ಶನಿವಾರಸಂತೆ, ಫೆ. 23: ಅತೀಯಾದ ಆಧುನಿಕತೆಯಿಂದ ಆಧ್ಯಾತ್ಮಿಕತೆಗೆ ಧಕ್ಕೆ ಉಂಟಾಗುತ್ತದೆ ಎಂದು ಕೇರಳದ ಸೈಯದ್ ಸಫ್‍ವಾನ್ ಜಂಙಳ್ ಏಲ್ ಮಲೆ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆ ಹ್ಯಾಂಡ್ ಪೋಸ್ಟ್ ಶಂಶುಲ್ ಉಲಮಾ ಮೈದಾನದಲ್ಲಿ ಎಸ್‍ಕೆಎಸ್‍ಎಸ್‍ಎಫ್ ಹಾಗೂ ಎಸ್‍ವೈಎಸ್ ವತಿಯಿಂದ ನಡೆದ ಮಜ್ಲಿಸುನ್ನೂರ್ ವಾರ್ಷಿಕೋತ್ಸವ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೊಲೆ, ಸುಲಿಗೆ, ಅತ್ಯಾಚಾರ, ಅಕ್ರಮ ನಿರಂತರವಾಗಿ ನಡೆಯುತ್ತಿದ್ದು, ಗಾಂಜಾ ವ್ಯಸನಿಗಳು ಸಮಾಜದಲ್ಲಿ ಹೆಚ್ಚಾಗುತ್ತಿದ್ದಾರೆ. ಆಧ್ಯಾತ್ಮ ಮಾರ್ಗದಲ್ಲಿ ಮನಸ್ಸನ್ನು ಲೀನಗೊಳಿಸಿ, ಧಾರ್ಮಿಕ ಭಾವನೆಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡರೆ ಕೆಟ್ಟತನದಿಂದ ಮುಕ್ತಿ ಹೊಂದಬಹುದು ಎಂದರು.

ನೆಲ್ಲಿಹುದಿಕೇರಿ ಇಕ್ಬಾಲ್ ಮುಸ್ಲಿಯಾರ್ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಳಿತನ್ನೇ ಅಳವಡಿಸಿಕೊಂಡರೆ ಸಮಾಜ ಭ್ರಷ್ಟಾಚಾರ ಮುಕ್ತವಾಗಿ ಅನೀತಿಯಿಂದ ದೂರವಾಗಿ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭ ಎಸ್‍ಕೆಎಸ್ ಎಸ್‍ಎಫ್ ಜಿಲ್ಲಾ ಸಮಿತಿಗೆ ಆಯ್ಕೆಯಾದ ಇಬ್ರಾಹಿಂ ಭಾತಿಫ್, ಸಿದ್ದೀಕ್ ಹಾಜಿ, ಜಿ.ವಿ. ಅಬ್ದುಲ್ ರೆಹಮಾನ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಮಹಮ್ಮದ್ ಫೈಝಿ, ತಮ್ಲೀಕ್ ದಾರಿಮಿ, ಸೂಫಿ ದಾರಿಮಿ, ಡಿ.ವಿ. ಸುಲೈಮಾನ್, ಇಬ್ರಾಹಿಂ ಝಹೀರ್, ನಿಝಾಮಿ, ಖಲಂಧರ್ ಶಾಫಿ, ನೌಫಲ್ ಉಪಸ್ಥಿತರಿದ್ದರು.