ಸೋಮವಾರಪೇಟೆ,ಮಾ.5: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಳಿ ಇರುವ ಬಿಸಿಎಂ ವಿದ್ಯಾರ್ಥಿ ವಸತಿ ನಿಲಯಗಳಿಗೆ ದಿಢೀರ್ ಭೇಟಿ ನೀಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಹಾಸ್ಟೆಲ್‍ನ ಅವ್ಯವಸ್ಥೆ ಕಂಡು ಗರಂ ಆದರು.

ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕರು, ನಂತರ ಸಮೀಪವೇ ಇರುವ ಬಿಸಿಎಂ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದರು.

ಈ ಸಂದರ್ಭ ನಿಲಯದ ಮೇಲ್ವಿಚಾರಕರು ಇಲ್ಲದ್ದನ್ನು ಕಂಡ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಹಾಸ್ಟೆಲ್‍ನಲ್ಲಿ ತಂಗಿರುವ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ ಅಪ್ಪಚ್ಚು ರಂಜನ್, ನಿಲಯದ ಅಡುಗೆ ಮನೆ, ಕೊಠಡಿ, ಪಡಿತರಗಳನ್ನು ಪರಿಶೀಲಿಸಿದರು.

ಇತ್ತೀಚೆಗೆ ಸಮರ್ಪಕವಾಗಿ ಊಟ, ಮೊಟ್ಟೆ, ಬಾಳೆಹಣ್ಣು ವಿತರಿಸದ ಬಗ್ಗೆ ವಿದ್ಯಾರ್ಥಿನಿಯರು ಶಾಸಕರ ಬಳಿ ದೂರಿದರು. ತಕ್ಷಣ ಬಿಸಿಎಂ ಅಧಿಕಾರಿಗೆ ದೂರವಾಣಿ ಕರೆ ಮಾಡಿದ ರಂಜನ್, ಅವ್ಯವಸ್ಥೆಯ ವಿರುದ್ಧ ಪ್ರಶ್ನಿಸಿದರಲ್ಲದೇ, ತಕ್ಷಣ ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳಿಗೆ ನಿಗದಿತ ಪ್ರಮಾಣದಲ್ಲಿ ಊಟ ಒದಗಿಸಬೇಕೆಂದು ಸೂಚಿಸಿದರು.

ಕಳೆದ ಕೆಲ ತಿಂಗಳುಗಳಿಂದ ಬಿಪಿಎಲ್ ಅಕ್ಕಿ ಬರುತ್ತಿದ್ದುದು ಸ್ಥಗಿತಗೊಂಡಿರುವದರಿಂದ ಮುಕ್ತ ಮಾರುಕಟ್ಟೆಯಲ್ಲಿ ಖರೀದಿ ಮಾಡಲಾಗುತ್ತಿದೆ. ಓರ್ವ ವಿದ್ಯಾರ್ಥಿಗೆ 40 ರೂಪಾಯಿಯಲ್ಲಿ ದಿನದ ಊಟ, ತಿಂಡಿಗೆ ವ್ಯವಸ್ಥೆ ಮಾಡಬೇಕಾಗಿದೆ ಎಂದು ಬಿಸಿಎಂ ವಿಸ್ತರಣಾಧಿಕಾರಿಗಳು ಅಳಲು ತೋಡಿಕೊಂಡರು. ಬೆಳಗ್ಗೆ ಮಾಡಿದ ತಿಂಡಿಯನ್ನೇ ಮಧ್ಯಾಹ್ನಕ್ಕೆ, ಮಧ್ಯಾಹ್ನ ಮಾಡಿದ ಊಟವನ್ನೇ ರಾತ್ರಿಗೂ ನೀಡುತ್ತಿರುವ ಬಗ್ಗೆ ಕೆಲ ವಿದ್ಯಾರ್ಥಿಗಳು ಶಾಸಕರ ಗಮನ ಸೆಳೆದರು. ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಬೇಕು. ನಿಗದಿತ ಪ್ರಮಾಣದಲ್ಲಿ ಊಟ ನೀಡಬೇಕು. ಅವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವದು ಎಂದು ರಂಜನ್ ತಿಳಿಸಿದರು.