ಮಡಿಕೇರಿ, ಮಾ.5 : ಮಂಗಳೂರು ವಿಶ್ವವಿದ್ಯಾನಿಲಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ವತಿಯಿಂದ ಹೊಸ ಹೆಚ್ಚುವರಿ ತರಗತಿಗಳ ಕೊಠಡಿಯನ್ನು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮತ್ತು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಸಚಿವ ಪ್ರೊ.ಬಿ.ಎಸ್.ನಾಗೇಂದ್ರ ಪ್ರಕಾಶ್ ಉದ್ಘಾಟಿಸಿದರು.

ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ತಿನ ಸzಸ್ಯೆ ವೀಣಾ ಅಚ್ಚಯ್ಯ ಕಾರ್ಯಪ್ಪ ಕಾಲೇಜು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಂಡಿರುವ ಗೌರವವೇ ಬೇರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಪ್ಪರವರು ಶಿಸ್ತಿನ ಸಿಪಾಯಿ ಹಾಗೆಯೇ ವಿದ್ಯಾರ್ಥಿಗಳು ಶಿಸ್ತನ್ನು ಅಳವಡಿಸಿಕೊಂಡು ಬೇರೆಯವರಿಗೆ ಮಾದರಿಯಾಗಿರಬೇಕು.

ಮಡಿಕೇರಿಯಲ್ಲಿ ಕಾನೂನು ಕಾಲೇಜು ಆರಂಭಿಸಲು ಪ್ರಯತ್ನಿಸಲಾಗುವದು ಹಾಗೂ ಸರ್ಕಾರದಿಂದ ಸೌಲಭ್ಯವನ್ನು ದೊರಕಿಸಿ ಕೊಡುತ್ತೇನೆ ಎಂದು ವೀಣಾ ಅಚ್ಚಯ್ಯ ತಿಳಿಸಿದರು. ಮಂಗಳೂರು ವಿವಿಯ ಕುಲಸಚಿವ ಬಿ. ಎಸ್. ನಾಗೇಂದ್ರ ಪ್ರಕಾಶ ಮಾತನಾಡಿ ವಿದ್ಯಾರ್ಥಿಗಳ ಕೂಗಿಗೆ ದ್ವನಿಗೂಡಿಸಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿಗೆ ಇನ್ನೂ ಉತ್ತಮವಾದ ಕೆಲಸ ಮಾಡಬೇಕಾಗಿದೆ. 100 ಗಿಡಗಳನ್ನು ನೆಡುವ ಮೂಲಕ ಫೀಲ್ಡ್ ಮಾರ್ಷಲ್ ಕಾಲೇಜನ್ನು ಹಸಿರುಮಯ ವಾತಾವರಣ ನಿರ್ಮಾಣ ಮಾಡಲು ಇಚ್ಚಿಸುತ್ತೇನೆ. ಮೊದಲ ಪ್ರಯತ್ನ ಈ ಕಾಲೇಜಿನಿಂದಲೇ ಆಗಲಿ ಎಂದು ಅವರು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ ಮಾತನಾಡಿ ಕಾಲೇಜಿಗೆ ಕೊಠಡಿಗಳ ಕೊರತೆ ಇತ್ತು. ಅದು ಬಹುದಿನಗಳ ನಂತರ ನನಸಾಗಿದೆ ಎಂದು ಹೇಳಿದರು. ಗುತ್ತಿಗೆದಾರ ರವೀಂದ್ರ ರೈ, ಪ್ರಾಧ್ಯಾಪಕರಾದ ಕಮಲ, ಅಲೋಕ್, ಇಂದಿರಾ, ಸಿಂಡಿಕೇಟ್ ಸದಸ್ಯರಾದ ಭಾಗೀರತಿ, ಆನಂದ, ಪ್ರಾರ್ಥನೆ ಮಾಡಿದ ಕಾವ್ಯ ಕೆ.ಜಿ, ವಿದ್ಯಾರ್ಥಿಗಳು ಮತ್ತು ಇತರರು ಇದ್ದರು.