ಮಡಿಕೇರಿ, ಫೆ. 5: ಇಂದಿನ ಕಾಲಘಟ್ಟದಲ್ಲಿ ಮೌಲ್ಯಯುತ ಬರಹಗಳು ಹೆಚ್ಚಾಗಬೇಕು. ಹಾಗಾದಾಗ ಮಾತ್ರ ಸಮಾಜದಲ್ಲಿ ಹೊಸ ಅಲೆಯೊಂದಿಗೆ ಸೃಜನಶೀಲ ಬರಹಗಳು ಕಾಣಲು ಸಾಧ್ಯವಾಗಲಿದೆ ಎಂದು ಸಾಹಿತಿ ಹೊಸೂರು ಸಂಗೀತ ರವಿರಾಜ್ ಅಭಿಪ್ರಾಯಿಸಿದರು.
ಇಲ್ಲಿನ ಸರಸ್ವತಿ ಡಿ.ಎಚ್. ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನೀಡಲಾಗುವ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಹಿಂದೆ ಸಾಹಿತ್ಯ ಕ್ಷೇತ್ರದ ಬರಹಗಳು ಸಮಾಜದ ಮೌಲ್ಯವನ್ನು ಎತ್ತಿ ಹಿಡಿಯುತ್ತಿದ್ದವು ಆ ನಿಟ್ಟಿನಲ್ಲಿ ಬರಹಗಳು ಬರಬೇಕು. ಇನ್ನೂ ಉತ್ತಮ ಸಾಹಿತ್ಯ ರಚನೆ ಮಾಡಬೇಕು ಎಂದು ಹೇಳಿದರು.
ಕೊಡಗಿನ ಗೌರಮ್ಮ ಪುಸ್ತಕಗಳನ್ನು ಮರು ಮುದ್ರಣ ಮಾಡುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಮುಂದಾಗಬೇಕಿದೆ ಎಂದು ಸಲಹೆ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಕಸ್ತೂರಿ ಗೋವಿಂದಮ್ಮಯ್ಯ ಮಾತನಾಡಿ, ಸಾಹಿತ್ಯ ಮನಸ್ಸಿನ ನೋವನ್ನು ಮರೆಸುತ್ತದೆ. ಬರವಣಿಗೆ ಮೂಲಕ ಸಮಾಜದ ಆಗುಹೋಗುಗಳನ್ನು ದಾಖಲಿಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕೊಡಗಿನ ಗೌರಮ್ಮ ಅವರು ಹಲವು ಕಥೆ, ಕವನ ಬರೆಯುವ ಮೂಲಕ ಇಡೀ ಸಮಾಜದ ಅಂಕುಡೊಂಕುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಯುವ ಜನರು ಸಾಹಿತ್ಯದ ರುಚಿ, ರಸ ಮತ್ತು ಒಲವನ್ನು ಬೆಳೆಸಿಕೊಳ್ಳುವಂತಾಗಬೇಕು ಎಂದರು.
ಮುಖ್ಯ ಭಾಷಣ ಮಾಡಿದ ಸ್ಮಿತ ಅಮೃತರಾಜ್ ಮಾತನಾಡಿ ಗೌರಮ್ಮನ ಕಥೆಗಳಲ್ಲಿ ಪ್ರಶಸ್ನಿಸುವ, ಪ್ರತಿಭಟಿಸುವ ಹಾಗೂ ಸಮಾಜದ ಓರೆಕೋರೆಗಳನ್ನು ಸಾಹಿತ್ಯದ ಮೂಲಕ ಬೆಳಕು ಚೆಲ್ಲಿದ್ದಾರೆ ಎಂದು ಹೇಳಿದರು.
ಸರಸ್ವತಿ ಡಿ.ಇಡಿ ಕಾಲೇಜಿನ ಪ್ರಾಂಶುಪಾಲ ಶ್ರೀಕುಮಾರ್ ಮಾತನಾಡಿ, ಸಮಾಜದ ನ್ಯೂನತೆಗಳನ್ನು ಸಾಹಿತ್ಯ ಮೂಲಕ ಗಮನ ಸೆಳೆಯಬಹುದಾಗಿದೆ. ಆ ನಿಟ್ಟಿನಲ್ಲಿ ಕೊಡಗಿನ ಗೌರಮ್ಮ ಅವರ ಕೃತಿಯನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದು ಸಲಹೆ ಮಾಡಿದರು.
ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಜಿ. ಆನಂತಶಯನ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯ ಬರವಣಿಗೆ ಬೆಳೆಸಿಕೊಳ್ಳಬೇಕು ಹಾಗೂ ಎಲ್ಲರೊಂದಿಗೆ ಹಂಚಿಕೊಳ್ಳಬೇಕು. ವೈಜ್ಞಾನಿಕ ಬರಹಗಳು ಬರೆಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ; ಮಾರ್ಚ್ 5 ಕೊಡಗಿನ ಗೌರಮ್ಮ ಅವರು ಹುಟ್ಟಿದ ದಿನವಾಗಿದ್ದು, ಸಾಹಿತ್ಯ ದಿನಾಚರಣೆ ಯಾಗಿ ಆಚರಿಸಲಾಗುತ್ತಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮೂಲಕ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗುತ್ತಿದೆ ಎಂದು ಅವರು ಹೇಳಿದರು.
ಬೈತಡ್ಕ ಜಾನಕಿ ಬೆಳ್ಯಪ್ಪ ಅವರು ಮಾತನಾಡಿದರು. ಇದೇ ಸಂದರ್ಭ ಕಸಾಪದಿಂದ ಏರ್ಪಡಿಸಲಾಗಿದ್ದ ಕಥಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಸಿರಿಗೌರಿ (ಪ್ರಥಮ), ಐಶ್ವರ್ಯ (ದ್ವಿತೀಯ), ವಿಶಾಂಕ್ (ತೃತೀಯ), ಶ್ರಾವಣಿ (ಸಮಾಧಾನಕರ ಬಹುಮಾನ) ನೀಡಲಾಯಿತು. ಮಡಿಕೇರಿ ತಾಲೂಕು ಕಸಾಪ ಕಾರ್ಯದರ್ಶಿ ಕಿಶನ್ ಪೂವಯ್ಯ, ದಿವಾಕರ ಇತರರು ಇದ್ದರು. ಈಲ್ಲಾ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್ ಸ್ವಾಗತಿಸಿದರು. ಸುನಿತಾ ಲೋಕೇಶ್ ನಿರೂಪಿಸಿದರು. ಗೌರವ ಕೋಶಾಧಿಕಾರಿ ಮುರಳೀಧರ ವಂದಿಸಿದರು.