ಸೋಮವಾರಪೇಟೆ, ಫೆ. 23: ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ಸತೀಶ್ ಕುಮಾರ್ ಹಾಗೂ ಸೋಮವಾರಪೇಟೆ ಬ್ಲಾಕ್ ಎಸ್.ಸಿ. ಘಟಕದ ಅಧ್ಯಕ್ಷ ಟಿ.ಈ. ಸುರೇಶ್ ಅವರನ್ನು ತಕ್ಷಣ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಪಕ್ಷದ ಎಸ್.ಸಿ. ಘಟಕದ ಹಿರಿಯ ಮುಖಂಡರು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎ. ನಾಗರಾಜು, ಜಿಲ್ಲೆ ಹಾಗೂ ಬ್ಲಾಕ್‍ನಿಂದ ನಡೆಯುವ ಸಭೆಗಳಿಗೆ ಪಕ್ಷದ ಹಿರಿಯ ಮುಖಂಡರು ಹಾಗೂ ನಿಷ್ಠಾವಂತ ಕಾರ್ಯಕರ್ತರನ್ನು ಆಹ್ವಾನಿಸುತ್ತಿಲ್ಲ. ಇದರಿಂದ ಪಕ್ಷದ ಬೆಳವಣಿಗೆಗೆ ತೊಂದರೆಯಾಗಿದೆ ಎಂದು ದೂರಿದರು. ಇವರಿಬ್ಬರಿಂದ ಪಕ್ಷದ ಸಂಘಟನೆಗೆ ಸಮಸ್ಯೆಯಾಗಿರುವದರಿಂದ ಪಕ್ಷ ನಿಷ್ಠೆಯಿರುವ ಕಾಂಗ್ರೆಸ್ಸಿಗರನ್ನು ಘಟಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.

ಇತ್ತೀಚೆಗೆ ನಡೆದ ಎಸ್.ಸಿ. ಘಟಕದ ಜಿಲ್ಲಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಪಡೆಯದ ವಕೀಲರೊಬ್ಬರನ್ನು ನೋಟರಿ ಮಾಡುವಂತೆ ನಿರ್ಣಯ ಕೈಗೊಂಡು ಕೆಪಿಸಿಸಿಗೆ ಕಳುಹಿಸಲಾಗಿದೆ. ಇದರ ಹಿಂದೆ ಜಿಲ್ಲಾಧ್ಯಕ್ಷ ಸತೀಶ್ ಕುಮಾರ್ ಹಾಗೂ ಟಿ.ಈ. ಸುರೇಶ್ ಅವರ ಪ್ರಭಾವವಿದೆ ಎಂದು ದೂರಿದರು. ಬಿ.ಇ. ಜಯೇಂದ್ರ ಅವರನ್ನು ನೋಟರಿಗೆ ಪರಿಗಣಿಸಬೇಕು ಎಂದು ಹೇಳಿದರು.

ರಾಜ್ಯ ಎಸ್.ಸಿ. ಘಟಕ ಹಾಗೂ ಕೆಪಿಸಿಸಿಗೆ ಕೊಡಗಿನಿಂದ ಪರಿಶಿಷ್ಟ ಜಾತಿಯವರನ್ನು ಆಯ್ಕೆ ಮಾಡಬೇಕು. ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಸ್ಥಾನವನ್ನು ಸೋಮವಾರಪೇಟೆ ತಾಲೂಕಿಗೆ ನೀಡಬೇಕು.

ಗೋಷ್ಠಿಯಲ್ಲಿ ಗೌಡಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಜೆ. ಯತೀಶ್, ಶಾಂತಳ್ಳಿ ಹೋಬಳಿ ಎಸ್.ಸಿ. ಘಟಕದ ಅಧ್ಯಕ್ಷ ಹೆಚ್.ಬಿ. ರಾಜಪ್ಪ, ನಗರ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಂಜುನಾಥ್, ಪ್ರಮುಖರಾದ ಸುಬ್ರಮಣಿ, ಚನ್ನಯ್ಯ ಉಪಸ್ಥಿತರಿದ್ದರು.