ಕುಶಾಲನಗರ, ಫೆ 23: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸುಪಾರಿ ಪ್ರಕರಣಗಳು ಮಾಸುವ ಮುನ್ನವೇ ಪತ್ನಿಯೊಬ್ಬಳು ಸುಪಾರಿ ಕೊಟ್ಟು ತನ್ನ ಗಂಡನನ್ನು ಕೊಲೆ ಮಾಡಿಸಿದ ಘಟನೆ ಯೊಂದು ಮತ್ತೆ ಕುಶಾಲನಗರದಲ್ಲಿ ಮರುಕಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ದಂತೆ ಮೂವರು ಆರೋಪಿಗಳನ್ನು ಕುಶಾಲನಗರ ಪೊಲೀಸರು ಬಂಧಿಸಿ ಕ್ರಮಕೈಗೊಂಡಿದ್ದಾರೆ.ಕುಶಾಲನಗರದ ಮರಗೆಲಸ ಮಾಡುತ್ತಿದ್ದ ಕಾರ್ಮಿಕ ಮಹೇಶ (32) ಎಂಬಾತ ಕೊಲೆಯಾದ ವ್ಯಕ್ತಿ. ಕುಶಾಲನಗರದ ನೇತಾಜಿ ಬಡಾವಣೆ ಯಲ್ಲಿ ವಾಸವಾಗಿದ್ದ ಮಹೇಶನ ಪತ್ನಿ ಅಶ್ವಿತ (27), ಮೃತನ ಸಹಚರರಾದ ಕೆಆರ್ನಗರ ತಾಲೂಕು ಮಳಲಿ ಗ್ರಾಮದ ರಘು (28), ಬಸವನಹಳ್ಳಿಯ ಪೈಂಟರ್ ಕಿರಣ (34) ಎಂಬವರುಗಳು ಬಂಧಿತ ಆರೋಪಿಗಳು. ಮಹೇಶನ ನಿವಾಸದಲ್ಲಿ ಬುಧವಾರ ಬೆಳಗ್ಗೆ ಕೊಲೆ ಮಾಡಿದ ಆರೋಪಿಗಳು ಆತನ ಕಾರಿನಲ್ಲಿ (ಕೆಎ.41.ಝಡ್.6519) ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿಘಾಟ್ ರಸ್ತೆ ಅಂಚಿನಲ್ಲಿ ಮೃತದೇಹವನ್ನು ಎಸೆದು ಹಿಂತಿರುಗಿದ್ದಾಗಿ ವಿಚಾರಣೆ ಸಂದರ್ಭ ಬೆಳಕಿಗೆ ಬಂದಿದೆ.
ಮಹೇಶ ಕಳೆದ ಹಲವು ವರ್ಷಗಳಿಂದ ತನ್ನ ಸಹಚರರೊಂದಿಗೆ ಮರಗೆಲಸ ಮಾಡುವದರೊಂದಿಗೆ ಜೀವನ ನಡೆಸುತ್ತಿದ್ದ. ಮೂಲತಃ ಕೊಪ್ಪ ಬಳಿಯ ಬೆಣಗಾಲ್ ನಿವಾಸಿಯಾಗಿದ್ದು ಕುಶಾಲನಗರ ಸಮೀಪದ ಗಂಧದಕೋಟೆಯ ಅಶ್ವಿತ ಎಂಬಾಕೆಯನ್ನು 10 ವರ್ಷಗಳ ಹಿಂದೆ ವಿವಾಹವಾಗಿದ್ದು
(ಮೊದಲ ಪುಟದಿಂದ) ಎರಡು ಮಕ್ಕಳೊಂದಿಗೆ ವಾಸವಾಗಿದ್ದರು. ಕಳೆದ ಎರಡು ದಿನಗಳ ಅವಧಿಯಲ್ಲಿ ಮಹೇಶನ ಕುಟುಂಬ ಸದಸ್ಯರಿಗೆ ದೂರವಾಣಿ ಸಂಪರ್ಕ ದೊರೆಯದ ಹಿನ್ನಲೆಯಲ್ಲಿ ವಿಚಾರಿಸಿದಾಗ ಆತನ ಪತ್ನಿ ಸಬೂಬು ಹೇಳಿ ಕಾಲ ಕಳೆಯಲು ಪ್ರಯತ್ನಿಸಿದ್ದಳು ಎನ್ನಲಾಗಿದೆ. ಆದರೆ ಸಂಶಯಗೊಂಡ ಮಹೇಶನ ಸಹೋದರ ಸಹೋದರಿಯರು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಇದೇ ವೇಳೆ ಕಿರಣ ಎಂಬಾತ ಕೂಡ ಮಹೇಶನ ಹುಡುಕಾಟದಲ್ಲಿ ತೊಡಗಿದ್ದಾನೆ. ಮಹೇಶನ ಕಾರು, ಮೊಬೈಲ್ ಯಾವದೂ ಪತ್ತೆಯಾಗದಿದ್ದ ಸಂದರ್ಭ ಕುಶಾಲನಗರ ನಗರ ಪೊಲೀಸ್ ಠಾಣೆಗೆ ಪತ್ನಿಯೊಂದಿಗೆ ಕುಟುಂಬ ಸದಸ್ಯರು ದೂರು ನೀಡಲು ಮುಂದಾಗಿದ್ದಾರೆ. ಈ ನಡುವೆ ಮಹೇಶನ ಸಹಚರರಾದ ರಘು ಮತ್ತು ಕಿರಣ ಸೋಮವಾರಪೇಟೆಯಲ್ಲಿ ವಕೀಲರೊಬ್ಬರನ್ನು ಸಂಪರ್ಕಿಸಿ ಸೋಮವಾರಪೇಟೆಯ ಪೊಲೀಸ್ ಠಾಣೆಗೆ ಶರಣಾಗತಿಯಾದ ಬಗ್ಗೆ ವರದಿ ತಿಳಿದ ಕುಶಾಲನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ ಸಂದರ್ಭ ಮಹೇಶ ಕೊಲೆಯಾಗಿರುವದು ಖಚಿತಗೊಂಡಿದೆ.
ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸರಿಗೆ ಶಿರಾಡಿಘಾಟ್ ರಸ್ತೆ ಬದಿಯಲ್ಲಿ ಗುಂಡ್ಯ ಎಂಬಲ್ಲಿ ಅನಾಥ ಶವವೊಂದು ಪತ್ತೆಯಾಗಿದ್ದು ಕೆಲವು ಸುಳಿವಿನ ಮೇರೆಗೆ ಕೊಡಗು ಜಿಲ್ಲಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಮಹೇಶನ ಕುಟುಂಬ ಸದಸ್ಯರು ಆರೋಪಿ ಅಶ್ವಿತಳನ್ನು ಕುಶಾಲನಗರ ಪೊಲೀಸ್ ಠಾಣೆಗೆ ಒಪ್ಪಿಸಿ ನಂತರ ವಿಚಾರಣೆಯಲ್ಲಿ ಸತ್ಯ ಬಹಿರಂಗಗೊಂಡಿದೆ.
ಬುಧವಾರ ಮುಂಜಾನೆ ತನ್ನ ಸೂಚನೆ ಮೇರೆಗೆ ರಘು ಮತ್ತು ಕಿರಣ ಎಂಬವರು ತಮ್ಮ ನಿವಾಸಕ್ಕೆ ಬಂದು ತನ್ನ ಸಹಾಯದೊಂದಿಗೆ ಮಹೇಶನನ್ನು ಕುತ್ತಿಗೆ ಹಿಚುಕಿ ಕೊಲೆ ಮಾಡಿರುವದಾಗಿ ಅಶ್ವಿತ ಒಪ್ಪಿದ್ದಾಳೆ. ಕೊಲೆಯಾದ ನಂತರ ಮಹೇಶನ ಮೃತದೇಹವನ್ನು ಮನೆಯಲ್ಲಿ ಮಂಚದ ಕೆಳಭಾಗದಲ್ಲಿ ಇರಿಸಿ ಆರೋಪಿಗಳಾದ ರಘು ಮತ್ತು ಕಿರಣ ಸೋಮವಾರಪೇಟೆಗೆ ತೆರಳಿ ಅಲ್ಲಿನ ವಕೀಲರನ್ನು ಸಂಪರ್ಕಿಸಿ ಸಲಹೆ ಕೇಳಿದ್ದಾರೆ ಎನ್ನಲಾಗಿದೆ. ತದನಂತರ ಮೃತದೇಹವನ್ನು ಮಹೇಶನಿಗೆ ಸೇರಿದ ಸ್ವಿಫ್ಟ್ ಕಾರಿನಲ್ಲಿ ಶಿರಾಡಿಘಾಟ್ನತ್ತ ಒಯ್ದು ಎಸೆದು ನಂತರ ಕಾರನ್ನು ಸುಳ್ಯ ಬಳಿ ಬಿಟ್ಟು ಕುಶಾಲನಗರಕ್ಕೆ ಹಿಂತಿರುಗಿದ್ದಾರೆ ಎನ್ನುವ ಮಾಹಿತಿ ಒದಗಿದೆ.
ಏನೂ ತಿಳಿಯದಂತೆ ನಟಿಸಿದ ಇಬ್ಬರು ಸೇರಿದಂತೆ ಮಹೇಶನ ಪತ್ನಿ ಕೂಡ ತನ್ನ ಪತಿ ಬುಧವಾರದಿಂದ ಕಾಣೆಯಾಗಿರುವದಾಗಿ ಸುದ್ದಿ ಹಬ್ಬಿಸಿ ಕೊನೆಗೆ ಜೈಲು ಸೇರಿದ ಪ್ರಕರಣ ಇದಾಗಿದೆ. ಪತಿಯನ್ನು ಕೊಲೆ ಮಾಡಿ ಏನೂ ಅರಿಯದಂತೆ ಎರಡು ದಿನ ನಾಟಕವಾಡಿರುವದಾಗಿ ಕೊಲೆಯಾದ ಮಹೇಶನ ಸಹೋದರಿಯರಾದ ಶೋಭಾ ಮತ್ತು ವನಜಾಕ್ಷಿ ತಮ್ಮ ನೋವನ್ನು ವ್ಯಕ್ತಪಡಿಸಿಕೊಂಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಮೃತ ಮಹೇಶನಿಗೆ ಎರಡು ಪುಟಾಣಿ ಮಕ್ಕಳಿದ್ದು ಇದೀಗ ಪ್ರಕರಣದಿಂದ ತಂದೆ ಇಹಲೋಕ ತ್ಯಜಿಸಿದರೆ ತಾಯಿ ಜೈಲು ಪಾಲಾಗುವದರೊಂದಿಗೆ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ ಎನ್ನಬಹುದು. ಸೋಮವಾರಪೇಟೆ ಸರ್ಕಲ್ ಇನ್ಸ್ಪೆಕ್ಟರ್ ನಂಜುಂಡೇಗೌಡ, ಕುಶಾಲನಗರ ಪ್ರಭಾರ ಠಾಣಾಧಿಕಾರಿ ಶಿವಣ್ಣ ತನಿಖೆ ಕೈಗೊಂಡಿದ್ದಾರೆ.