ಶ್ರೀಮಂಗಲ, ಮಾ. 5: ದ.ಕೊಡಗಿನ ಟಿ.ಶೆಟ್ಟಿಗೇರಿ ಗ್ರಾ.ಪಂ ವ್ಯಾಪ್ತಿಯ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ 24 ಗಂಟೆ ಅವಧಿಯಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಮೂರು ಹುಲಿ ಧಾಳಿ ಪ್ರಕರಣದಿಂದ 3 ಹಸುಗಳು ಸಾವಿಗೀಡಾದ ಬೆನ್ನಲ್ಲೇ ಗ್ರಾಮದಲ್ಲಿ ಹುಲಿ ಸೆರೆಗೆ ಬೋನು ಇರಿಸಲಾಗಿದೆ. ಆದರೆ, ಬೋನು ಇರಿಸಿ 2 ರಾತ್ರಿ ಕಳೆದರೂ ಹುಲಿ ಸೆರೆಯಾಗಿಲ್ಲ.

ವೆಸ್ಟ್ ನೆಮ್ಮಲೆ ಗ್ರಾಮದ ಚೆಟ್ಟಂಗಡ ನಂಜಪ್ಪ (ರಾಜ) ಅವರ ಜಾಗದಲ್ಲಿ ಬೋನು ಇರಿಸಲಾಗಿದ್ದು, ತಾ. 3ರ ರಾತ್ರಿ ಹುಲಿ ಸ್ಥಳಕ್ಕೆ ಬಂದ ಹುಲಿ ಜಾನುವಾರಿನ ಕಳೆಬರÀವನ್ನು ತಿಂದಿರುವದು ಗೋಚರಿಸಿದೆ. 4ರ ರಾತ್ರಿ ಹುಲಿ ಬೋನು ಇರಿಸಿದ ಸ್ಥಳಕ್ಕೆ ಬಂದಿರುವದಕ್ಕೆ ಯಾವದೇ ಕುರುಹು ದೊರೆತಿಲ್ಲ.

ಅಸಮಾಧಾನ: ಹುಲಿ ಧಾಳಿ ನಡೆಸಿದ ಸ್ಥಳದಲ್ಲಿ ಬೋನು ಇರಿಸಲಾಗಿದ್ದು ಬೋನಿನೊಳಗೆ ಹಸುವಿನ ಕಳೆಬರÀವನ್ನು ಇರಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆದರೆ ಬೋನು ಇರಿಸಿದ ಮೊದಲ ದಿನ ಬೋನಿನ ಬಾಗಿಲನ್ನು ತೆರೆಯದೆ ಅರಣ್ಯ ಇಲಾಖೆ ಸ್ಥಳದಿಂದ ತೆರಳಿದೆ. 2ನೇ ದಿನ ಬೋನಿನ ಬಾಗಿಲು ತೆರೆಯಲಾಗಿದೆ ಆದರೆ ಬೋನು ಇರಿಸಿದ ಸುಮಾರು 60-80 ಅಡಿ ದೂರದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೆಂಕಿ ಹಾಕಿಕೊಂಡು ಕಾವಲು ಕಾಯುತ್ತಿದ್ದರು.

