ಸೋಮವಾರಪೇಟೆ, ಫೆ. 23: ಕೊಡಗು ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಏ.1ರಂದು ಸೋಮವಾರಪೇಟೆಯಲ್ಲಿ ಅಂಬೇಡ್ಕರ್ ಜಯಂತಿ ಹಾಗೂ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎಂ. ಸೋಮಪ್ಪ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಏ. 16 ರಂದು ಸೋಮವಾರಪೇಟೆಯ ಕಕ್ಕೆಹೊಳೆಯಿಂದ ಬೃಹತ್ ಮೆರವಣಿಗೆ ನಡೆಸಿ ಒಕ್ಕಲಿಗರ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಈ ಸಂಬಂಧ ಏ. 8 ಮತ್ತು 9 ರಂದು ಮಾದಾಪುರದ ಚೆನ್ನಮ್ಮ ಜೂನಿಯರ್ ಕಾಲೇಜು ಮೈದಾನದಲ್ಲಿ ಆದಿ ದ್ರಾವಿಡ ಸಮಾಜ ಬಾಂಧವರಿಗೆ ವಿವಿಧ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಸೋಮಪ್ಪ ತಿಳಿಸಿದರು.

ದಕ್ಷಿಣ ಕನ್ನಡ ಮೂಲದವರಾದ ಆದಿದ್ರಾವಿಡ ಸಮಾಜದವರಿಗೆ ಕೊಡಗು ಜಿಲ್ಲೆಯಲ್ಲಿ ಪಾಲೆ, ಆದಿ ಕರ್ನಾಟಕ, ಹರಿಜನ, ಆದಿ ದ್ರಾವಿಡ, ಬಲಗೈ ಇತ್ಯಾದಿ ಹೆಸರುಗಳಲ್ಲಿ ಜಾತಿ ದೃಢೀಕರಣ ಪತ್ರ ನೀಡುತ್ತಿದ್ದು, ಇದರಿಂದ ಸರ್ಕಾರದ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಸೋಮಪ್ಪ ತಿಳಿಸಿದರು.

ಈ ಬಗ್ಗೆ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳು, ಮುಖ್ಯಮಂತ್ರಿ ಮತ್ತು ಕಂದಾಯ ಮಂತ್ರಿಗಳಿಗೆ ಪತ್ರ ಬರೆದು, ಕೊಡಗು ಜಿಲ್ಲೆಯಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯಂತೆ ಆದಿ ದ್ರಾವಿಡ-ಪರಿಶಿಷ್ಟ ಜಾತಿ ಹೆಸರಿನಲ್ಲಿಯೇ ಜಾತಿ ದೃಢೀಕರಣ ಪತ್ರ ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯ, ಹೋರಾಟ ಮಾಡುತ್ತಲೇ ಬಂದಿದ್ದು, ಇದೀಗ ಸರ್ಕಾರ ಜಿಲ್ಲಾಧಿಕಾರಿಗಳ ಮೂಲಕ ನೂತನ ಆದೇಶ ಹೊರಡಿಸಿದೆ ಎಂದರು.

ಅದರಂತೆ ಕೊಡಗಿನಲ್ಲಿ ಪಾಲೆ, ಆದಿ ಕರ್ನಾಟಕ, ಹರಿಜನ, ಆದಿ ದ್ರಾವಿಡ, ಬಲಗೈ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುತ್ತಿರುವವರಿಗೆ ಇನ್ನು ಮುಂದಕ್ಕೆ ಆದಿದ್ರಾವಿಡ ಎಂಬ ಹೆಸರಿನಲ್ಲಿಯೇ ಜಾತಿ ದೃಢೀಕರಣ ಪತ್ರ ನೀಡಲು ಕಾನೂನಿನಡಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು, ಎಲ್ಲಾ ತಾಲೂಕು ತಹಶೀಲ್ದಾರ್‍ಗೆ ಆದೇಶ ನೀಡಿದ್ದಾರೆ. ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ಕ್ರಮದಿಂದಾಗಿ ನಮ್ಮ ಹೋರಾಟಕ್ಕೆ ಜಯ ಲಭಿಸಿದೆ ಎಂದು ಸೋಮಪ್ಪ ತಿಳಿಸಿದರು.

ಗೋಷ್ಠಿಯಲ್ಲಿ ಆದಿ ದ್ರಾವಿಡ ಸಮಾಜದ ಜಿಲ್ಲಾ ಸಲಹೆಗಾರ ಹೆಚ್.ಪಿ. ತನಿಯಪ್ಪ, ಪ್ರಮುಖರಾದ ಹೆಚ್.ಎಂ. ಪೂವಯ್ಯ, ಹೆಚ್.ಜಿ. ಮಂಜು, ಬಿ.ಎ. ಕಿಟ್ಟು, ಅರುಣ್, ವಾಸು ಅವರುಗಳು ಉಪಸ್ಥಿತರಿದ್ದರು.