ಕುಶಾಲನಗರ, ಫೆ. 23: ಕುಶಾಲನಗರ ಸಮೀಪ ಮಾದಾಪಟ್ಟಣ ಗ್ರಾಮದಲ್ಲಿರುವ ಅಂದಾಜು 12 ಎಕರೆ ಸರಕಾರಿ ಭೂಮಿಯನ್ನು ಸರಕಾರಿ ಯೋಜನೆಗಳಿಗೆ ಕಾಯ್ದಿರಿಸುವದರೊಂದಿಗೆ ಗ್ರಾಮಸ್ಥರ ಅನುಕೂಲಕ್ಕೆ ವಿನಿಯೋಗಿಸಬೇಕಿದೆ ಎಂದು ಗ್ರಾಮದ ಪ್ರಮುಖರಾದ ಬಿ.ಆರ್. ಸುರೇಶ್ ಆಗ್ರಹಿಸಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿರುವ ಸರಕಾರಿ ಜಾಗಗಳು ಒತ್ತುವರಿಯಾಗುತ್ತಿದೆ. ಗ್ರಾಮದಲ್ಲಿರುವ ಗೋಮಾಳ ಹಾಗೂ ಪೈಸಾರಿ ಜಾಗಗಳನ್ನು ಗುರುತಿಸಿ ಗ್ರಾಮಸ್ಥರ ಅನುಕೂಲಕ್ಕೆ ಒದಗಿಸಬೇಕೆಂದು ಈ ಹಿಂದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಯಾವದೇ ರೀತಿಯಲ್ಲಿ ಸ್ಪಂದನೆ ದೊರೆತಿಲ್ಲ. ಬಹುತೇಕ ಬಡ ಕೂಲಿ ಕಾರ್ಮಿಕರು ವಾಸವಿರುವ ಗ್ರಾಮದಲ್ಲಿ ಹಲವು ಮಂದಿ ನಿವೇಶನ ರಹಿತರಾಗಿದ್ದು ಪೈಸಾರಿ ಜಾಗವನ್ನು ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ಮಂಜೂರು ಮಾಡಬೇಕಿದೆ. ಗ್ರಾಮಕ್ಕೆ ಸ್ಮಶಾನದ ಕೊರತೆಯಿದ್ದು ಕಾವೇರಿ ನದಿ ತಟದಲ್ಲಿ ಶವ ಸಂಸ್ಕಾರ ನಡೆಸಲಾಗುತ್ತಿದೆ. ಈ ಹಿನ್ನೆಲೆ ಇರುವ ಸರಕಾರಿ ಭೂಮಿಯ ಪೈಕಿ ಅವಶ್ಯವಿರುವ ಸ್ವಲ್ಪ ಸ್ಥಳವನ್ನು ಗುರುತಿಸಿ ಸ್ಮಶಾನಕ್ಕೆ ಮೀಸಲಿರಿಸಬೇಕೆಂದು ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಹೆಚ್.ಜೆ. ದಾಮೋದರ ಮಾತನಾಡಿ, ಗ್ರಾಮದಲ್ಲಿ ಅಂದಾಜು 800 ದಲಿತ ಕುಟುಂಬಗಳಿವೆ. ಕಳೆದ 4 ವರ್ಷಗಳಿಂದ ನಿವೇಶನ ಹಾಗೂ ಸ್ಮಶಾನಕ್ಕೆ ಆಗ್ರಹಿಸಿ ಹಲವು ಹೋರಾಟಗಳು ನಡೆಸಲಾಗಿದೆ. ಈ ಭಾಗದಲ್ಲಿರುವ ಕಾಟಿಕೆರೆ ಕೂಡ ಒತ್ತುವರಿಯಾಗಿದ್ದು ಈ ಬಗ್ಗೆ ಅಧಿಕಾರಗಳು ಗಮನಹರಿಸಬೇಕಿದೆ ಎಂದರು. ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಗುಡ್ಡೆಹೊಸೂರು ಗ್ರಾ.ಪಂ. ಸದಸ್ಯರುಗಳಾದ ಎಂ.ಪಿ. ಶಿವಪ್ಪ, ಪ್ರವೀಣ್ ಕುಮಾರ್ ಇದ್ದರು.