ಮಡಿಕೇರಿ, ಫೆ. 24: ಗಿರಿಜನ ಹಾಡಿಯಗಳಿಗೆ ಸರ್ಕಾರದಿಂದ ಸಿಗುವ ಮೂಲ ಸೌಲಭ್ಯಗಳನ್ನು ತಲುಪಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ನಾಗರಹೊಳೆ ವನ್ಯಜೀವಿ ವ್ಯಾಪ್ತಿಗೊಳ ಪಡುವ ಗಿರಿಜನ ಹಾಡಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಅವಶ್ಯವಿರುವ ಕುಡಿಯುವ ನೀರು, ರಸೆ,್ತ ವಿದ್ಯುತ್, ಸೋಲಾರ್ ಸಂಪರ್ಕ ಹಾಗೂ ಇತರೆ ಸೌಲಭ್ಯಗಳನ್ನು ಕೊಡಬೇಕು. ಕಡ್ಡಾಯವಾಗಿ ವಸತಿ ಯೋಜನೆ ಕೈಗೊಳ್ಳುವಾಗ ಶೌಚಾಲಯವಿರಬೇಕು. ತಿತಿಮತಿಯಲ್ಲಿ ಯಾವದೇ ಮನೆಗಳಲ್ಲೂ ಶೌಚಾಲಯವಿಲ್ಲ ಎಂದು ಜಿಲ್ಲಾಧಿಕಾರಿ ಆಕ್ಷೇಪ ವ್ಯಕ್ತಪಡಿಸಿದರು.
ಪಂಚಾಯಿತಿಗಳಿಂದ ಮನೆ ಕಟ್ಟಿಕೊಳ್ಳಲು ಕೊಡುವ ಅನುದಾನ ದಲ್ಲೇ ಶೌಚಾಲಯ ಕಟ್ಟಿಕೊಳ್ಳಲು ರೂ. 15 ಸಾವಿರ ನೀಡಲಾಗುತ್ತಿದೆ. ಪಂಚಾಯಿತಿಗಳ ಮೂಲಕ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಪೈಪ್‍ಲೈನ್ ಸಂಪರ್ಕ ಮತ್ತು ಇತರ ಕೆಲಸಗಳಿಗೆ ಅನುದಾನ ಖರ್ಚು ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಾಗರಹೊಳೆ ರಸ್ತೆ ಬಳಿ ನಿರ್ಮಾಣವಾಗಿರುವ ಹಾಡಿಯ ಆಶ್ರಮ ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಮತ್ತು ಕಟ್ಟಡವನ್ನು ವಿಸ್ತರಣೆ ಮಾಡಿ, ಆನೆ ಹಾವಳಿಯಿಂದ ರಕ್ಷಣೆ ಮಾಡಿ ಎಂದು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶವನ್ನು ಗುರುತಿಸಿ ಪಟ್ಟಿಮಾಡಿ ಗ್ರಾಮ ಪಂಚಾಯಿತಿಯಿಂದ ಗಿರಿಜನರಿಗೆ ಸಿಗುವ ಸೌಲಭ್ಯವನ್ನು ತಲುಪಿಸಿ. 14ನೇ ಹಣಕಾಸು ಕ್ರಿಯಾ ಯೋಜನೆಯನ್ನು ಪ್ರತಿಯೊಂದು ಪಂಚಾಯಿತಿಗಳು ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗ ಮಾಡಬೇಕು ಎಂದು ನಿರ್ದೇಶನ ನೀಡಿದರು. ಐ.ಟಿ.ಡಿ.ಪಿ. ಯೋಜನಾ ಧಿಕಾರಿ ಪ್ರಕಾಶ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಯಡಿ 693 ಪರಿಶಿಷ್ಟ ಪಂಗಡದ ವೈಯಕ್ತಿಕ ಕ್ಲೇಮುಗಳನ್ನು ಮಾನ್ಯ ಮಾಡಿ 501.64 ಎಕರೆ ವಿಸ್ತೀರ್ಣ ಮಂಜೂರು ಮಾಡಲಾಗಿದೆ. ಹಾಗೆಯೇ ಕೊಡಗು ಜಿಲ್ಲೆಯ 470 ಕುಟುಂಬಗಳನ್ನು ಅರಣ್ಯ ಇಲಾಖೆಯವರು ಈಗಾಗಲೇ ವಿಶೇಷ ಪ್ಯಾಕೇಜಿನಡಿ ಸ್ಥಳಾಂತರಿಸಿ ರುತ್ತಾರೆ ಎಂದು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜ, ಕೃಷ್ಣಪ್ರಸಾದ್, ಶ್ರೀಪತಿ, ಪೌಲ್ ಅಂಟೋನಿ, ವೀರಾಜಪೇಟೆಯ ಪರಿಶಿಷ್ಟ ವರ್ಗಗಳ ತಾಲೂಕು ಅಧಿಕಾರಿ ಚಂದ್ರಶೇಖರ್, ಆರ್.ಎಫ್.ಓ. ಕಿರಣ್ ಕುಮಾರ್, ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.