ಮಡಿಕೇರಿ, ಫೆ. 23: ದೇವರಪುರ ಗ್ರಾ.ಪಂ. ವ್ಯಾಪ್ತಿಯ ಹೆಬ್ಬಾಲೆ ಪೈಸಾರಿ ನಿವಾಸಿಗಳು ಇಲ್ಲಿನ ಗಾಂಧಿ ಮಂಟಪ ಎದುರು ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಹಾಡಿಯ ಹತ್ತಾರು ಕುಟುಂಬಗಳ ಮಹಿಳೆಯರು, ಮಕ್ಕಳ ಸಹಿತ ಧರಣಿ ಆರಂಭಿಸಿರುವ ನಿವಾಸಿಗಳು ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ಬೇಡಿಕೆ ಈಡೇರುವ ತನಕ ವಿರಮಿಸುವದಿಲ್ಲವೆಂದು ಘೋಷಿಸಿ ದ್ದಾರೆ.ದ.ಸಂ.ಸ. ಪ್ರಮುಖ ಸುಬ್ರಮಣಿ ಮಾತನಾಡಿ ಪೈಸಾರಿಯಲ್ಲಿ ಕಳೆದ ನಾಲ್ಕಾರು ದಶಕಗಳಿಂದ 150ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, ಯಾವದೇ ಮೂಲಭೂತ ಸೌಕರ್ಯ ಕಲ್ಪಿಸಿಲ್ಲವೆಂದು ಅಳಲು ತೋಡಿ ಕೊಂಡರು. ಅಲ್ಲದೆ 1989ರ ಅವಧಿಗೆ ಅಂದಿನ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿದ್ದ ಜೆ.ಎ. ಕರುಂಬಯ್ಯ ಅವರು ಹಕ್ಕುಪತ್ರಗಳನ್ನು ನೀಡಿದ್ದಾರೆ ಎಂದು ದಾಖಲಾತಿಗಳನ್ನು ಪ್ರದರ್ಶಿಸಿ ದರು. ಹೀಗಿರುವಾಗ ಗ್ರಾ.ಪಂ. ಸೇರಿ ದಂತೆ ಯಾವದೇ ಜನಪ್ರತಿನಿಧಿಗಳು, ಸರಕಾರದಿಂದ ಕುಡಿಯುವ ನೀರು, ವಿದ್ಯುತ್, ಅಡುಗೆ ಅನಿಲ, ಸೌರದೀಪ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸುತ್ತಿಲ್ಲವೆಂದು ಗಂಭೀರ ಆರೋಪಿಸಿದರು. ರಾತ್ರಿ ಗಾಂಧಿ ಮೈದಾನದಲ್ಲೇ ಕಳೆದಿರುವ ಧರಣಿ ನಿರತರು, ತಾ. 24ರಂದು ಕೂಡ ಮುಷ್ಕರ ಮುಂದು ವರಿಸುವದಾಗಿ ಘೋಷಿಸಿದ್ದಾರೆ.