ಶನಿವಾರಸಂತೆ, ಫೆ. 23: ಮಾಲಂಬಿ ಗ್ರಾಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಲ್ಪಟ್ಟಿರುವ ಗಿರಿಜನರ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಅಪ್ಪಚ್ಚು ರಂಜನ್ ಹಾಗೂ ಕೆಲ ಮುಖಂಡರು ಗಿರಿಜನ ಸಮುದಾಯಕ್ಕೆ ಸೇರಿದ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ ರಮೇಶ್ ಹಾಗೂ ಸ್ಥಳೀಯ ಗಿರಿಜನರನ್ನು ಕಡೆಗಣಿಸಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಂ.ಆರ್. ತೀರ್ಥಕುಮಾರ್, ಪ್ರಸನ್ನಕುಮಾರ್ ಹಾಗೂ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ರಾಜಮ್ಮ ರುದ್ರಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉದ್ಘಾಟನಾ ದಿನದಂದೇ ಸಮುದಾಯ ಭವನದ ಪಕ್ಕದ ಮನೆಯಲ್ಲಿದ್ದ ಗಿರಿಜನ ಮುಖಂಡರೊಬ್ಬರು ಅನಾರೋಗ್ಯದಿಂದ ನಿಧನರಾಗಿದ್ದು, ವಿಷಯ ತಿಳಿದರೂ ಶಾಸಕರಾಗಲೀ ಕಾರ್ಯಕ್ರಮ ಆಯೋಜಕ ಸ್ಥಳೀಯ ಮುಖಂಡರಾಗಲಿ ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸುವ ಸೌಜನ್ಯವನ್ನೂ ತೋರಲಿಲ್ಲ. ಇದು ಶಾಸಕರ ಗಿರಿಜನ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.