ವೀರಾಜಪೇಟೆ, ಫೆ. 24: ಸಹಕಾರಿ ಕ್ಷೇತ್ರಗಳು ರೈತರ ಬೆನ್ನೆಲುಬು. ರೈತರ ಬೇಕು ಬೇಡಿಕೆಗಳನ್ನು ಈಡೇರಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಸಹಕಾರಿ ಸಂಘಗಳು ಎಲ್ಲಿ ಸುಸ್ಥಿತಿಯಲ್ಲಿದೆಯೋ ಅಲ್ಲಿ ರೈತರು ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಅಂದಾಜು 45 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ನೂತನ ಕಚೇರಿ, ಸಭಾಂಗಣ ಹಾಗೂ ಗೋದಾಮು ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಫಸಲು ಭೀಮ ಯೋಜನೆ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಕೆಲವೊಂದು ನೀತಿ ನಿಯಮಗಳು ಅಡ್ಡಿ ಬರುತ್ತಿವೆÉ. ಈ ಬಾರಿಯ ಹವಾಮಾನ ವೈಪರೀತ್ಯದಿಂದಾಗಿ ಫಸಲು ಕುಂಠಿತಗೊಂಡಿದೆ. ಕೆಲವೊಂದು ನ್ಯೂನತೆಗಳಿಗೆ ತಿದ್ದುಪಡಿ ತರುವಂತೆ ತಾನು ಮತ್ತು ಮಲೆನಾಡು ಭಾಗದ ಶಾಸಕರುಗಳು ಪಕ್ಷ ಬೇದ ಮರೆತು ವಿಧಾನಸಭೆಯಲ್ಲಿ ಕೃಷಿ ಸಚಿವರಿಗೆ ಮನವರಿಕೆ ಮಾಡಿ ಕೊಟ್ಟಿದ್ದೇವೆ. ಬದಲಾವಣೆಯ ಬಗ್ಗೆ ಶೀಘ್ರದಲ್ಲಿಯೇ ಅಗತ್ಯ ಮಾರ್ಗಸೂಚಿಗಳನ್ನು ಕೇಂದ್ರಕ್ಕೆ ಕಳುಹಿಸಲಾಗುವದು ಎಂದು ಕೃಷಿ ಸಚಿವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಅರಣ್ಯ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಮಾತನಾಡಿ ಸಣ್ಣ ಬೆಳೆಗಾರರನ್ನು ದೈನಂದಿನ ಜೀವನದಲ್ಲಿ ಸಹಕಾರಿ ಸಂಘ ಸಂಸ್ಥೆಗಳು ಸ್ವಾವಲಂಭಿ ಬದುಕಿನತ್ತ ತೆಗೆದುಕೊಂಡು ಹೋಗಲು ಸಹಕಾರಿಯಾಗುತ್ತಿವೆ. ಸಹಕಾರ ಸಂಘಗಳೊಂದಿಗೆ ಮಹಿಳಾ ಸಂಘಗಳು ಸ್ಥಾಪನೆಯಾದರೆ ಬಹುತೇಕ ಮಹಿಳಾ ಸಹಕಾರಿಗಳಿಗೆ ಉಪಯೋಗವಾಗುತ್ತದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಸಹಕಾರ ಸಂಘದ ಅಧ್ಯಕ್ಷ ಕೊಂಗಂಡ ವಾಸು ಮುದ್ದಯ್ಯ ವಹಿಸಿದ್ದರು.