ಮಡಿಕೇರಿ, ಫೆ. 23: ನಗರಸಭೆಯ ಕಾರ್ಯವೈಖರಿ ವಿರುದ್ಧ ಇತ್ತೀಚೆಗೆ ಬಿಜೆಪಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದು, ಆಡಳಿತ ವ್ಯವಸ್ಥೆಯಲ್ಲಿ ಕೊಂಚ ಸುಧಾರಣೆಯಾಗಿದೆ ಎಂದು ನಗರ ಬಿಜೆಪಿ ಸಮಿತಿಯ ಅಧ್ಯಕ್ಷ ಮಹೇಶ್ ಜೈನಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಧರಣಿಯನ್ನು ಹಾಸ್ಯಾಸ್ಪದವೆಂದು ಕಾಂಗ್ರೆಸ್ ಟೀಕೆ ಮಾಡಿದೆ. ಆದರೆ, ನಗರಸಭೆಯಲ್ಲಿ ಕಾಂಗ್ರೆಸ್ ವರ್ತನೆಯೇ ಹಾಸ್ಯಾಸ್ಪದವಾಗಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗುತ್ತಿದೆ ಎಂದು ಆರೋಪಿಸಿದರು. ಬಿ.ಜೆ.ಪಿ.ಯ ನಾಲ್ವರು ಸದಸ್ಯರ ವಿರುದ್ಧ ಕಾಂಗ್ರೆಸ್ಸಿಗರು ಮಾಡಿರುವ ಆರೋಪವನ್ನು ಸಾಬೀತುಪಡಿಸಲಿ, ದಾಖಲೆ ಇದ್ದರೆ ನಂದಕುಮಾರ್ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದ ಅವರು, ಆಧಾರ ರಹಿತ ಆರೋಪಗಳ ಮೂಲಕ ಜನರ ಹಾದಿ ತಪ್ಪಿಸುವ ಕೆಲಸ ಮಾಡಬಾರದೆಂದರು.

ಕಾಂಗ್ರೆಸ್ ಸದಸ್ಯರ ವಿರುದ್ಧವೇ ಅಕ್ರಮ ಒತ್ತುವರಿಯ ಆರೋಪವಿದೆ. ಹೀಗಿದ್ದೂ ಕಾಂಗ್ರೆಸ್ಸಿಗರು ಗಾಜಿನ ಮನೆಯಲ್ಲಿ ಕುಳಿತು ಬೇರೆಯವರ ಮನೆಗೆ ಕಲ್ಲು ಹೊಡೆಯುತ್ತಿದ್ದಾರೆ ಎಂದು ಮಹೇಶ್ ಜೈನಿ ಆರೋಪಿಸಿದರು.

ಜಾತ್ಯತೀತ ಜನತಾದಳ ನಡೆಸಿರುವ ಧರಣಿ ಸತ್ಯಾಗ್ರಹ ಕೆ.ಎಂ. ಗಣೇಶ್ ಅವರ ರಾಜಕೀಯ ಅಸ್ತಿತ್ವದ ಹೋರಾಟವೆಂದು ವ್ಯಂಗ್ಯವಾಡಿದ ಅವರು, ಕಾಂಗ್ರೆಸ್‍ನಲ್ಲಿದ್ದಾಗ ಮನಸ್ಸು ಮಾಡಿದ್ದರೆ, ತಮ್ಮದೆ ವಾರ್ಡ್‍ನಲ್ಲಿ ಬೇಕಾದಷ್ಟು ಅಭಿವೃದ್ಧಿ ಕಾರ್ಯಗಳನ್ನು ಗಣೇಶ್ ಮಾಡಬಹುದಿತ್ತೆಂದು ಅಭಿಪ್ರಾಯಪಟ್ಟರು.

ಕಾಲೇಜು ರಸ್ತೆಯಲ್ಲಿರುವ ವಾರಸುದಾರರಿಲ್ಲದ ಕಟ್ಟಡವೊಂದಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪ ಗಣೇಶ್ ಅವರ ಮೇಲಿದೆಯೆಂದು ಮಹೇಶ್ ಜೈನಿ ಆರೋಪಿಸಿದರು. ಗಣೇಶ್ ಅವರು ಪ್ರತಿನಿಧಿಸುವ ಮಲ್ಲಿಕಾರ್ಜುನ ನಗರದ ಸ್ಥಿತಿಗತಿಯನ್ನು ಮೊದಲು ಅವಲೋಕಿಸಲಿ ಎಂದರು.

ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಸದ್ಯದಲ್ಲೇ ದಾಖಲೆ ಬಿಡುಗಡೆ ಮಾಡುವದಾಗಿ ಮಹೇಶ್ ಜೈನಿ ತಿಳಿಸಿದರು.

ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮೇಶ್ ಸುಬ್ರಮಣಿ ಮಾತನಾಡಿ, ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ ಅವರು, ಬಿಜೆಪಿ ವಿರುದ್ಧ ಹೇಳಿಕೆ ನೀಡುವದನ್ನು ಬಿಟ್ಟು, ತಮ್ಮ ಕಚೇರಿಯಲ್ಲಿ ಬಾಕಿ ಇರುವ ಕಡತಗಳನ್ನು ಮೊದಲು ವಿಲೇವಾರಿ ಮಾಡಲಿ ಎಂದು ಒತ್ತಾಯಿಸಿದರು. ತೆನ್ನಿರ ಮೈನಾ, ಯುಜಿಡಿ ಯೋಜನೆಯ ಬಗ್ಗೆ ಮಾಹಿತಿ ಕೊರತೆಯಿಂದ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಉಪಾಧ್ಯಕ್ಷ ರಾಜೇಶ್, ಮಹಿಳಾ ಮೋರ್ಚಾದ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಅರುಣ್ ಶೆಟ್ಟಿ ಉಪಸ್ಥಿತರಿದ್ದರು.