ಗೋಣಿಕೊಪ್ಪ ವರದಿ,ಫೆ. 23 : ಇಸ್ರೆಲ್ ತುಂತುರು ನೀರಾವರಿ ತಂತ್ರಜ್ಞಾನದ ಮೂಲಕ ಕೊಡಗಿನ ಕೃಷಿಕರು ಅತ್ಯಲ್ಪ ನೀರಿನ ಸಹಾಯದಿಂದ ಹೆಚ್ಚು ಇಳುವರಿ ಪಡೆಯಲು ಸಾಧ್ಯವಿದೆ ಎಂದು ರಿವುಲಿಸ್ ಸಂಸ್ಥೆಯ ಭಾರತದ ಮುಖ್ಯಸ್ಥ ಎಲ್. ಪಿ. ಜೋಶಿ ಅಭಿಪ್ರಾಯಪಟ್ಟರು.

ಅಗ್ರಿಕಲ್ಚರಲ್ ಸೈನ್ಸ್ ಫಾರಂ ಆಫ್ ಕೊಡಗು ವತಿಯಿಂದ ಅಮ್ಮತ್ತಿ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ಮೋರ್ ಕ್ರಾಪ್ ಪರ್ ಡ್ರಾಪ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೊಡಗಿನಲ್ಲಿ ಬೆಳೆಯುತ್ತಿರುವ ಕಾಫಿ ಹಾಗೂ ಕಾಳುಮೆಣಸು ಕೃಷಿಗೆ ನೀರಿನ ಅವಶ್ಯಕತೆ ಹೆಚ್ಚಿದೆ. ತುಂತುರು ನೀರಾವರಿ ತಂತ್ರಜ್ಞಾನದ ಮೂಲಕ ಕೃಷಿ ಮಾಡಲು ಅವಕಾಶವಿದೆ ಎಂದರು. ಮಣ್ಣಿನ ಕೆಳಗೆ ಪೈಪ್ ಮೂಲಕ ನೀರಿನ ಸಿಂಪಡಣೆ ಮಾಡಲಾಗುತ್ತದೆ. ಇದರಿಂದ ಕಾಡಾನೆ ಸಮಸ್ಯೆಯಿಂದ ಕೂಡ ಪೈಪ್‍ಗಳ ರಕ್ಷಣೆ ಸಾಧ್ಯವಿದೆ. ಸುಮಾರು 100 ಮೀಟರ್ ದೂರದವರೆಗೆ ನೀರು ಸಿಂಪಡಣೆಯಾಗುತ್ತದೆ. ಗುಡ್ಡದ ಜಾಗದಲ್ಲಿಯೂ ಕೂಡ ತುಂತುರು ನೀರಾವರಿ ಮೂಲಕ ಗಿಡಗಳಿಗೆ ಹಚ್ಚು ನೀರು ಸಿಗುವದರಿಂದ ಬೆಳೆಗಾರರು ಅತಂಕ ಪಡೆಯುವ ಅವಶ್ಯಕತೆ ಇಲ್ಲ. ಇಂತಹ ತಂತ್ರಜ್ಞಾನ ಕೊಡಗಿಗೆ ಪ್ರಾಕೃತಿಕವಾಗಿಯೂ ಪೂರಕವಾಗಲಿದೆ ಎಂದರು.

ಹವಾಗುಣ, ಪ್ರದೇಶ ಮತ್ತು ಮಣ್ಣಿನ ಬಗ್ಗೆ ತಿಳಿದುಕೊಂಡು ಹನಿ ನೀರಾವರಿ ಮಾಡುವದರಿಂದ ಹೆಚ್ಚು ಇಳುವರಿಯನ್ನು ಪಡೆಯಬಹುದು. ಹನಿ ನೀರಾವರಿ ಪದ್ದತಿಯನ್ನು ಅಳವಡಿಸುವದರ ಮೂಲಕ ಬೆಳಗಳಿಗೆ ಆಗುವ ಉಪಯೋಗಗಳು ಮತ್ತು ತೋಟಗಳಿಗೆ ಯಾವ ತರಹದ ಹನಿ ಸಿಂಪಡಿಸುವ ಯಂತ್ರವನ್ನು ಬಳಸಬೇಕು ಎಂದು ಹೇಳಿದರು.

