ವೀರಾಜಪೇಟೆ: ವಿದ್ಯಾರ್ಥಿಗಳು ಟಿವಿ ಮತ್ತು ಮೊಬೈಲ್‍ಗಳನ್ನು ದೂರವಿಟ್ಟು ಪುಸ್ತಕದ ಕಡೆಗೆ ಹೆಚ್ಚು ಗಮನ ಹರಿಸು ವದರೊಂದಿಗೆ ವಿದ್ಯಾರ್ಥಿ ಜೀವನ ದಲ್ಲಿ ಸಿಗುವಂತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಹುದ್ದೆಗೇರುವಂತಾಗಬೇಕು ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಹಾಗೂ ದಶಮಾನೋತ್ಸವ ಪ್ರಯುಕ್ತ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧ್ಯಾಪಕರ ಸಂಘದ ಸಹಯೋಗದಲ್ಲಿ ರಾಜ್ಯಶಾಸ್ತ್ರದ ಬೆಳಕು ಭಿತ್ತಿಪತ್ರಿಕೆ ಬಿಡುಗಡೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವಿಚಾರಗೋಷ್ಠಿಯಲ್ಲಿ ದೀಪಬೆಳಗಿಸಿದ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರು ‘ಪ್ರಜಾಪ್ರಭುತ್ವ ಹಾಗೂ ಸಮ್ಮಿಶ್ರ ಸರ್ಕಾರ' ಎಂಬ ವಿಷಯದ ಬಗ್ಗೆ ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ವೇಣುಗೋಪಾಲ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಆರ್. ದಿವ್ಯ, ಸಂಯೋಜಕರುಗಳಾದ ಎಂ.ಎನ್. ವನಿತ್ ಕುಮಾರ್, ಪ್ರೊ. ಎಂ.ಬಿ. ದಿವ್ಯ, ಅಕ್ಷಿತಾ ನಾಯಕ್, ಮುಂತಾದವರು ಉಪಸ್ಥಿತರಿದ್ದರು. ವನಿತ್ ಕುಮಾರ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ವಿ.ಆರ್.ಮಧುರ ಮತ್ತು ಇ.ಎಸ್. ಐಶ್ವರ್ಯ ನಿರೂಪಿಸಿದರೆ ಆರ್.ದಿವ್ಯ ವಂದಿಸಿದರು.