ಸೋಮವಾರಪೇಟೆ, ಫೆ. 24: ಗ್ರಾಮೀಣ ಕೃಷಿ ಯಂತ್ರೋಪಕರಣದ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೃಷಿ ಇಲಾಖೆಯ ನಿರ್ದೇಶಕ ಡಾ. ರಾಜಶೇಖರ್ ತಿಳಿಸಿದ್ದಾರೆ.
ಗ್ರಾಮೀಣ ಯುವಕರನ್ನು ಕೃಷಿಯೆಡೆಗೆ ಆಕರ್ಷಿಸಲು ಮತ್ತು ಸ್ಥಳೀಯವಾಗಿ ಸಣ್ಣ ಕೃಷಿ ಉಪಕರಣಗಳ ತಯಾರಿಕೆಗೆ ಹಾಗೂ ಕೃಷಿಯಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸಲು ನೂತನ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಕೃಷಿ ಇಂಜಿನಿಯರಿಂಗ್ ಡಿಪ್ಲೊಮಾ, ಆಟೋ ಮೊಬೈಲ್, ಮೆಕ್ಯಾನಿಕಲ್, ಐಟಿಐ, ಪಿ.ಯು.ಸಿ ತೇರ್ಗಡೆ ಹೊಂದಿರುವ ಗ್ರಾಮೀಣ ಯುವಕರನ್ನು ಪರಿಗಣಿಸಲಾಗುವದು ಎಂದು ರಾಜಶೇಖರ್ ತಿಳಿಸಿದ್ದಾರೆ.
ಕೃಷಿ ವಿಶ್ವ ವಿದ್ಯಾಲಯದಿಂದ ಕೃಷಿ ಯಂತ್ರೋಪಕರಣಗಳ ದುರಸ್ತಿ ಹಾಗೂ ನಿರ್ವಹಣೆಗೆ ಸಂಬಂಧಿಸಿ ದಂತೆ ತರಬೇತಿ ಪಡೆದಿರುವ ಪ್ರಮಾಣ ಪತ್ರಗಳನ್ನು ಪಡೆದಿದ್ದು, ರೈತ ಕುಟುಂಬಕ್ಕೆ ಸೇರಿದವರಾಗಿರಬೇಕು. ಕನಿಷ್ಟ 18 ವರ್ಷದಿಂದ ಗರಿಷ್ಠ 45ವರ್ಷದೊಳಗಿರಬೇಕು. ಕನಿಷ್ಟ 20/15 ಅಡಿ ಅಳತೆಯ ಕೊಠಡಿ, ಗೋದಾಮು ಹೊಂದಿರಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಶೇ.50 ರಷ್ಟು ಗರಿಷ್ಠ 5.00 ಲಕ್ಷಗಳ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಶೇ.75 ರಷ್ಟು ಅಥವಾ ಗರಿಷ್ಟ 7.50 ಲಕ್ಷಗಳ ಮಿತಿಯೊಳಗೆ ಸಹಾಯಧನ ವನ್ನಾಗಿ ಬ್ಯಾಂಕ್ ಲೋನ್ ಆಧಾರದ ಮೇರೆಗೆ ಸಹಾಯಧನ ನೀಡಲಾಗುವದು.
ಪಟ್ಟಣ ಪಂಚಾಯಿತಿ, ಮುನಿಸಿಪಲ್ ಮತ್ತು ನಗರ ಪ್ರದೇಶಗಳನ್ನು ಹೊರತು ಪಡಿಸಿ ತಾಲೂಕಿಗೆ ಒಂದು ಸೇವಾ ಕೇಂದ್ರವನ್ನು ಸ್ಥಾಪಿಸಬೇಕಿದ್ದು, ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬೇಕೆಂದು ತಿಳಿಸಿದ್ದಾರೆ.