ಗುಡ್ಡೆಹೊಸೂರು, ಫೆ. 23 : ಯಡವಾರೆ ಗ್ರಾಮದ ಪ್ರಗತಿಪರ ರೈತರಾದ ತೆಕ್ಕಡೆ ಜನಾರ್ಧನ ಎಂಬವರ ಕಾಫಿ ತೋಟದಲ್ಲಿ ಕೃಷಿ ಕ್ಷೇತ್ರೋತ್ಸವವನ್ನು ನವಭಾರತ್ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿತ್ತು. ಈ ಸಂದರ್ಭ ಜನಾರ್ಧನ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಮಾತನಾಡಿ ಅವರು ನಾನು 56 ವರ್ಷಗಳಿಂದ ವಿಜಯ ಗ್ರೋಮಿಯನ್ ಎಂಬ ಸಾವಯವ ಗೊಬ್ಬರವನ್ನು ಕಾಫಿ ಮತ್ತು ಕರಿಮೆಣಸಿಗೆ ಹಾಕಿ ಉತ್ತಮ ಇಳುವರಿ ಪಡೆಯುತ್ತಿದ್ದು, ಮಣ್ಣಿನ ಫಲವತ್ತತೆ ಹೆಚ್ಚಾಗಲಿದೆ ಎಂಬದಾಗಿ ತಿಳಿಸಿದ ಅವರು, ಎಲ್ಲಾ ರೈತರು ಸಾವಯವ ಕೃಷಿಯನ್ನು ಅಳವಡಿಸುವಂತೆ ಮನವಿ ಮಾಡಿದರು.
ಕೃಷಿ ಅಧಿಕಾರಿ ಸೋಮಶೇಖರ್ ಮಾತನಾಡಿ ಭೂಮಿಗೆ ಬೇಕಾದ ಲಘು ಪೋಷಕಾಂಶಗಳು ಸಾವಯವ ಗೊಬ್ಬರದಿಂದ ದೊರೆಯುವದರಿಂದ ರೈತರು ಸಾವಯವ ಗೊಬ್ಬರವನ್ನು ಕೃಷಿಯಲ್ಲಿ ಅಳವಡಿಸುವಂತೆ ತಿಳಿಸಿದರು. ಸಮಾರಂಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಮಂಜುನಾಥ್ ಕೃಷಿ ಅಧಿಕಾರಿ ಎಂ.ಕೆ. ಮೋಹನ್ ಕುಮಾರ್, ಸಿಬ್ಬಂದಿಗಳಾದ ಪ್ರಮೋದ್, ಗಣೇಶ್ ಗ್ರಾಮಸ್ಥರಾದ ರಾಜೇಶ್, ಬಸಪ್ಪ, ಕೃಷ್ಣಪ್ಪ ಮುಂತಾದವರು ಹಾಜರಿದ್ದರು.