ಸೈಂಟಿಫಿಕ್ ಆಗ್ರೋ ಟೆಕ್ನಾಲೋಜಿನ ತಜ್ಞ ಸುನಿಲ್ ತಮಗಲೆ ಮಾತನಾಡಿ, ಉತ್ತಮ ಗುಣಮಟ್ಟದ ಗೊಬ್ಬರವನ್ನು ಬೆಳೆಗಳಿಗೆ ನೀಡುವದರಿಂದ ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು, ಸರಿಯಾದ ಸಮಯದಲ್ಲಿ ಗೊಬ್ಬರವನ್ನು ನೀಡಬೇಕು. ಇದರಿಂದ ಬೆಳೆಗಳ ಬೆಳವಣಿಗೆ ಕುಂಠಿತ ಗೊಳ್ಳುವದನ್ನು ತಪ್ಪಿಸಬಹುದು. ಉತ್ತಮ ಇಳುವರಿಯನ್ನು ಪಡೆಯಬಹುದು. ಕಾಫಿ ಮತ್ತು ಕಾಳುಮೆಣಸು ಬೆಳೆಗಳಿಗೆ ಗೊಬ್ಬರ ನೀಡುವದು ಮತ್ತು ನೀರು ಮತ್ತು ನೆರಳಿಗೆ ಒತ್ತು ನೀಡುವ ಅವಶ್ಯಕತೆ ಬಗ್ಗೆ ಮಾಹಿತಿ ನೀಡಿದರು.

‘ಜಿಂದಗಿ ಕಾ ಬೆಸ್ಟ್ ಡಿಸಿಷನ್’ ಎಂಬ ವಿಷಯದ ಬಗ್ಗೆ ದಿರೆ ಇಂಡಿಯಾ ಪ್ರೈ.ಲಿ ತಜ್ಞ ಸ್ವಾಮಿ ಮಂಜುನಾಥ್ ಮಾಹಿತಿ ನೀಡಿದರು.. ದಕ್ಷಿಣ ಭಾರತದ ಮುಖ್ಯ ಎಣ್ಣೆ ಬೆಳೆಗಳ ಬಗ್ಗೆ ಬೆಂಗಳೂರು ಸೆಂಟ್ರಲ್ ಇನ್ಸಿಟ್ಯೂಟ್ ಫಾರ್ ಮೆಡಿಕಲ್ ಆಂಡ್ ಆರೋಮೆಟಿಕ್ ಪ್ಲಾಟ್ಸ್ ತಂಡದವರಿಂದ ಮಾಹಿತಿ ಹಂಚಿಕೆ ನಡೆಯಿತು.

ಈ ಸಂದರ್ಭ ಅಗ್ರಿಕಲ್ಚರಲ್ ಸೈನ್ಸ್ ಫಾರಂ ಆಫ್ ಕೊಡಗು ಅಧ್ಯಕ್ಷ ಕೆ. ಆರ್. ಬಾಬು, ಉಪಾಧ್ಯಕ್ಷರುಗಳಾದ ಪಿ. ಎ. ಸುಬ್ರಮಣಿ, ಡಾ. ಜಿ. ಎಂ. ದೇವಗಿರಿ, ಕಾರ್ಯದರ್ಶಿ ಡಾ. ಬಿ. ಎನ್ ಸತೀಶ್, ಸಂಚಾಲಕ ಡಾ. ಸುನಿಲ್, ತಜ್ಞ ಸುಂದರೇಶನ್, ಪ್ರಗತಿಪರ ಕೃಷಿಕ ಎಂ. ಸಿ. ರಂಗಸ್ವಾಮಿ ಉಪಸ್ಥಿತರಿದ್ದರು.