ಮಡಿಕೇರಿ, ಫೆ. 24: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಎ.ಪಿ.ಸಿ.ಎಂ.ಎಸ್. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಹಕಾರ ಸಂಘಗಳಿಗೆ ಅನ್ವಯವಾಗುವ ಸರಕು ಮತ್ತು ಸೇವಾ ತೆರಿಗೆ ಹಾಗೂ ಮದ್ರಾಸ್ ಫರ್ಟ್‍ಲೈಸರ್‍ನÀ ವಿಜಯ್ ರಸಗೊಬ್ಬರದ ಕುರಿತು ಶಿಕ್ಷಣ ಕಾರ್ಯಕ್ರಮವನ್ನು ಇತ್ತೀಚೆಗೆ ಮಡಿಕೇರಿಯ ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಸಹಕಾರ ಸಂಘಗಳು ವೈಜ್ಞಾನಿಕ ತಂತ್ರಜ್ಞಾನದ ಮೂಲಕ ಸದಸ್ಯರನ್ನು ತಲಪಬೇಕು. ಆಗ ಮಾತ್ರ ಹೆಚ್ಚಿನ ಯಶಸ್ಸು ಸಾಧ್ಯ. ಹಿಂದೆ ರಸಗೊಬ್ಬರ ಬೇಡಿಕೆ ಇದ್ದರೂ ಸರಬರಾಜು ಆಗದೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿತ್ತು. ಆದರೆ ಪ್ರಸ್ತುತ ಸರ್ಕಾರ ಮತ್ತು ಇಲಾಖೆಯ ಕ್ರಮಗಳಿಂದಾಗಿ ವ್ಯವಸ್ಥಿತ ಸರಬರಾಜು ನಡೆಯುತ್ತಿದೆ. ಸೂಕ್ತ ಕ್ರಮಗಳಿಂದಾಗಿ ಕಲಬೆರಕೆಯೂ ತಪ್ಪುತ್ತಿದೆ. ಅಧಿಕೃತ ಸಂಸ್ಥೆಗಳಿಂದಲೇ ಗೊಬ್ಬರ ಖರೀದಿಸಬೇಕು. ಈ ಬಾರಿ ಕಾಫಿಯೂ ಇಲ್ಲದೆ ಬೆಲಯೂ ಇಲ್ಲದೆ ಗಂಭೀರ ಪರಿಸ್ಥಿತಿ ಎದುರಾಗಿದೆ. ಇದಕ್ಕಾಗಿ ಹನಿ ನೀರಾವರಿಯಂತಹ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳುವದರಿಂದ ಗಿಡಗಳಿಗೆ ನೇರವಾಗಿ ನೀರು, ದ್ರವ ಗೊಬ್ಬರಗಳನ್ನು ನೀಡಿದಲ್ಲಿ ಇಳುವರಿ ಉತ್ತಮಗೊಳ್ಳುತ್ತದೆ. ಕೃಷಿ ಇಲಾಖೆಗಳು ಈ ದಿಸೆಯಲ್ಲಿ ಹೆಚ್ಚಿನ ಆಸಕ್ತಿವಹಿಸಿ ಸಬ್ಸಿಡಿ, ಸಹಾಯಧನ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಮದ್ರಾಸ್ ಫರ್ಟಿಲೈಸರ್ಸ್‍ನ ಜನರಲ್ ಮ್ಯಾನೇಜರ್ ಟಿ. ಪೌಲ್ ಪ್ರೇಮ್‍ಕುಮಾರ್ ಮಾತನಾಡಿ, ಮದ್ರಾಸ್ ಫರ್ಟಿಲೈಸರ್ಸ್‍ನ ಸಂಯುಕ್ತ ಗೊಬ್ಬರ ವಿಜಯ್ 17-17-17 ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಹಲವು ಗುಣಾತ್ಮಕ ಪರೀಕ್ಷೆಗಳನ್ನು ನಡೆಸಿದ ನಂತರವೇ ಇದನ್ನು ಸರಬರಾಜು ಮಾಡಲಾಗುತ್ತದೆ. ಮುಂಗಾರು ಹಂಗಾಮಿನ ಆರಂಭದಲ್ಲಿ ಇದನ್ನು ಪೂರೈಸಲಾಗುತ್ತದೆ. ಸರಿಯಾದ ಬೆಲೆಯೊಂದಿಗೆ ಸರಿಯಾದ ಸಮಯದಲ್ಲಿ ಪಾರದರ್ಶಕವಾಗಿ ಉತ್ಪಾದನೆಗಳನ್ನು ಪೂರೈಸುವದೇ ನಮ್ಮ ಧ್ಯೇಯ ಎಂದು ಹೇಳಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಮಪ್ಪ ಮಾತನಾಡಿ, ಜಿಲ್ಲೆಯಲ್ಲಿ ಇಲಾಖೆಯು ಹಲವು ತಿಂಗಳುಗಳ ಮುಂಚಿತವಾಗಿ ಕ್ರಮಗಳನ್ನು ಕೈಗೊಂಡು ನಿಗದಿತವಾಗಿ ಹಾಗೂ ಸುಲಲಿತವಾಗಿ ಗೊಬ್ಬರ ಸರಬರಾಜು ಮಾಡುತ್ತಿದ್ದು, ಸತತ ಗುಣಮಟ್ಟ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದುವರೆಗೆ ಜಿಲ್ಲೆಯಲ್ಲಿ ಯಾವದೇ ದೂರು ಬಂದಿಲ್ಲ. ಈ ಕುರಿತು ಅನುಮಾನಗಳು ಬಂದಲ್ಲಿ ದೂರು ನೀಡಿ ಎಂದರು. ಪರವಾನಗಿ ನವೀಕರಿಸಲು, ಪಿ.ವಿ.ಎಸ್. ಯಂತ್ರ ಅಳವಡಿಸಲು ಹಾಗೂ ಕೃಷಿ ಭಾಗ್ಯ ಯೋಜನೆ ಕುರಿತು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ ಕನ್ನಂಡ ಸಂಪತ್ ವಿಜಯ್ ರಸಗೊಬ್ಬರ ಧ್ಯೇಯದಂತೆ ಬಂಗಾರದ ಬೆಳೆಯನ್ನೇ ಪಡೆಯಬೇಕು. ಸಂಯುಕ್ತ ಗೊಬ್ಬರಗಳ ಅನುಪಾತವನ್ನು ತಿಳಿದು ಅದರಂತೆ ರೈತರಿಗೆ ಮನವರಿಕೆ ಮಾಡಿಕೊಡಲು ಸಂಘಗಳಿಗೆ ತಿಳಿಸಿದರು.

ಬೆಂಗಳೂರಿನ ಸನ್ನದು ಲೆಕ್ಕಿಗ ಅನಿಲ್ ಭಾರದ್ವಾಜ್ ಸಹಕಾರ ಸಂಘಗಳಿಗೆ ಅನ್ವಯವಾಗುವ ಸರಕು ಮತ್ತು ಸೇವಾ ತೆರಿಗೆ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಎಂ.ಎಫ್.ಎಲ್.ನ ಡೆಪ್ಯೂಟಿ ಮ್ಯಾನೇಜರ್ ಎಸ್. ಕೃಷ್ಣ ನಾಗೇಶ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಚ್.ಡಿ. ರವಿಕುಮಾರ್ ಉಪಸ್ಥಿತರಿದ್ದರು. ಎಂ.ಎಫ್.ಎಲ್.ನ ಮುಖ್ಯ ವ್ಯವಸ್ಥಾಪಕ ಎಸ್. ನಾಗರಾಜಯ್ಯ ಸ್ವಾಗತಿಸಿ, ಯೂನಿಯನ್ ವ್ಯವಸ್ಥಾಪಕಿ ಆರ್. ಮಂಜುಳ ಪ್ರಾರ್ಥಿಸಿದರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿ, ಎಂ.ಎಫ್.ಎಲ್.,ನ ಪ್ರಾಂತೀಯ ವ್ಯವಸ್ಥಾಪಕ ಗಣೇಶ್ ವಂದಿಸಿದರು.