಾರಗಳು ಕಣ್ಣೆತ್ತಿಯೂ ನೋಡುವದಿಲ್ಲ. ಜನಾಂಗದ ಕಟ್ಟಕಡೆಯ ವ್ಯಕ್ತಿಗಳ ಅಭಿವೃದ್ಧಿಗಾಗಿ ಸಮಾಜದ ಪ್ರಮುಖರು ಕಾರ್ಯಪ್ರವೃತ್ತರಾಗಬೇಕು. ಸಮಾಜದ ಮಕ್ಕಳಿಗೆ ಯೋಗ್ಯ ಶಿಕ್ಷಣವನ್ನು ಕೊಡಿಸುವ ಮೂಲಕ ಸಮಾಜ ಮುಖಿಯಾಗಿ ಚಿಂತಿಸುವದರೊಂದಿಗೆ ಸಮಾಜದ ಏಳಿಗೆ ಸಾಧ್ಯ. ಶೋಷಿತ ವರ್ಗ ಸರ್ಕಾರದ ಸೌಲಭ್ಯಗಳನ್ನು ಪಡೆಯುವದರೊಂದಿಗೆ ಮುಂದುವರೆ ಯಬೇಕು. ಜನಾಂಗದ ಗುರು ಸಿದ್ಧರಾಮೇಶ್ವರ ಹಾಗೂ ಅಂಬೇಡ್ಕರ್ ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿ.ಪಂ. ಸದಸ್ಯ ಮುರುಳಿ ಕರುಂಬಮ್ಮಯ್ಯ ಮಾತನಾಡಿ, ಹಲವು ಜಾತಿ ಜನಾಂಗಗಳಿದ್ದರೂ ಶಾಂತಿ, ನೆಮ್ಮದಿಯ ಜೀವನ ದೇಶದಲ್ಲಿ ಸಾಧ್ಯವಾಗಿದೆ. ಇದಕ್ಕೆಲ್ಲ ನಮ್ಮ ಸಂಸ್ಕøತಿಯೇ ಮೂಲ ಕಾರಣವಾಗಿದೆ. ಯಾವದೇ ಜನಾಂಗವಿರಲಿ ಭಾರತೀಯತೆಯನ್ನು ಮೈಗೂಡಿಸಿ ಕೊಳ್ಳಿ. ಪ್ರತಿಯೊಬ್ಬರ ಜೀವನದಲ್ಲಿ ಛಲ, ಧೈರ್ಯವಿದ್ದಲ್ಲಿ ಮುಂದುವರೆಯಲು ಸಾಧ್ಯ. ಮಕ್ಕಳಿಗೆ ಶಿಕ್ಷಣ ನೀಡುವದರ ಮೂಲಕ ಆರ್ಥಿಕವಾಗಿ ಸಬಲರಿದ್ದವರು ಮೀಸಲಾತಿಯನ್ನು ಬಿಟ್ಟುಕೊಡುವ ಅಗತ್ಯವಿದೆ ಎಂದರು. ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ಮಾತನಾಡಿ, ಜನಾಂಗದ ಸಂಘಟನೆಯಲ್ಲಿ ರಾಜಕೀಯಕ್ಕೆ ಅವಕಾಶ ನೀಡದಿರಿ. ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರು ಹೋಗದೆ ತಮ್ಮ ಜನಾಂಗದ ಆಚಾರ - ವಿಚಾರ, ಸಂಸ್ಕøತಿಯನ್ನು ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಭಾರತ ದೇಶ ಸದೃಢವಾಗಬೇಕಾದರೆ, ಎಲ್ಲಾ ಜಾತಿ ಜನಾಂಗಗಳು ಸಂಘಟಿತರಾಗಬೇಕು. ಭವಿಷ್ಯದ ಒಳ್ಳೆಯ ವಿಚಾರಗಳಿಗೆ ನಾವು ಕಾರಣಕರ್ತರಾಗಬೇಕು. ಜನಾಂಗದ ಆಚಾರ - ವಿಚಾರಗಳಿಗೆ ಜನಾಂಗ ದವರಿಗೆ ಅರಿವಿರಬೇಕು. ಮೀಸಲಾತಿ ಭಿಕ್ಷೆ ಅಲ್ಲ, ನಮ್ಮ ಹಕ್ಕು ಎಂದ ಅವರು ಸಂಘಟಿತ ಸಮಾಜದಿಂದ ಭವ್ಯ ಭಾರತ ನಿರ್ಮಾಣ ಸಾಧ್ಯವೆಂದು ಹೇಳಿದರು. ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ಮತ್ತು ಅಖಿಲ ಕರ್ನಾಟಕ ಭೋವಿ ರಾಜ್ಯ ಗೌರವ ಸಲಹೆಗಾರ ಜಿ.ವಿ. ಸೀತಾರಾಮ್ ಅಭಿವೃದ್ಧಿ ನಿಗಮದಿಂದ ಜನಾಂಗ ಬಾಂಧವರಿಗೆ ಇರುವ ವಿವಿಧ ಸೌಲಭ್ಯಗಳ ಮಾಹಿತಿ ನೀಡಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಭೋವಿ ಗುರುಪೀಠ ಬಾಗಲಕೋಟೆ ಚಿತ್ರದುರ್ಗದ ಶ್ರೀ ನಿರಂಜನ್ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಕ್ರಾಂತಿ ರಾಜ್ಯಾಧ್ಯಕ್ಷ ವೈ. ಕೊಟ್ರೇಶ್, ಹೈಕೋರ್ಟ್ ವಕೀಲ ಶಂಕ್ರಪ್ಪ, ರಾಜ್ಯ ಗೌರವ ಸಲಹೆಗಾರ ಆರ್. ಮುನಿರಾಜು ಮಾತನಾಡಿದರು. ದಕ್ಷಿಣ ಕರ್ನಾಟಕ ಗೌರವ ಸಲಹೆಗಾರ ಮಣಿ, ಭೋವಿ ಸಮುದಾಯದ ಆದಿ ಗುರು ಶ್ರೀ ಸಿದ್ಧರಾಮೇಶ್ವರ ಇತಿಹಾಸ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ತಾ.ಪಂ. ಉಪಾಧ್ಯಕ್ಷ ಸಂತು ಸುಬ್ರಮಣಿ, ಅಖಿಲ ಕರ್ನಾಟಕ ಭೋವಿ ರಾಜ್ಯ ಹಿರಿಯ ಉಪಾಧ್ಯಕ್ಷ ಎಚ್. ಮಂಜಪ್ಪ, ಉಪಾಧ್ಯಕ್ಷ ಹುಲಪ್ಪ ಹಳ್ಳೂರು, ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ್, ಮಹಿಳಾ ಘಟಕದ ಉಪಾಧ್ಯಕ್ಷೆ ಪದ್ಮಾನಯನ, ಮಹಿಳಾ ಘಟಕದ ರಾಜ್ಯ ಸಂಚಾಲಕಿ ಬಾಲಾಂಬಿಕ ಹಾಗೂ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು. ದರ್ಶನ್ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿದರು.