ಕುಶಾಲನಗರ, ಫೆ. 24: ಕುಶಾಲನಗರದಲ್ಲಿ ತಾ. 25 ರಂದು (ಇಂದು) ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವ ಅಂಗವಾಗಿ ತಿರುಮಲ ತಿರುಪತಿ ದೇವಸ್ತಾನದಿಂದ ಕುಶಾಲನಗರಕ್ಕೆ ಶನಿವಾರ ಆಗಮಿಸಿದ ಪ್ರಮುಖ ಅರ್ಚಕರು ಹಾಗೂ ತಿರುಪತಿ ತಿಮ್ಮಪ್ಪನ ಉತ್ಸವ ಮೂರ್ತಿಗಳನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು.

ಸ್ತಳೀಯ ಬೈಚನಹಳ್ಳಿ ಮಾರಿಯಮ್ಮ ದೇವಾಲಯ ಬಳಿ ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರಮುಖರು, ಎಸ್‍ಎಲ್‍ಎನ್ ಸಮೂಹ ಸಂಸ್ಥೆ ಪ್ರತಿನಿಧಿಗಳು ಹಾಗೂ ಭಕ್ತಾದಿಗಳು ಸ್ವಾಗತಿಸಿದರು.

ಈ ಸಂದರ್ಭ ತಿರುಮಲ ತಿರುಪತಿ ದೇವಾಲಯದ ಪ್ರತಿನಿಧಿ ಬಾಲಾಜಿ, ಎಸ್‍ಎಲ್‍ಎನ್ ಸಂಸ್ತೆಯ ಪ್ರಮುಖರಾದ ವಿಶ್ವನಾಥನ್, ಸಾತಪ್ಪನ್, ದೇವಾಲಯ ಒಕ್ಕೂಟದ ಅಧ್ಯಕ್ಷರಾದ ಎಂ.ಕೆ. ದಿನೇಶ್ ಮತ್ತು ಪದಾಧಿಕಾರಿಗಳು ಇದ್ದರು.

ಶ್ರೀನಿವಾಸ ಕಲ್ಯಾಣೋತ್ಸವ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಕುಶಾಲನಗರ ಆಂಜನೇಯ ದೇವಾಲಯದಿಂದ ಹೊರಟ ಮೆರವಣಿಗೆ ರಥಬೀದಿ ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಕಲ್ಯಾಣೋತ್ಸವ ಸಭಾಂಗಣಕ್ಕೆ ತೆರಳಿತು.

ಚಂಡೆ ಮೇಳ ವಾದ್ಯಗಳ ಸಮ್ಮುಖದಲ್ಲಿ ಉತ್ಸವ ಮೂರ್ತಿಯನ್ನು ಹೊತ್ತ ರಥದ ಮೆರವಣಿಗೆ ನಡೆಯಿತು.

ತಿರುಮಲ ತಿರುಪತಿ ದೇವಸ್ತಾನ ಸಮಿತಿ ವತಿಯಿಂದ ಕುಶಾಲನಗರದಲ್ಲಿ ಇಂದು (25 ರಂದು) ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭಕ್ಕೆ ಪೂರ್ವಸಿದ್ಧತೆ ನಡೆದಿದೆ. ಬೈಚನಹಳ್ಳಿ ತಾವರೆಕೆರೆ ಎದುರುಗಡೆ ಎಸ್‍ಎಲ್‍ಎನ್ ಟೈಮ್ ಸ್ಕ್ವೇರ್ ಮೈದಾನದಲ್ಲಿ ಸಂಜೆ 4 ರಿಂದ 8ರ ತನಕ ಪೂಜಾ ಕಾರ್ಯಕ್ರಮ ನಡೆಯಲಿದೆ.