ಸುಂಟಿಕೊಪ್ಪ, ಮಾ. 10: ಕೆಲ ದಿನಗಳ ಹಿಂದೆ ನಿಧನ ಹೊಂದಿದ್ದ ಅಜ್ಜಿಯ ತಿಥಿಕಾರ್ಯವನ್ನು ಮುಗಿಸಿ ಸಂಬಂಧಿಕ ಯುವಕನೊಂದಿಗೆ ಕಾರ್ಯನಿಮಿತ್ತ ಕುಶಾಲನಗರಕ್ಕೆ ತೆರಳುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿ ಮಗುಚಿಕೊಂಡ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟು, ಮತ್ತೊಬ್ಬ ಗಂಭೀರ ಗಾಯಗೊಂಡ ದುರ್ಘಟನೆ ಸುಂಟಿಕೊಪ್ಪ ಸಮೀಪದ ಕೂರ್ಗ್‍ಹಳ್ಳಿ ತೋಟದ ಬಳಿ ಇಂದು ಸಂಜೆ ನಡೆದಿದೆ.

ಸುಂಟಿಕೊಪ್ಪದ ಪಂಪ್‍ಹೌಸ್ ಬಡಾವಣೆಯ ನಿವಾಸಿ ಹಾಗೂ ಮಡಿಕೇರಿ ಬಿಎಸ್‍ಎನ್‍ಎಲ್ ಉದ್ಯೋಗಿ ಸೋಮಯ್ಯ ಎಂಬವರ ಪುತ್ರ ಕೌಶಿಕ್ (27) ಮೃತಪಟ್ಟಿರುವ ದುರ್ದೈವಿ. ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ವೊಕ್ಸ್‍ವ್ಯಾಗನ್‍ನ ಪೋಲೊ ಕಾರು (ಕೆಎ 12 ಜೆಡ್ 9247) ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿಯಾಗಿ ನಿಯಂತ್ರಣಕ್ಕೆ ಬಾರದೆ ಪಲ್ಟಿ ಹೊಡೆದ ಕಾರು ತೋಟದೊಳಕ್ಕೆ ಬೋರಲಾಗಿ ಮಗುಚಿಕೊಂಡಿದೆ. ಕಾರು ಮಗುಚಿ ತೋಟದ ತಂತಿ ಬೇಲಿ ಮತ್ತು ಕಲ್ಲಿನ ಕಂಬಕ್ಕೆ ಹೊಡೆದ ಪರಿಣಾಮ ಚಾಲಕ ಕೌಶಿಕ್ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದೆ. ಜೀವನ್ಮರಣ ಸ್ಥಿತಿಯಲ್ಲಿದ್ದ ಆತನನ್ನು ಪ್ರತ್ಯಕ್ಷದರ್ಶಿಗಳು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸುವ ಸಂದರ್ಭ ದಾರಿ ಮದ್ಯೆ ಮೃತಪಟ್ಟಿದ್ದಾನೆ.ಮತ್ತೋರ್ವ ಆತನ ಸಂಬಂಧಿ ರಿತೇಶ್ ( 34) ಭುಜ, ತಲೆ, ಕೈಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈತ ಪುತ್ತೂರು ನಿವಾಸಿಯೆಂದು ಗೊತ್ತಾಗಿದೆ.

ಸ್ಥಳಕ್ಕೆ ಸುಂಟಿಕೊಪ್ಪ ಪಿಎಸ್‍ಐ ಜಯರಾಮ್ ಹಾಗೂ ಸಿಬ್ಬಂದಿ ತೆರಳಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಕೌಶಿಕ್ ಮಂಗಳೂರಿನಲ್ಲಿ ಖಾಸಗಿ ಉದ್ದಿಮೆಯೊಂದರಲ್ಲಿ ಉದ್ಯೋಗಿಯಾಗಿದ್ದ. ವಿಷಯ ತಿಳಿಯುತ್ತಿದ್ದಂತೆ ಆಗಷ್ಟೇ ಸೋಮಯ್ಯ ಅವರ ಮನೆಯಲ್ಲಿ ಜರುಗಿದ ಕಾರ್ಯದಲ್ಲಿ ಭಾಗಿಯಾಗಿ ಹಿಂತೆರಳಿದ್ದ ಬಿಎಸ್‍ಎನ್‍ಎಲ್ ಉದ್ಯೋಗಿಗಳು ಹಾಗೂ ಮೃತರ ಸಂಬಂಧಿಗಳು ಜಿಲ್ಲಾ ಆಸ್ಪತ್ರೆಗೆ ಧಾವಿಸಿ ರೋಧಿಸುತ್ತಿದ್ದ ದೃಶ್ಯ ಎದುರಾಯಿತು.