ಮಡಿಕೇರಿ, ಮಾ. 5: ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ 39ನೇ ರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಮಡಿಕೇರಿ ಸನಿಹದ ಕಡಗದಾಳುವಿನ ಕೆಚ್ಚೆಟ್ಟೀರ ರೇಷ್ಮಾ ದೇವಯ್ಯ ಅವರು ಉತ್ತಮ ಸಾಧನೆ ತೋರಿ ಮುಂದಿನ ಸೆಪ್ಟೆಂಬರ್‍ನಲ್ಲಿ ಸ್ಪೇನ್ ರಾಷ್ಟ್ರದ ಮಲಗದಲ್ಲಿ ನಡೆಯಲಿರುವ ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. 40 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಭಾರದ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಗಳಿಸಿ ಇವರು ಈ ಸಾಧನೆ ಮಾಡಿದ್ದಾರೆ. ಈ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ 44ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಸೌಂದರ್ಯ ಸ್ಪರ್ಧೆಯಲ್ಲೂ ಪ್ರಥಮ

ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದೊಂದಿಗೆ ಈ ಸ್ಪರ್ಧೆಯೊಂದಿಗೆ ಏರ್ಪಡಿಸುವ ಸೌಂದರ್ಯ ಸ್ಪರ್ಧೆಯಲ್ಲೂ ರೇಷ್ಮಾ ದೇವಯ್ಯ ಅವರು ಪ್ರಥಮ ಸ್ಥಾನಗಳಿಸಿ ಗಮನ ಸೆಳೆದಿದ್ದಾರೆ.

ಹಲವು ಸ್ಪರ್ಧಿಗಳು ಭಾಗವಹಿಸಿದ್ದ ಈ ಸೌಂದರ್ಯ ಸ್ಪರ್ಧೆಯಲ್ಲಿ ಕೊಡವ ಸಾಂಪ್ರದಾಯಿಕ ಧಿರಿಸಿನಲ್ಲಿ ಪಾಲ್ಗೊಂಡ ಇವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ರೇಷ್ಮಾ ಕಡಗದಾಳು ನಿವಾಸಿ ಮಾಜಿ ರಾಷ್ಟ್ರೀಯ ಬಾಸ್ಕೆಟ್‍ಬಾಲ್ ಆಟಗಾರ ಕೆಚ್ಚೆಟ್ಟೀರ ರವಿ ದೇವಯ್ಯ ಅವರ ಪತ್ನಿ.