ಈ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದು ಬೋನು ಇರಿಸಿದ ಮೊದಲ ದಿನವೇ ಬೋನಿನ ಬಾಗಿಲನ್ನು ತೆರೆದು ಇಟ್ಟಿದ್ದರೆ ಹುಲಿ ಸೆರೆಯಾಗುವ ಅವಕಾಶಗಳು ಇದ್ದವು. ಆದರೆ ಹಸುವಿನ ಕಳೆಬರದ ಚಿಕ್ಕ ಬಾಗವನ್ನು ಮಾತ್ರ ಬೋನಿನ ಒಳಗಡೆ ಇರಿಸಿ ಹೆಚ್ಚಿನ ಬಾಗವನ್ನು ಬೋನಿನ ಹೊರಗಡೆ ಇಟ್ಟು ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತೆರಳಿದ್ದರು. ಇದರಿಂದ ಬೋನಿನ ಹೊರಗಡೆ ಇದ್ದ ಕಳೆಬರವನ್ನು ಬಹುತೇಕ ಹುಲಿ ತಿಂದಿದೆ. ಇದರಿಂದ ಹುಲಿ ಸೆರೆಯಾಗುವ ಅವಕಾಶವನ್ನು ಅರಣ್ಯ ಇಲಾಖೆಯೇ ತಪ್ಪಿಸಿದೆ. ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಅನುಮತಿ ದೊರೆತಿಲ್ಲ. ಕೇವಲ ಜನರನ್ನು ಮೆಚ್ಚಿಸಲು ಬೋನು ಇರಿಸಿದ್ದರು. ಬೋನಿಗೆ ಹುಲಿ ಸೆರೆಯಾಗದಂತೆ ಅರಣ್ಯ ಇಲಾಖೆಯಿಂದಲೆ ತಡೆ ಒಡ್ಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮಸ್ಥರ ಒತ್ತಾಯದ ಮೇರೆಗೆ 2ನೇ ದಿನ ಬೋನಿನ ಬಾಗಿಲನ್ನು ರಾತ್ರಿ ತೆರೆಯಲಾಗಿತ್ತಾದರೂ, ಸಮೀಪದಲ್ಲೇ ಅರಣ್ಯ ಇಲಾಖೆಯಿಂದ ಬೆಂಕಿ ಹಾಕಿ ಹುಲಿ ಬೋನಿಗೆ ಬಂದು ಸೆರೆಯಾಗದಂತೆ ಅಡಚಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಪ್ರತಿಭಟನೆ ನಿರ್ಧಾರ: ಹುಲಿ ಸೆರೆಗೆ ಜನರ ಕಣ್ಣೊರೆಸುವ ಪ್ರಯತ್ನವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಪ್ರಾಮಾಣಿಕ ಪ್ರಯತ್ನ ಕೈಗೊಂಡಿಲ್ಲ. ಅಲ್ಲದೆ, ಹುಲಿ ಧಾಳಿಯಿಂದ ಸಂತ್ರಸ್ತ ರೈತರಿಗೆ ಕೂಡಲೆ ನಷ್ಟ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ತಾ. 12 ರಂದು ಶ್ರೀಮಂಗಲ ವಲಯ ಅರಣ್ಯ ಕಛೇರಿ ಎದುರು ಪ್ರತಿಭಟನೆ ನಡೆಸುವದಾಗಿ ಸಂತ್ರಸ್ತ ರೈತರ ಪರವಾಗಿ ಟಿ.ಶೆಟ್ಟಿಗೇರಿ ಗ್ರಾ.ಪಂ ಸದಸ್ಯ ಚೆಟ್ಟಂಗಡ ರಂಜು ಕರುಂಬಯ್ಯ ತಿಳಿಸಿದ್ದಾರೆ.

ಎಸಿಎಫ್ ಪ್ರತಿಕ್ರಿಯೆ: ತಿತಿಮತಿ ವಿಭಾಗದ ಎಸಿಎಫ್ ಶ್ರೀಪತಿಯವರು ಪ್ರತಿಕ್ರಿಯೆ ನೀಡಿದ್ದು, ಹುಲಿಯ ಚಲನ-ವಲನವನ್ನು ಗಮನಿಸಿ ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲಾಗು ತ್ತಿದೆ. ಹುಲಿ ಹಿಡಿಯಲು ಅನುಮತಿ ಇದೆ. ಅದಕ್ಕೂ ಮೊದಲು ಗಾಯ ಗೊಂಡಿರುವ ಹುಲಿ ಅಥವಾ ವಯಸ್ಸಾಗಿರುವ ಹುಲಿಯಾಗಿದ್ದರೆ ಅರಣ್ಯಕ್ಕೆ ತೆರಳಲು ಸಾಧ್ಯವಿಲ್ಲ. ಆರೋಗ್ಯವಂತ ಹುಲಿಯಾದರೆ ತನ್ನಷ್ಟಕ್ಕೆ ತಾನೇ ವಾಪಸ್ಸು ಅರಣ್ಯಕ್ಕೆ ತೆರಳುತ್ತದೆ. ಹುಲಿ ಹಾವಳಿಯನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗು ತ್ತಿದೆ ಎಂದು ಹೇಳಿದ್ದಾರೆ.

ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಹೆಚ್.ಎಸ್.ಗಂಗಾಧರ್ ಪ್ರತಿಕ್ರಿಯಿಸಿ, ಈಗಾಗಲೇ ಹುಲಿ ಧಾಳಿ ಮಾಡಿರುವ ಕುಮಟೂರು ಗ್ರಾಮದಲ್ಲಿ ಹುಲಿ ಸೆರೆಗೆ ಒಂದು ಬೋನು ಇರಿಸ ಲಾಗಿದೆ. ಬೋನಿನ ಕೊರತೆ ಯಿಂದ ನಾಗರಹೊಳೆ ವಲಯದಿಂದ ಹುಲಿ ಸೆರೆ ಹಿಡಿಯ ಲೆಂದೇ ಮಾಡಿದ ಬೋನನ್ನು ನೆಮ್ಮಲೆ ಗ್ರಾಮದಲ್ಲಿ ಇರಿಸಲಾಗಿದೆ. ಈ ಬೋನು ಹುಲಿ ಸೆರೆಗೆ ಸೂಕ್ತವಾಗಿದೆ ಎಂದು ಹೇಳಿದ್ದಾರೆ. ಈ ಸಂದರ್ಭ ಗ್ರಾಮಸ್ಥರಾದ ಚೆಟ್ಟಂಗಡ ಡಾಲಿ, ರಾಜ ನಂಜಪ್ಪ, ಚೆಟ್ಟಂಗಡ ಮಹೇಶ್ ಮಂದಣ್ಣ, ತರುಣ್ ಮತ್ತಿತರರು ಹಾಜರಿದ್ದರು.